ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಡೆಂಘೀ ಹರಡುವಿಕೆಯನ್ನು ತಡೆಯುವ ಸಲುವಾಗಿ ಮನೆ-ಮನೆ ಸಮೀಕ್ಷೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣ ನಿಯಂತ್ರಿಸುವ ಕುರಿತು ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟು ವಲಯಗಳಲ್ಲಿ ಆಯಾ ವಲಯ ವ್ಯಾಪ್ತಿಯಲ್ಲಿ ಆರೋಗ್ಯ ಪರಿವೀಕ್ಷರು, ಆಶಾ ಕಾರ್ಯಕರ್ತೆಯರು, ಎಎನ್‌ಎಂ ಹಾಗೂ ಲಿಂಕ್ ವರ್ಕರ್ಸ್‌ಗಳ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿದ್ದು, ಒಂದು ಸಾವಿರ ಮನೆಗೆ ಒಂದು ಬ್ಲಾಕ್ ರಚಿಸಿಕೊಳ್ಳುವುದಕ್ಕೆ ಸೂಚಿಸಲಾಗಿದೆ. ಈ ಮನೆಗಳಿಗೆ ತಂಡ ಭೇಟಿ ನೀಡಿ ಲಾರ್ವಾ ಇರುವ ತಾಣಗಳನ್ನು ಗುರುತಿಸುವುದು. ಡೆಂಘೀ ಬಗ್ಗೆ ಅರಿವು ಮೂಡಿಸುವುದು ಹಾಗೂ ಜ್ವರ ಇರುವುದು ಕಂಡು ಬಂದವರನ್ನು ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸುವುದು ಸೇರಿದಂತೆ ಸಮಗ್ರವಾಗಿ ಮನೆ-ಮನೆ ಸಮೀಕ್ಷೆ ನಡೆಸಿ ವರದಿ ನೀಡಲು ನಿರ್ದೇಶಿಸಲಾಗಿದೆ ಎಂದರು.
15 ದಿನಕ್ಕೊಮ್ಮೆ ಮನೆ-ಮನೆ ಭೇಟಿ:ಪಾಲಿಕೆ ವ್ಯಾಪ್ತಿಯಲ್ಲಿ ಬರುವ 28 ಲಕ್ಷ ಮನೆಗಳ ಪೈಕಿ, 14 ಲಕ್ಷ ಮನೆಗಳು ಬಡ ವರ್ಗವಿರುವ ಪ್ರದೇಶ, ಜನ ಸಂಖ್ಯೆ ಹೆಚ್ಚಿರುವ ಪ್ರದೇಶ ಹಾಗೂ ತಗ್ಗು ಪ್ರದೇಶಗಳಲ್ಲಿರುವ 14 ಲಕ್ಷ ಮನೆಗಳಿಗೆ 15 ದಿನಕ್ಕೊಮ್ಮೆ ಭೇಟಿ ನೀಡಿ ಲಾರ್ವಾ ಉತ್ಪತ್ತಿ ತಾಣಗಳು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುವುದು. ಮನೆ-ಮನೆ ಸಮೀಕ್ಷೆ ಮಾಡುವ ಸಲುವಾಗಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳಲು ಕ್ರಮವಹಿಸಲಾಗುತ್ತಿದೆ ಎಂದರು.
ವಲಯವಾರು ಮೈಕ್ರೋ ಪ್ಲಾನ್ ಮಾಡಿಕೊಂಡು ಡೆಂಘೀ ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ಸೊಳ್ಳೆ ನಿಯಂತ್ರಣಕ್ಕೆ ಲಾರ್ವಾ ಉತ್ರತ್ತಿಯಾಗುವ ತಾಣಗಳನ್ನು ಗುರುತಿಸಿ ನಾಶಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.ಕಳೆದ ವರ್ಷಕ್ಕಿಂತ ಹೆಚ್ಚು ಪ್ರಕರಣ:
ನಗರದಲ್ಲಿ 2024 ಜನವರಿಯಿಂದ ಜೂನ್‌ವರೆಗೆ 1,230 ಪ್ರಕರಣಗಳು ಕಂಡು ಬಂದಿದ್ದು, ಕಳೆದ ವರ್ಷ ಇದೇ ಅವಧಿಗೆ 732 ಪ್ರಕರಣ ಮಾತ್ರ ಕಾಣಿಸಿಕೊಂಡಿದ್ದವು. ಈ ಬಾರಿ ಹೆಚ್ಚು ಪ್ರಕರಣ ಕಾಣಿಸಿ ಕೊಂಡಿದೆ. ನಗರದಲ್ಲಿ ಮಳೆ ಮತ್ತು ಬಿಸಿಲು ವಾತಾವರಣ ಹಾಗೂ 26 ಡಿಗ್ರಿ ಸೆಲ್ಸಿಯಸ್‌ನಿಂದ 30 ಡಿಗ್ರಿ ಸೆಲ್ಸಿಯಸ್‌ವರೆಗೆ ಬಿಸಿಲು ಇರುವುದರಿಂದ ಲಾರ್ವಾ ಉತ್ಪತ್ತಿಗೆ ಸಹಕಾರವಾಗಿದೆ. ಹಾಗಾಗಿ, ಹೆಚ್ಚಿನ ಪ್ರಕರಣ ಕಾಣಿಸಿಕೊಂಡಿವೆ ಎಂದು ಮಾಹಿತಿ ನೀಡಿದರು.