ಏಪ್ರಿಲ್ 21ರಿಂದ ಬೂತ್ ಮಟ್ಟದ ಅಧಿಕಾರಿಗಳಿಂದ ಮನೆಗೊಂದು ವೋಟರ್ ಗೈಡ್

| Published : Apr 13 2024, 01:03 AM IST

ಏಪ್ರಿಲ್ 21ರಿಂದ ಬೂತ್ ಮಟ್ಟದ ಅಧಿಕಾರಿಗಳಿಂದ ಮನೆಗೊಂದು ವೋಟರ್ ಗೈಡ್
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ. ೨೧ರಿಂದ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಮನೆ ಮನೆಗೆ ವೋಟರ್ ಸ್ಲಿಪ್ ಹಾಗೂ ಮನೆಗೊಂದು ವೋಟರ್ ಗೈಡ್ ವಿತರಣೆ ಮಾಡಲಾಗುತ್ತದೆ.

ಹಾವೇರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ. ೨೧ರಿಂದ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಮನೆ ಮನೆಗೆ ವೋಟರ್ ಸ್ಲಿಪ್ ಹಾಗೂ ಮನೆಗೊಂದು ವೋಟರ್ ಗೈಡ್ ವಿತರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷದಿಂದ ಅಧಿಕೃತವಾಗಿ ನೇಮಕಗೊಂಡ ಬೂತ್ ಮಟ್ಟದ ಏಜೆಂಟರಗಳು ಭಾಗವಹಿಸಿ ವಿತರಣಾ ಪ್ರಕ್ರಿಯೆಯನ್ನು ವೀಕ್ಷಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮತದಾರರ ಮಾಹಿತಿ ಚೀಟಿ ವಿತರಣೆ, ಎಲೆಕ್ಷನ್ ಬೂತ್ ನಿರ್ಮಾಣ, ಪೋಲಿಂಗ್ ಏಜೆಂಟ್‌ಗಳ ನೇಮಕ ಕುರಿತು ಹಾಗೂ ಡಮ್ಮಿ ಮತಪತ್ರ ಮತ್ತು ಮತಯಂತ್ರಗಳ ಕುರಿತು, ವೋಟರ್ ಸ್ಲಿಪ್‌ಗಳ ವಿತರಣೆ ಕುರಿತು ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳು ಅನುಸರಿಸಬೇಕಾದ ಚುನಾವಣಾ ಆಯೋಗದ ಮಾರ್ಗಸೂಚಿಗಳ ಕುರಿತಾಗಿ ಮಾಹಿತಿ ನೀಡಿದ ಅವರು, ಪಕ್ಷವಾರು ಬೂತ್ ಮಟ್ಟದ ಏಜೆಂಟರ್ ನೇಮಕ ಮಾಡಿದ ಅಧಿಕೃತ ಪಟ್ಟಿಯನ್ನು ಸಲ್ಲಿಸಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನಿರ್ದೇಶನ ನೀಡಿದರು.