ವರದಕ್ಷಿಣೆ ಕಿರುಕುಳ: ಇಲಿ ಪಾಷಾಣ ಸೇವಿಸಿದ್ದ ಪತ್ನಿ ಸಾವು

| Published : Jul 10 2024, 12:30 AM IST

ವರದಕ್ಷಿಣೆ ಕಿರುಕುಳ: ಇಲಿ ಪಾಷಾಣ ಸೇವಿಸಿದ್ದ ಪತ್ನಿ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ವರದಕ್ಷಿಣೆ ದಾಹಕ್ಕೆ ಪತ್ನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಳೆ ಹಂಪಾಪುರ ಗ್ರಾಮದಲ್ಲಿ ಜರುಗಿದೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕೈ ಹಿಡಿದ ಪತಿರಾಯನೊಬ್ಬನ ವರದಕ್ಷಿಣೆ ದಾಹಕ್ಕೆ ಪತ್ನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಳೆ ಹಂಪಾಪುರ ಗ್ರಾಮದಲ್ಲಿ ಜರುಗಿದೆ. ಸುಜಾತ ಅಲಿಯಾಸ್ ಸುನೀತ (31) ವರದಕ್ಷಿಣೆ ದಾಹಕ್ಕೆ ಬಲಿಯಾದ ದುರ್ದೈವಿ ಗೖಹಿಣಿ. ಕಳೆದ ಆರು ವರ್ಷಗಳ ಹಿಂದೆ ಹಳೆ ಹಂಪಾಪುರ ಗ್ರಾಮದ ನಿಂಗರಾಜು ಮತ್ತು ಸುಂದ್ರಮ್ಮ ದಂಪತಿಗಳ ಪುತ್ರ ಇಂದ್ರಕುಮಾರ್ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ವಿವಾಹದ ವೇಳೆ 12 ಗ್ರಾಂ ಚೈನ್, 5 ಗ್ರಾಂ ಉಂಗುರ, ಬಟ್ಟೆ ಕೊಡಿಸಿ ಮದುವೆ ಮಾಡಿಕೊಡಲಾಗಿತ್ತು. ಮದುವೆ ಆದಾಗಿನಿಂದಲೂ ನನ್ನ ಮಗಳಿಗೆ ಅಳಿಯ ಆಗಿಂದಾಗ್ಗೆ ಕಿರುಕುಳ ನೀಡುತ್ತಿದ್ದ, ಹಲ್ಲೆ ನಡೆಸಿ ಹಲವು ಬಾರಿ ಮನೆಗೂ ವಾಪಸ್ಸು ಕಳುಹಿಸಿದ್ದೆ. ಗ್ರಾಮದ ಯಜಮಾನರಾದ ನಾಗಲಿಂಗಯ್ಯ, ಮರಿಸ್ವಾಮಿ ಸೇರಿದಂತೆ ಇನ್ನಿತರರು ಮದುವೆ ಮಾತುಕತೆ ವೇಳೆಯೂ ಇದ್ದರು. ನನ್ನ ಮಗಳಿಗೆ ಇಂದ್ರಕುಮಾರ್ ಹಲ್ಲೆ ನಡೆಸಿ ಇನ್ನಷ್ಟು ವರದಕ್ಷಿಣೆ ತರುವಂತೆ ತೊಂದರೆ ಕೊಟ್ಟಾಗಲೆಲ್ಲಾ ನಮ್ಮ ಮನೆಗೆ ಸುನೀತ ಬರುತ್ತಿದ್ದಳು, ಗ್ರಾಮದ ಮುಖಂಡರು ಸಂಸಾರ ಹಾಳಾಗಬಾರದೆಂಬ ಹಿನ್ನೆಲೆ ಬುದ್ದಿವಾದ ಹೇಳಿ ಕಳುಹಿಸಿಕೊಡಲಾಗಿತ್ತು. ಹಾಗಿದ್ದರೂ ಸಹಾ ಹಲವು ಬಾರಿ ಕುಡಿದು ಬಂದು ನನ್ನ ಗರ್ಭಿಣಿ ಮಗಳಿಗೆ ಹಲ್ಲೆಮಾಡಿದ್ದ, ಹಲ್ಲೆ ವೇಳೆ ಜೋರಾಗಿ ಒದ್ದ ಹಿನ್ನೆಲೆ ಗರ್ಭಪಾತವೂ ಆಗಿತ್ತು. ಇದನ್ನೆಲ್ಲಾ ನಾವು ಸಹಿಸಿಕೊಂಡಿದ್ದೆವು, ಪುನಃ 2-3 ದಿನಗಳ ಹಿಂದೆ ವರದಕ್ಷಿಣೆ ತರುವಂತೆ ಹಲ್ಲೆ ಮಾಡಿದ್ದ, ನಿಮ್ಮ ಮನೆಯವರು ಮಾಡಿಸಿಕೊಟ್ಟ ಚೈನ್ ಚಿಕ್ಕದು. ಹಾಗಾಗಿ ಮತ್ತೆ 25 ಸಾವಿರ ತೆಗೆದುಕೊಂಡು ಬಾ ಎಂದು ಹಲ್ಲೆ ಮಾಡಿದ್ದ ಹಿನ್ನೆಲೆ ಬೇಸತ್ತ ನನ್ನ ಮಗಳು ಇಲಿ ಪಾಷಾಣ ಕುಡಿದು ಅಸ್ವಸ್ಥಳಾಗಿ ಆಕೆಯನ್ನು ಜು.4ರಂದು ಸರ್ಕಾರಿ ಕೊಳ್ಳೇಗಾಲ ಉಪವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಜು.8ರಂದು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಅಲ್ಲಿನ ವೈದ್ಯರು ಬದುಕುವುದು ಕಷ್ಟ ಎಂದು ಹೇಳಿದ ಹಿನ್ನೆಲೆ ಜು.9ರಂದು ಬೆಳಗಿನ ಜಾವ ಹಂಪಾಪುರ ಗ್ರಾಮಕ್ಕೆ ಕರೆದುಕೊಂಡು ಬರುತ್ತಿದ್ದ ವೇಳೆ ಸುಜಾತ ಸಾವಿಗೀಡಾಗಿದ್ದು ಆಕೆಯ ಸಾವಿಗೆ ಪತಿ ಇಂದ್ರಕುಮಾರ್ ವರದಕ್ಷಿಣೆ ಕಿರುಕುಳ ನೀಡಿದ್ದೇ ಮುಖ್ಯ ಕಾರಣ. ಆತನ ಮೇಲೆ ಕ್ರಮ ಕೈಗೊಳ್ಳಿ ಎಂದು ಮೃತಳ ತಾಯಿ ತಾಯಮ್ಮ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದು ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.