ಮಹದೇವಪುರ, ದಕ್ಷಿಣ ವಲಯ ಹಾಗೂ ಪೂರ್ವ ವಲಯಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಎಲ್ಲೆಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿದೆಯೋ ಅಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಡೆಂಘೀ ಪರೀಕ್ಷೆಗೆ ಎನ್ ಎಸ್ 1 ಟೆಸ್ಟ್ ಕಿಟ್:ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜ್ವರ ಪ್ರಕರಣಗಳು ಕಂಡುಬಂದರೆ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎನ್.ಎಸ್.1 ಟೆಸ್ಟ್ ಕಿಟ್ ಮೂಲಕ ಪರೀಕ್ಷೆ ಮಾಡಿ ಖಚಿತವಾದ ಬಳಿಕ ರಕ್ತದ ಮಾದರಿ ಸಂಗ್ರಹಿಸಿಕೊಂಡು ಪ್ರಯೋಗಾಲಯಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಸಮನ್ವಯದಿಂದ ಕೆಲಸ:ಡೆಂಘೀ ಪ್ರಕರಣಗಳನ್ನು ನಿಯಂತ್ರಿಸಲು ಮನೆ-ಮನೆಗಳಿಗೆ ಭೇಟಿ ನೀಡುವ ಜತೆಗೆ ತೋಟಗಾರಿಕಾ ವಿಭಾಗ, ಅರಣ್ಯ ವಿಭಾಗ, ಘನತ್ಯಾಜ್ಯ, ಬೃಹತ್ ನೀರುಗಾಲುವೆ, ರಸ್ತೆ ಮೂಲಭೂತ ಸೌಕರ್ಯ ವಿಭಾಗ ಸೇರಿದಂತೆ ಇನ್ನಿತರ ವಿಭಾಗಗಳ ಜೊತೆ ವಲಯವಾರು ಸಮನ್ವಯ ಸಾಧಿಸಿ ನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಿ ನೀರು ನಿಲ್ಲದಂತೆ ಕ್ರಮವಹಿಸಲಾಗುವುದು ಎಂದು ಹೇಳಿದರು.ಸಭೆಯಲ್ಲಿ ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್, ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ.ಕೆ.ಹರೀಶ್ ಕುಮಾರ್, ವಲಯ ಆಯುಕ್ತರಾದ ಆರ್.ಎಲ್ ದೀಪಕ್, ರಮೇಶ್, ವಿನೋತ್ ಪ್ರಿಯಾ, ರಮ್ಯಾ, ಕರೀಗೌಡ, ರಮ್ಯಾ, ಮುಖ್ಯ ಆರೋಗ್ಯಾಧಿಕಾರಿ, ಎಲ್ಲಾ ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಇಂದು ಡಿಸಿಎಂ ಸಭೆನಗರದಲ್ಲಿ ಡೆಂಘೀ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ದರು. ಬುಧವಾರ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಇದೀಗ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಸಲಿದ್ದಾರೆ.
ಸಭೆಯಲ್ಲಿ ಆರೋಗ್ಯ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಆರೋಗ್ಯ ವಿಭಾಗದ ವಿವಿಧ ಅಧಿಕಾರಿಗಳು ಭಾಗವಹಿಸಲಿದ್ದಾರೆ.ಡೆಂಘೀ ಪ್ರಕರಣಗಳ ವಿವರ (ಜನವರಿಯಿಂದ ಜೂನ್)
ವಲಯಪ್ರಕರಣಬೊಮ್ಮನಹಳ್ಳಿ122
ಪೂರ್ವ218ಮಹದೇವಪುರ386
ಆರ್.ಆರ್ ನಗರ75ದಕ್ಷಿಣ190
ಪಶ್ಚಿಮ141ಯಲಹಂಕ90
ದಾಸರಹಳ್ಳಿ8ಒಟ್ಟು1,230ಬಾಕ್ಸ್
ಈ ಹಿಂದಿನ ವರ್ಷಗಳ ಡೆಂಘೀ ವಿವರವರ್ಷಪ್ರಕರಣಗಳು
20199,43420201,127
20211,62920222,335
202311,13620241,230 (ಜೂನ್ ವರೆಗೆ)