ಬಿಎಲ್‌ಒಗಳು ಪ್ರತಿ ಮನೆಗೆ ತೆರಳಿ ವೋಟರ್ ಸ್ಲಿಪ್‌ಗಳನ್ನು ವಿತರಿಸಿ ಸ್ವೀಕೃತಿ ಪಡೆಯುತ್ತಾರೆ. ಮರಣ ಹೊಂದಿದವರು, ಸ್ಥಳಾಂತರಗೊಂಡವರು ಹಾಗೂ ಬಿ.ಎಲ್.ಒಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆಯಲ್ಲಿ ಇರದೇ ಇದ್ದವರ ವೋಟರ್ ಸ್ಲಿಪ್‌ಗಳನ್ನು ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರಗಳಿಗೆ ಹಿಂದಿರುಗಿಸುತ್ತಾರೆ. ವೋಟರ್ ಸ್ಲಿಪ್‌ಗಳನ್ನು ಯಾವುದೇ ಕಾರಣಕ್ಕೂ ಬಲ್ಕಾಗಿ (ಸಗಟಾಗಿ) ಯಾರೊಬ್ಬರ ಕೈಯಲ್ಲಿಯೂ ನೀಡುವಂತಿಲ್ಲ ಹಾಗೂ ಯಾವುದೇ ಒಂದು ಸ್ಥಳದಲ್ಲಿ ಕುಳಿತು ವಿತರಿಸುವ ಹಾಗಿಲ್ಲ. ಕಡ್ಡಾಯವಾಗಿ ಮನೆ ಮನೆಗೆ ತೆರಳಿ ವೋಟರ್ ಸ್ಲಿಪ್ ವಿತರಣೆ ಮಾಡಬೇಕು. ಈ ನಿಟ್ಟಿನಲ್ಲಿ ಈಗಾಗಲೇ ನಿರ್ದೇಶನ ನೀಡಲಾಗಿದೆ. ಯಾವುದೇ ಕಾರಣಕ್ಕೂ ರಾಜಕೀಯ ಪಕ್ಷಗಳಿಂದ ನೇಮಕಗೊಂಡ ಬೂತ್ ಮಟ್ಟದ ಏಜೆಂಟರುಗಳಿಗೆ ವೋಟರ್ ಸ್ಲಿಪ್ ವಿತರಣೆ ಮಾಡಲು ಕೈಗೆ ನೀಡುವುದಿಲ್ಲ. ಅಧಿಕೃತವಾಗಿ ನೇಮಕಗೊಂಡ ಬೂತ್ ಮಟ್ಟದ ಏಜೆಂಟರು ಮಾತ್ರ ವೋಟರ್ ಸ್ಲಿಪ್ ವಿತರಣೆಯಲ್ಲಿ ಭಾಗವಹಿಸಬಹುದು. ಅಧಿಕೃತ ಏಜೆಂಟರು ಅಲ್ಲವರು ಭಾಗವಹಿಸುವಂತಿಲ್ಲ ರಾಜಕೀಯ ಪ್ರತಿನಿಧಿಗಳಿಗೆ ತಿಳಿಸಿದರು.

