ಸಾರಾಂಶ
ಮಾ.3ರಂದು ಪಲ್ಲಕ್ಕಿ ಉತ್ಸವ ಆರಂಭವಾಗಿ ಎಂಟು ದಿನಗಳ ಕಾಲ ಮೆರವಣಿಗೆ ನಡೆಯುತ್ತದೆ. ಮಾ.10ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ನಡೆಯಲಿದೆ.
ಕುಷ್ಟಗಿ: ದೋಟಿಹಾಳ ಗ್ರಾಮದ ಅವಧೂತ ಶುಖಮುನಿ ಸ್ವಾಮಿಗಳ ಜಾತ್ರಾ ಮಹೋತ್ಸವವನ್ನು ಸಡಗರ ಹಾಗೂ ಸಂಭ್ರಮದಿಂದ ಎಲ್ಲರು ಒಗ್ಗಟ್ಟಾಗಿ ನಡೆಸಿಕೊಂಡು ಹೋಗಬೇಕು ಎಂದು ತಹಸೀಲ್ದಾರ ರವಿ ಅಂಗಡಿ ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದ ಅವಧೂತ ಶುಖಮುನಿ ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಾ.3ರಂದು ಪಲ್ಲಕ್ಕಿ ಉತ್ಸವ ಆರಂಭವಾಗಿ ಎಂಟು ದಿನಗಳ ಕಾಲ ಮೆರವಣಿಗೆ ನಡೆಯುತ್ತದೆ. ಮಾ.10ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ನಡೆಯಲಿದೆ.
ರಥೋತ್ಸವದಲ್ಲಿ ಸುಮಾರು 50 ಸಾವಿರಕ್ಕಿಂತಲೂ ಅಧಿಕ ಜನಸಂಖ್ಯೆ ಸೇರುತ್ತಿದ್ದು, ಬಂದ ಭಕ್ತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ನೋಡಿಕೊಳ್ಳಬೇಕು. ಅಚ್ಚುಕಟ್ಟಾಗಿ ಒಂದು ಮಾದರಿಯ ಜಾತ್ರೆಯನ್ನಾಗಿ ಮಾಡಬೇಕು ಎಂದು ಹೇಳಿದರು.ಪಿಎಸ್ಐ ಮುದ್ದುರಂಗಸ್ವಾಮಿ ಮಾತನಾಡಿ, ಶುಖಮುನಿ ಸ್ವಾಮಿಗಳ ಪಲ್ಲಕ್ಕಿ ಉತ್ಸವವನ್ನು ಯಾವುದೇ ಗೊಂದಲ ಸೃಷ್ಟಿಮಾಡಲಾರದೆ ಶಾಂತ ರೀತಿಯಿಂದ ಪಲ್ಲಕ್ಕಿಯ ಉತ್ಸವದ ಮೆರವಣಿಗೆ ಮಾಡಬೇಕು. ದೇವಸ್ಥಾನದ ಕಮಿಟಿಯವರು ಪಲ್ಲಕ್ಕಿಯ ಪೂಜೆಗಾಗಿ ಕೇಸೂರು ಗ್ರಾಮದಲ್ಲಿ ಐದು ಸ್ಥಳಗಳು, ದೋಟಿಹಾಳ ಗ್ರಾಮದಲ್ಲಿ ಐದು ಸ್ಥಳಗಳನ್ನು ನಿಗದಿ ಮಾಡಿದ್ದು ಆ ಸ್ಥಳಗಳನ್ನು ಹೊರತುಪಡಿಸಿ ಬೇರೆ ಕಡೆ ಸಾಮೂಹಿಕ ಪೂಜೆ ಸಲ್ಲಿಸಲು ಅವಕಾಶ ಇರುವುದಿಲ್ಲ. ಪಲ್ಲಕ್ಕಿ ಉತ್ಸವದ ಜವಾಬ್ದಾರಿಯನ್ನು ಹೊತ್ತ ಸಂಘದವರು ಸರಿಯಾಗಿ ನಿರ್ವಹಿಸಬೇಕು ಎಂದು ಹೇಳಿದರು. ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಅನವಶ್ಯಕವಾಗಿ ಕಲಹವನ್ನು ಮಾಡಬಾರದು ಎಂದು ತಿಳಿಸಿದರು.ದೋಟಿಹಾಳ ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಮಾತನಾಡಿ, ನಮ್ಮ ದೋಟಿಹಾಳ ಗ್ರಾಮದ ಅವಧೂತ ಶುಖಮುನಿ ಸ್ವಾಮಿಗಳ ಜಾತ್ರಾ ಮಹೋತ್ಸವವು ಜಿಲ್ಲೆಯಲ್ಲಿ ಎರಡನೇ ದೊಡ್ಡ ಜಾತ್ರೆಯಾಗಿದೆ. ಅದ್ಧೂರಿಯಾಗಿ ಆಚರಣೆ ಮಾಡಬೇಕು. ಇದಕ್ಕೆ ಅಧಿಕಾರಿಗಳ ಪ್ರೋತ್ಸಾಹ ಹಾಗೂ ಗ್ರಾಮಸ್ಥರ ಸಹಕಾರ ನೀಡಬೇಕು. ಜಾತ್ರೆಯಲ್ಲಿ ಅವಶ್ಯಕತೆ ಇರುವ ಮೂಲಭೂತ ಸೌಲಭ್ಯಗಳನ್ನು ಗ್ರಾಪಂನಿಂದ ಒದಗಿಸಿಕೊಡಲಾಗುವುದು ಎಂದರು.ಈ ಸಂದರ್ಭದಲ್ಲಿ ಗೌಸುಸಾಬ ಕೊಣ್ಣೂರು, ಶೇಖಪ್ಪ ದೊಡ್ಡಮನಿ, ದೇವರಾಜ ಕಟ್ಟಿಮನಿ, ಪರಶುರಾಮ ಇಳಗೇರ, ಶರಣಗೌಡ ಪಾಟೀಲ ಸೇರಿದಂತೆ ಇತರರು ದೇವಸ್ಥಾನದಲ್ಲಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಹಾಗೂ ಗ್ರಾಮದಲ್ಲಿ ಹದಗೆಟ್ಟ ರಸ್ತೆಯ ಕುರಿತು ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಶರಣಯ್ಯ ನಿಡಗುಂದಿಮಠ, ಗ್ರಾಮ ಆಡಳಿತ ಅಧಿಕಾರಿ ಮೌನೇಶ ಮಡಿವಾಳರ, ಸಾರಿಗೆ ಇಲಾಖೆ ಜಯಪ್ರಕಾಶ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಂತೋಷಕುಮಾರ ಬಿರಾದಾರ, ಪಿಡಿಒ ಮುತ್ತಣ್ಣ, ಕೆಇಬಿ ಎಸ್ಒ ಮಂಜುನಾಥ, ಗ್ರಾಮಸ್ಥರಾದ ಗೂಡುಸಾಬ ದಳಪತಿ, ಗುರುಸಿದ್ದಯ್ಯ ಮಳಿಮಠ, ರಾಜಶೇಖರ ಹೊಕ್ರಾಣಿ, ಉಮೇಶ ಮಡಿವಾಳರ, ಶುಖಮುನಿ ಇಳಗೇರ, ಬಾಳಪ್ಪ ಅರಳಿಕಟ್ಟಿ, ಸುರೇಶ ಹುನಗುಂದ, ಶಾಮಿದಸಾಬ ಮುಜಾವರ, ಬಸವರಾಜ ಶೆಟ್ಟರ, ಶ್ರೀನಿವಾಸ ಕಂಟ್ಲಿ ಇದ್ದರು.