ಸಾರಾಂಶ
ದೋಟಿಹಾಳ ಗ್ರಾಮದಲ್ಲಿ ನಾಲ್ಕೈದು ಶಾಲಾ ಕಾಲೇಜು, ಬ್ಯಾಂಕ್, ವ್ಯಾಪಾರ ವಹಿವಾಟು, ಮಾರುಕಟ್ಟೆ ಇರುವುದರಿಂದ ಗ್ರಾಮದ ಒಳಗಡೆ ಬಸ್ ಬಾರದ ಹಿನ್ನೆಲೆ ಹಿರಿಯರು, ಮಹಿಳೆಯರು, ಅಂಗವಿಕಲರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ
ಕುಷ್ಟಗಿ: ದೋಟಿಹಾಳ ಗ್ರಾಮದ ಒಳಗಡೆ ಬಸ್ ಬಿಡುವಂತೆ ಒತ್ತಾಯಿಸಿ ಗ್ರಾಮಸ್ಥರು ಕೆಲ ಕಾಲ ಬಸ್‌ನ್ನು ಮುದೇನೂರು ಕ್ರಾಸಿನಲ್ಲಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಗ್ರಾಮಸ್ಥರು, ದೋಟಿಹಾಳ ಗ್ರಾಮದ ಮಾರ್ಗವಾಗಿ ಮುದೇನೂರು, ಕಂದಗಲ್ ಹಾಗೂ ಮೆಣಸಗೇರಾ ಗ್ರಾಮಗಳಿಗೆ ಹೋಗುವ ಬಸ್‌ಗಳು ಕಳೆದ ವರ್ಷದಿಂದ ದೋಟಿಹಾಳ ಗ್ರಾಮದ ಬಸ್ ನಿಲ್ದಾಣಕ್ಕೆ ಬರಲಾರದೆ ಮುಂದೇನೂರು ಕ್ರಾಸ್‌ನಿಂದ ಹೋಗುತ್ತಿರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ ಎಂದರು.ದೋಟಿಹಾಳ ಗ್ರಾಮದಲ್ಲಿ ನಾಲ್ಕೈದು ಶಾಲಾ ಕಾಲೇಜು, ಬ್ಯಾಂಕ್, ವ್ಯಾಪಾರ ವಹಿವಾಟು, ಮಾರುಕಟ್ಟೆ ಇರುವುದರಿಂದ ಗ್ರಾಮದ ಒಳಗಡೆ ಬಸ್ ಬಾರದ ಹಿನ್ನೆಲೆ ಹಿರಿಯರು, ಮಹಿಳೆಯರು, ಅಂಗವಿಕಲರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಕೂಡಲೇ ಡಿಪೋ ಮ್ಯಾನೇಜರ್ ಸ್ಥಳಕ್ಕೆ ಬಂದು ನಮ್ಮ ಸಮಸ್ಯೆ ಆಲಿಸಬೇಕು ಎಂದು ಒತ್ತಾಯಿಸಿದರು.
ದೋಟಿಹಾಳ ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಹಾಗೂ ಗ್ರಾಮಸ್ಥರಾದ ಅಜ್ಮೀರ ಯಲಬುರ್ಗಿ, ಸಣ್ಣೀರಪ್ಪ ಅಂಗಡಿ, ಬಸವರಾಜ ಕಡಿವಾಲ ಹಾಗೂ ಮಲ್ಲಪ್ಪ ಖೇಣೇದ ಅವರು ಸೇರಿದಂತೆ ಇತರರು ಡಿಪೋ ಮ್ಯಾನೇಜರ್ ಹಾಗೂ ಸಾರಿಗೆಯ ಇಲಾಖೆಯ ಅಧಿಕಾರಿಗಳಿಗೆ ಪೋನ್ ಮಾಡುವ ಮೂಲಕ ಇಂದಿನಿಂದ ನಮ್ಮ ಗ್ರಾಮದ ಒಳಗಡೆ ಬಸ್‌ಗಳು ಬಂದು ಹೋಗಬೇಕು ಇಲ್ಲವಾದರೆ ನಾಳೆಯು ಸಹಿತ ಬಸ್ಸನ್ನು ತಡೆಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಡಿಪೋ ಮ್ಯಾನೇಜರ್ ಹಾಗೂ ಸಾರಿಗೆಯ ಇಲಾಖೆಯ ಅಧಿಕಾರಿಗಳು ಭರವಸೆಯನ್ನು ನೀಡಿದ ಬಳಿಕ ಬಸ್ಸನ್ನು ಬಿಟ್ಟು ಕಳುಹಿಸಿದರು. ಈ ಸಂದರ್ಭದಲ್ಲಿ ದೋಟಿಹಾಳ ಹಾಗೂ ಕೇಸೂರು ಗ್ರಾಮಸ್ಥರು ಇದ್ದರು.