ಡಮ್ಮಿ ಬ್ಯಾಲಟ್ ಪೇಪರ್: ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಡಮ್ಮಿ ಬ್ಯಾಲಟ್ ಪೇಪರ್ ಮುದ್ರಿಸಬಹುದು. ಅಭ್ಯರ್ಥಿಯ ಹೆಸರು, ಹೆಸರು ಎಷ್ಟನೇ ಕ್ರಮಾಂಕದಲ್ಲಿದೆ ಹಾಗೂ ಚಿಹ್ನೆ ತೋರಿಸಬಹುದು. ಆದರೆ ಉಳಿದ ಅಭ್ಯರ್ಥಿಗಳ ಹೆಸರು ಮತ್ತು ಕ್ರಮಸಂಖ್ಯೆ ಹಾಗೂ ಚಿಹ್ನೆ ಮುದ್ರಿಸುವ ಹಾಗಿಲ್ಲ. ಮಾದರಿ ಮತಪತ್ರವು ಕಂದು, ಗ್ರೇ, ಹಳದಿ ಅಥವಾ ಇತರೆ ಬಣ್ಣದ್ದಾಗಿರಬಹುದು. ಆದರೆ ಯಾವುದೇ ಕಾರಣಕ್ಕೂ ಈ ಮಾದರಿ ಮತಪತ್ರವು ಬಿಳಿ ಮತ್ತು ಪಿಂಕ್ ಬಣ್ಣದ್ದಾಗಿರಬಾರದು. ಡಮ್ಮಿ ಬ್ಯಾಲಟ್ ಪೇಪರ್‌ನ ಗಾತ್ರ ಮತ್ತು ಬಣ್ಣ ನಿಜವಾದ ಬ್ಯಾಲಟ್ ಪೇಪರ್‌ನ ಗಾತ್ರ ಮತ್ತು ಬಣ್ಣವನ್ನು ಎಲ್ಲಿಯೂ ಹೋಲುವಂತೆ ಇರಬಾರದು ಎಂದು ತಿಳಿಸಿದರು.ಮತದಾರರಿಗೆ ಜಾಗೃತಿ ಮೂಡಿಸಲು ಡಮ್ಮಿ ಬ್ಯಾಲಟ್ ಯುನಿಟ್ ತಯಾರಿಕೆಗೆ ಅಭ್ಯರ್ಥಿಗಳಿಗೆ ಅವಕಾಶವಿದೆ. ಕಟ್ಟಿಗೆ, ಪ್ಲಾಸ್ಟಿಕ್, ಪ್ರೈವುಡ್‌ನಿಂದ ತಯಾರಿಸಿರುವ ಬ್ಯಾಲೆಟಿಂಗ್ ಯುನಿಟ್‌ನ್ನು ಬಳಸಿಕೊಳ್ಳಬಹುದು. ಹಳದಿ, ಗ್ರೇ ಮತ್ತು ಕಂದುಬಣ್ಣದಲ್ಲಿ ಪೇಂಟ್ ಮಾಡಿರುವ ಈ ಬ್ಯಾಲೆಟಿಂಗ್ ಯುನಿಟ್ ಅಭ್ಯರ್ಥಿಯ ಕ್ರಮಸಂಖ್ಯೆ, ಹೆಸರು ಮತ್ತು ಚಿಹ್ನೆ, ಬ್ಯಾಟರಿ ಹೊಂದಿರಬಹುದು ಮತ್ತು ಬಟನ್ ಒತ್ತಿದಾಗ ಲೈಟ್ ಹೊರಹೊಮ್ಮುವುದನ್ನು ತೋರಿಸುವ ಅವಕಾಶವಿದೆ. ಆದರೆ ಡಮ್ಮಿ ಬ್ಯಾಲಟ್ ಯಂತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರು ಹಾಗೂ ಚಿಹ್ನೆಗಳನ್ನು ಮುದ್ರಿಸುವಹಾಗಿಲ್ಲ ಎಂದರು.

ವೋಟರ್ ಸ್ಲಿಪ್: ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅನಧಿಕೃತ ಮತದಾರರ ಚೀಟಿಗಳನ್ನು ವಿತರಿಸಬಹುದು. ಆದರೆ ವೋಟರ್ ಸ್ಲಿಪ್‌ಗಳು ಮತದಾರರ ಪಟ್ಟಿಯಲ್ಲಿರುವಂತೆ ಮತದಾರರ ಹೆಸರು