ಡ್ರಗ್ಸ್‌ ಮುಕ್ತ ಕರ್ನಾಟಕಕ್ಕೆ ಯುವಸಮೂಹ ಪ್ರತಿಜ್ಞೆ

| Published : Jun 27 2024, 01:02 AM IST

ಡ್ರಗ್ಸ್‌ ಮುಕ್ತ ಕರ್ನಾಟಕಕ್ಕೆ ಯುವಸಮೂಹ ಪ್ರತಿಜ್ಞೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ-ಧಾರವಾಡದಲ್ಲಿ ದಿನೇ ದಿನೇ ಮಾದಕ ವಸ್ತು ಸೇವನೆ, ಅಕ್ರಮ ಮಾದಕ ವಸ್ತುಗಳ ಕಳ್ಳಸಾಗಾಣಿಕೆ, ಗುಟ್ಕಾ, ಡ್ರಗ್ಸ್‌, ಗಾಂಜಾದಂತಹ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಈ ಮೂಲಕ ಅಕ್ರಮ ಚಟುವಟಿಕೆಗಳು ದಿನೇ ದಿನೇ ಹೆಚ್ಚಾಗುತ್ತಿದೆ.

ಹುಬ್ಬಳ್ಳಿ:

ಯುವಸಮೂಹ ಮಾದಕ ವಸ್ತುಗಳಿಗೆ ಬಲಿ ಆಗುತ್ತಿರುವುದನ್ನು ತಡೆಗಟ್ಟುವಲ್ಲಿ ಹು-ಧಾ ಮಹಾನಗರ ಪೊಲೀಸರು ದಿಟ್ಟ ಹೆಜ್ಜೆ ಇಟ್ಟಿದ್ದು, ಕಳೆದ ಒಂದು ತಿಂಗಳಿನಿಂದ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ದಿನೇ ದಿನೇ ಮಾದಕ ವಸ್ತು ಸೇವನೆ, ಅಕ್ರಮ ಮಾದಕ ವಸ್ತುಗಳ ಕಳ್ಳಸಾಗಾಣಿಕೆ, ಗುಟ್ಕಾ, ಡ್ರಗ್ಸ್‌, ಗಾಂಜಾದಂತಹ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಈ ಮೂಲಕ ಅಕ್ರಮ ಚಟುವಟಿಕೆಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಕುರಿತು ಎಲ್ಲೆಡೆ ಅಗತ್ಯ ಜಾಗೃತಿ ಕಾರ್ಯ ಕೈಗೊಂಡರೂ ಸಹ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಕಮೀಷನರೇಟ್‌ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದಾಗುವ ಹಾನಿಯ ಕುರಿತು ಮನವರಿಕೆ ಮಾಡಿಸಲಾಗುತ್ತಿದೆ. ಇದಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಅಲ್ಲದೇ ಬುಧವಾರ ಇಲ್ಲಿನ ಹೊಸೂರು ಬಸ್‌ ನಿಲ್ದಾಣದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಇದೇ ರೀತಿ ಅಂತಾರಾಷ್ಟ್ರೀಯ ಮಾದಕ ವಸ್ತು ಸೇವನೆ ಹಾಗೂ ಕಳ್ಳಸಾಗಾಣೆ ವಿರೋಧಿ ದಿನದ ಅಂಗವಾಗಿ ಮಹಾನಗರದಾದ್ಯಂತ ಶಾಲಾ-ಕಾಲೇಜುಗಳಿಗೆ ಆಯಾ ಠಾಣೆಯ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರಳಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಡ್ರಗ್ಸ್ ಮುಕ್ತ ಸಮಾಜ ನಿರ್ಮಿಸುವ ಧ್ಯೇಯೋಧ್ಯೇಶ ಒಳಗೊಂಡ ಪ್ರತಿಜ್ಞಾವಿಧಿ ಬೋಧಿಸಿ ಜಾಗೃತಿ ಮೂಡಿಸಿದರು.

16 ಸಾವಿರ ಮಕ್ಕಳಿಂದ ಪ್ರತಿಜ್ಞೆ:

ಡ್ರಗ್ಸ್‌, ಗಾಂಜಾ, ಗುಟ್ಕಾದಂತಹ ದುಶ್ಚಟಕ್ಕೆ ವಿದ್ಯಾರ್ಥಿಗಳೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಇದನ್ನರಿತ ಪೊಲೀಸ್‌ ಆಯುಕ್ತರು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಬುಧವಾರ ಒಂದೇ ದಿನ ಮಹಾನಗರದ 89 ಶಾಲಾ- ಕಾಲೇಜುಗಳ 16 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಪ್ರತಿಜ್ಞಾ ವಿಧಿಯಲ್ಲೇನಿದೆ?:

ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಲು, ಅದರಿಂದಾಗುವ ಅಪಾಯಗಳ ಬಗ್ಗೆ ಇತರರಿಗೆ ಅರಿವು ಮೂಡಿಸಲು ಹಾಗೂ ಮಾದಕ ದ್ರವ್ಯದ ದುರುಪಯೋಗದ ಹಿಡಿತದಿಂದ ಮುಕ್ತವಾದ ಸಮುದಾಯ ನಿರ್ಮಿಸಲು ನಾನು ಪ್ರತಿಜ್ಞೆ ಗೈಯುತ್ತೇನೆ ಎಂದು ಎಲ್ಲ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.ಅಭಿನಂದನೆ ಸಲ್ಲಿಸುವೆ

ಮಹಾನಗರ ಕಮೀಷನರೇಟ್‌ ವ್ಯಾಪ್ತಿಯಲ್ಲಿ ಹೆಚ್ಚಾಗುತ್ತಿರುವ ಮಾದಕ ವಸ್ತುಗಳ ಮಾರಾಟ, ಸೇವನೆ ತಡೆಗೆ ಈಗಾಗಲೇ ಪೊಲೀಸ್‌ ಇಲಾಖೆ ಕ್ರಮಕೈಗೊಂಡಿದೆ. ಮಕ್ಕಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಸಲಾಗುತ್ತಿದೆ. ಬುಧವಾರ ಒಂದೇ ದಿನ 16 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸುವ ಕಾರ್ಯಕೈಗೊಂಡ ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುವುದಾಗಿ ಪೊಲೀಸ್‌ ಆಯುಕ್ತೆ ರೇಣುಕಾ ಸುಕುಮಾರ್‌ ತಿಳಿಸಿದರು.