ಸಾರಾಂಶ
ವಾಹನ ಸವಾರರಿಂದ ದಂಡ ವಸೂಲಿ ಕುರಿತು ಟೀಕೆಕನ್ನಡಪ್ರಭ ವಾರ್ತೆ ಮಾಗಡಿ
ಸರ್ಕಾರದ ಖಜಾನೆ ತುಂಬಿಸಿಕೊಳ್ಳಲು ಪೊಲೀಸ್ ಇಲಾಖೆ ಮೂಲಕ ವಾಹನ ಸವಾರರಿಂದ ದುಪ್ಪಟ್ಟು ದಂಡ ವಸೂಲಿ ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಅಪರಾಧವೆಂಬಂತೆ ಬಿಂಬಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕವಾಗಿ ಪ್ರಚಾರ ಗಿಟ್ಟಿಸಿಕೊಳ್ಳಲು ಪೊಲೀಸರನ್ನು ಪ್ರಶ್ನಿಸಿಲ್ಲ, ನನಗೂ ಸಾರಿಗೆ ನಿಯಮ, ಕಾನೂನು ಗೊತ್ತಿದೆ. ಮಾನವೀಯತೆಯೂ ಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ನಾನೊಬ್ಬ ಜವಾಬ್ದಾರಿ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದೇನೆ. ಯಾರ ಮೇಲೂ ದರ್ಪ ನಡೆಸಿಲ್ಲ. ಕಾನೂನು ರೀತಿಯಲ್ಲಿ ಡ್ರಿಂಕ್ ಅಂಡ್ ಡ್ರೈವ್ ಮಾಡುವವರಿಗೆ ದಂಡ ವಿಧಿಸುವುದನ್ನು ಬಿಟ್ಟು ಪಟ್ಟಣದ ಸುತ್ತಮುತ್ತಲ ಸ್ಥಳೀಯರನ್ನು, ರೈತರನ್ನು ಕೂಲಿ ಕಾರ್ಮಿಕರನ್ನೇ ಪೊಲೀಸರು ಟಾರ್ಗೆಟ್ ಮಾಡುತ್ತಿದ್ದಾರೆಂದು ಆರೋಪಿಸಿದರು.ಹೈವೇ ಭಾಗದಲ್ಲಿ ವೇಗವಾಗಿ ಬರುವ ವಾಹನವನ್ನೋ ಅಥವಾ ಮದ್ಯಪಾನ ಮಾಡಿಯೋ ವಾಹನ ಓಡಿಸುವವರನ್ನು ಹಿಡಿಯಲಿ ನಾವ್ಯಾರು ಬೇಡ ಎನ್ನುವುದಿಲ್ಲ. ಅದರಲ್ಲೂ ಪೊಲೀಸರು ವೈನ್‌ಸ್ಟೋರ್ ಮುಂದೆ ನಿಂತು ಕುಡಿದು ಬೈಕ್, ಕಾರು ತೆಗೆದುಕೊಂಡು ತೆರಳುವ ವೇಳೆ ತಡೆದು ದಂಡ ವಿಧಿಸುತ್ತಾರೆ. ವೈನ್‌ಸ್ಟೋರ್‌ಗೆ ಜಿಎಸ್ಟಿ ಬೇಕು. ರೈತರಿಂದ ದಂಡವೂ ಬೇಕು. ಸರ್ಕಾರ ಉಚಿತ ಗ್ಯಾರಂಟಿ ಕೊಡಲು ಹಗಲು ದರೋಡೆಗೆ ನಿಂತಿದೆ ಇದು ನಿಲ್ಲಬೇಕು ಎಂದು ಆಗ್ರಹಿಸಿದರು.
ಈಗ ಮಾತ್ರ ಅಪಘಾತಗಳು ಹೆಚ್ಚಾಗಿದೆಯೇ? ನನ್ನ ಆಡಳಿತದ ಅವಧಿಯಲ್ಲಿ ಅಪಘಾತಗಳು ನಡೆದಿವೆ. ಮಾಗಡಿ ತಾಲೂಕಿನ ತೂಬಿನೆರೆ ಗ್ರಾಮದ ಗಂಡ ಹೆಂಡತಿ ಕಾರಿನಲ್ಲಿ ಮಾರುಕಟ್ಟೆಗೆ ಬಂದು ಹಣ್ಣು ಖರೀದಿಸಿ ಊರಿಗೆ ವಾಪಸ್ಸಾಗುವಾಗ ಸೋಮೇಶ್ವರ ದೇವಸ್ಥಾನದ ಬಳಿ ಸೀಟ್ ಬೆಲ್ಟ್ ಹಾಕಿಲ್ಲ ಎಂದು 5 ಸಾವಿರ ದಂಡ ವಿಧಿಸಿದ್ದಾರೆ. ನನ್ನ ಅವಧಿಯಲ್ಲಿ ದಂಡ ವಿಧಿಸಲು ಅವಕಾಶ ಕೊಡುತ್ತಿರಲಿಲ್ಲ, ಅವರಿವರ ಕೈಕಾಲು ಹಿಡಿದು ರಸ್ತೆ ಗುಂಡಿಗಳನ್ನು ಮುಚ್ಚಿಸುತ್ತಿದ್ದೆ ಎಂದರು.ಶಾಸಕ ಬಾಲಕೃಷ್ಣ ಅವರೆ ಈಗ ಕೆಆರ್‌ಡಿಸಿಎಲ್ ಅಧ್ಯಕ್ಷರಾಗಿದ್ದಾರೆ. ಪಟ್ಟಣದಲ್ಲಿ ಮಂಡಿಯುದ್ದ ಬಿದ್ದಿರುವ ರಸ್ತೆಗುಂಡಿಗಳನ್ನು ಮೊದಲು ಮುಚ್ಚಸಿ, ವಾಹನ ಸವಾರರು ಹಳ್ಳ, ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಳ್ಳುವುದನ್ನು ತಪ್ಪಿಸಲಿ, ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಿ, ಪೊಲೀಸರಿಗೆ ಸಾರಿಗೆ ನಿಯಮ ಕುರಿತು ಅಲ್ಲಲ್ಲಿ ಬೋರ್ಡ್ ಹಾಕಿಸುವ ಕೆಲಸ ಮಾಡಿಸಲಿ. ಕಾನೂನು ಪಾಲನೆಗೆ ಸಹಕರಿಸಲಿ ಎಂದು ಮಾಜಿ ಶಾಸಕ ಎ.ಮಂಜುನಾಥ್ ಶಾಸಕರಿಗೆ ಟಾಂಗ್ ಕೊಟ್ಟರು.
ಪುರಸಭಾ ಸದಸ್ಯರಾದ ಎಂ.ಎನ್.ಮಂಜುನಾಥ್, ಕೆ.ವಿ.ಬಾಲರಘು, ರಾಮು, ಅಶ್ವಥ್, ಕೆ.ಕೆ.ಕಾಂತರಾಜು, ಜೆಡಿಎಸ್ ಯುವ ಅಧ್ಯಕ್ಷ ವಿಜಯಕುಮಾರ್, ಡಿ.ಜಿ.ಕುಮಾರ್ ಇತರರಿದ್ದರು.