ಮತ್ತು ಕ್ರಮಸಂಖ್ಯೆ, ಮತದಾರರ ಭಾಗ ಸಂಖ್ಯೆ, ಮತಗಟ್ಟೆಯ ಕ್ರಮಸಂಖ್ಯೆ ಮಾತ್ರ ಇರಬೇಕು ಹಾಗೂ ಕೇವಲ ಬಿಳಿ ಬಣ್ಣದ್ದಾಗಿರಬೇಕು. ಅಭ್ಯರ್ಥಿಯ ಹೆಸರು ಅಥವಾ ಪಕ್ಷದ ಹೆಸರು ಅಥವಾ ಪಕ್ಷದ ಚಿಹ್ನೆಯ ವಿವರ ಹೊಂದಿರಬಾರದು. ಮತದಾರರ ಚೀಟಿಗಳು ಯಾವುದೇ ಘೋಷಣೆ ಅಥವಾ ನಿರ್ದಿಷ್ಟ ಪಕ್ಷ ಮತ್ತು ಅಭ್ಯರ್ಥಿಗೆ ಮತ ಹಾಕುವಂತೆ ಯಾವುದೇ ಬರಹ ಮತ್ತು ಆಗ್ರಹಗಳನ್ನು ಹೊಂದಿರಬಾರದು. ಈ ರೀತಿಯ ಆಗ್ರಹದ ಬರಹ ಕಾನೂನಿನ ಪ್ರಕಾರ ಸಮ್ಮತವಾಗಿರವುದಿಲ್ಲ ಹಾಗಾಗಿ ಇಂತಹ ಯಾವುದೇ ಆಗ್ರಹದ ಬರಹಕ್ಕೆ ಅವಕಾಶವಿರುವುದಿಲ್ಲ. ನಿಯಮ ಉಲ್ಲಂಘಿಸಿದರೆ ದೂರು ದಾಖಲಿಸಲಾಗುವುದು. ವೋಟರ್ ಸ್ಲಿಪ್‌ಗಳನ್ನು ಅನುಮತಿ ಪಡೆದು ಸ್ಥಾಪಿಸಲಾದ ಚುನಾವಣಾ ಬೂತ್‌ಗಳಲ್ಲಿ ಮಾತ್ರ ನೀಡಲು ಅವಕಾಶವಿದೆ. ಮನೆ ಮನೆಗೆ ವಿತರಣೆಗೆ ಅವಕಾಶ ಇಲ್ಲ ಎಂದು ತಿಳಿಸಿದರು.

ಮತದಾನದ ದಿನ ಮತದಾನಕ್ಕೆ ಗುರುತಿಸಲಾದ ಮತಗಟ್ಟೆಯಿಂದ ೨೦೦ ಮೀಟರ್‌ನ ಹೊರಗೆ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಬೂತ್‌ನ್ನು ಸ್ಥಾಪಿಸಬಹುದು. ೧೦*೧೦ ಫೀಟ್ ಅಳತೆ ಮೀರದ ಛತ್ರಿ ಅಥವಾ ಸಣ್ಣ ಟೆಂಟ್ ಬಳಸಿಕೊಳ್ಳಬಹುದು. ಬೂತ್‌ನಲ್ಲಿ ಕೇವಲ ೪*೮ ಅಳತೆಯ ಒಂದು ಪಕ್ಷದ ಧ್ವಜ ಅಥವಾ ಬ್ಯಾನರ್‌ಗೆ ಅವಕಾಶವಿದೆ. ಈ ಬೂತ್‌ಗೆ ಸ್ಥಳೀಯ ಪ್ರಾಧಿಕಾರದ ಅನುಮತಿ ಕಡ್ಡಾಯವಾಗಿದೆ. ಬೂತ್‌ನಲ್ಲಿ ಕೇವಲ ಒಂದು ಟೇಬಲ್ ಮತ್ತು ಎರಡು ಕುರ್ಚಿಗಳನ್ನು ಮಾತ್ರ ಹಾಕಬಹುದು. ಬ್ಯಾನರ್‌ನಲ್ಲಿ ಪಕ್ಷದ ಚಿಹ್ನೆ ಮತ್ತು ಭಾವಚಿತ್ರಕ್ಕೆ ಅವಕಾಶವಿದೆ ಎಂದು ತಿಳಿಸಿದರು.

ಪೋಲಿಂಗ್ ಏಜೆಂಟರ ನೇಮಕಾತಿ: ಪೋಲಿಂಗ್ ಏಜೆಂಟರು ಅದೇ ಮತಗಟ್ಟೆಯ ಅಥವಾ ಪಕ್ಕದ ಮತಗಟ್ಟೆಯ ಅಥವಾ ಅದೇ ವಿಧಾನಸಭಾ ಕ್ಷೇತ್ರದ ಮತದಾರನಾಗಿರಬೇಕು. ಮತದಾರರ ಭಾವಚಿತ್ರದ ಗುರುತಿನ ಚೀಟಿ ಹೊಂದಿರಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯ, ನಗರಸಭೆ ಸದಸ್ಯರುಗಳು ಪೋಲಿಂಗ್ ಏಜೆಂಟರಾಗಲು ನಿರ್ಬಂಧವಿಲ್ಲ. ಆದರೆ ಹಾಲಿ ಸಚಿವರು, ಹಾಲಿ ಶಾಸಕರು, ಮಹಾನಗರ ಪಾಲಿಕೆಗಳ ಮೇಯರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ನಿಗಮ ಮಂಡಳಿಯ ಅಧ್ಯಕ್ಷರು, ಸರ್ಕಾರಿ, ಅನುದಾನಿತ ನೌಕರರು, ಅರೆಕಾಲಿಕ ನೌಕರರು, ಅಂಗನವಾಡಿ ಕಾರ್ಯಕರ್ತರು ಹಾಗೂ ರೇಷನ್ ಅಂಗಡಿ ಮಾಲೀಕರು, ಭದ್ರತಾ ಸಿಬ್ಬಂದಿ ಹೊಂದಿದ ಯಾವುದೇ ವ್ಯಕ್ತಿ ಪೋಲಿಂಗ್ ಏಜೆಂಟರಾಗುವಂತಿಲ್ಲ ಎಂದರು.ಪೋಲಿಂಗ್ ಏಜೆಂಟರು ಫೋನ್ ಬಳಸುವಂತಿಲ್ಲ ಹಾಗೂ ಯಾವುದೇ ಸಂದರ್ಭದಲ್ಲಿಯೂ ಏಕಕಾಲಕ್ಕೆ ಒಂದೇ ಅಭ್ಯರ್ಥಿಗೆ ಸೇರಿದ ಇಬ್ಬರು ಪೋಲಿಂಗ್ ಏಜೆಂಟರು ಮತಗಟ್ಟೆಯೊಳಗೆ ಇರುವಂತಿಲ್ಲ. ಪಿ.ಆರ್.ಓ. ನೀಡುವ ಎಂಟ್ರಿ ಪಾಸ್ ಕಡ್ಡಾಯವಾಗಿ ಹೊಂದಿರಬೇಕು ಎಂದು ತಿಳಿಸಿದರು.ಪೋಲಿಂಗ್ ಏಜೆಂಟರು ಫಾರ್ಮ ನಂ ೧೦ರಲ್ಲಿ ಪೋಲಿಂಗ್ ಏಜೆಂಟ್ ಮೂಲ ನೇಮಕಾತಿ ಪ್ರತಿ, ಆ ಮತಗಟ್ಟೆಗೆ ಸಂಬಂಧಿಸಿರುವ ಮತದಾರರ ಪಟ್ಟಿಯ ಪ್ರತಿ, ಹಿತ್ತಾಳೆಯ ಸೀಲು (ಇ.ವಿ.ಎಂ. ಗಳ ಮೇಲೆ ಹಾಕಲು), ಪೆನ್, ಪೇಪರ್ ಮತ್ತು ಪೆನ್ಸಿಲ್, ಅಭ್ಯರ್ಥಿ ಅಥವಾ ಪಕ್ಷದಿಂದ ಸ್ವೀಕರಿಸಿದ ಆ ಮತಗಟ್ಟೆಗಳಲ್ಲಿ ಬಳಸಲಾಗುವ ಇ.ವಿ.ಎಂ ಮತ್ತು ವಿವಿಪ್ಯಾಟ್‌ಗಳ ಕ್ರಮಸಂಖ್ಯೆ ತರಬಹುದು ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಸಹಾಯಕ ಚುನಾವಣಾಧಿಕಾರಿಗಳಾದ ಚೆನ್ನಪ್ಪ, ಮಹ್ಮದ್ ಖಿಜರ್, ರೇಷ್ಮಾ ಕೌಸರ್, ನಾಗರಾಜ, ರಮೇಶ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.