ಬೆಂಗಳೂರಿನ ವರ್ತುಲ ರೈಲಿಗೆ ಡಿಪಿಆರ್‌ ಶೀಘ್ರ: ಸೋಮಣ್ಣ

| Published : Jun 30 2024, 02:00 AM IST / Updated: Jun 30 2024, 11:06 AM IST

ಬೆಂಗಳೂರಿನ ವರ್ತುಲ ರೈಲಿಗೆ ಡಿಪಿಆರ್‌ ಶೀಘ್ರ: ಸೋಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿ ಈಗಾಗಲೇ ಯೋಜಿಸಿರುವ ಉಪನಗರ ರೈಲ್ವೆ ಯೋಜನೆಗೆ ಪೂರಕವಾಗಿ ಹೊರ ವರ್ತುಲ ರೈಲ್ವೆ ನಿರ್ಮಿಸಲಾಗುತ್ತದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

 ಬೆಂಗಳೂರು :  ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಪೂರಕವಾಗಿ ₹23 ಸಾವಿರ ಕೋಟಿ ವೆಚ್ಚದ ವರ್ತುಲ ರೈಲ್ವೆ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಶೀಘ್ರವೇ ವಿಸ್ತ್ರತ ಯೋಜನಾ ವರದಿ ರೂಪಿಸಿಕೊಳ್ಳಲಾಗುವುದು ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪನಗರ ರೈಲ್ವೆ ಯೋಜನೆ ನಮ್ಮ ನಿರೀಕ್ಷೆಗೆ ತಕ್ಕಷ್ಟು ವೇಗದಲ್ಲಿ ನಡೆಯುತ್ತಿಲ್ಲ. ನೈಋತ್ಯ ರೈಲ್ವೆಯಿಂದ ಕೊಡಬೇಕಾದ ಅಗತ್ಯದಷ್ಟು ಭೂಮಿ ಹಸ್ತಾಂತರ ಮಾಡುವ ಪ್ರಕ್ರಿಯೆ ಆಗಿದೆ. ಯೋಜನೆ ಚುರುಕಾಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಜೊತೆಗೆ ನಿಡವಂಡ, ವಡ್ಡರಹಳ್ಳಿ, ದೇವನಹಳ್ಳಿ, ಮಾಲೂರು, ಹೀಲಲಿಗೆ, ಹೆಜ್ಜಾಲ, ಸೋಲೂರು ಮತ್ತು ನಿಡವಂಡ ಸಂಪರ್ಕಿಸುವ 287 ಕಿ.ಮೀ. ವರ್ತುಲ ರೈಲ್ವೆ ಕಾಮಗಾರಿಗಾಗಿ ಸರ್ವೆ, ಡಿಪಿಆರ್‌ ಮಾಡಲಿದ್ದೇವೆ ಎಂದು ತಿಳಿಸಿದರು.

1997-98ರಿಂದ ನನೆಗುದಿಗೆ ಬಿದ್ದಿದ್ದ ಬೆಂಗಳೂರು - ವೈಟ್‌ಫಿಲ್ಡ್ 38 ಕಿ.ಮೀ. ನಾಲ್ಕು ಹಳಿ ಯೋಜನೆ ಈಗ ಪ್ರಗತಿಯಲ್ಲಿದೆ. ₹492 ಕೋಟಿ ಮೊತ್ತದ ಈ ಯೋಜನೆ ಕಾಮಗಾರಿ ಪ್ರಸ್ತುತ ಬೆಂಗಳೂರು ದಂಡು-ಬೈಯಪ್ಪನಹಳ್ಳಿ ನಡುವೆ (13 ಕಿ.ಮೀ.) ನಡೆಯುತ್ತಿದೆ. ₹314 ಕೋಟಿ ವೆಚ್ಚದ ಯಶವಂತಪುರ - ಚನ್ನಸಂದ್ರ (25 ಕಿ.ಮೀ.) ಜೋಡಿಹಳಿ ಕಾಮಗಾರಿ ಹೆಬ್ಬಾಳದವರೆಗೆ 10.3 ಕಿ.ಮೀ. ಪೂರ್ಣಗೊಂಡಿದೆ. ₹500 ಕೋಟಿ ಮೊತ್ತದ ಬೈಯಪ್ಪನಹಳ್ಳಿ-ಹೊಸೂರು (48 ಕಿ.ಮೀ.) ಜೋಡಿಹಳಿ ಕಾಮಗಾರಿ ಕಾರ್ಮಿಲ್‌ರಾಂ ವರೆಗೆ 10 ಕಿ.ಮೀ. ಮುಗಿದಿದ್ದು, 2025ಕ್ಕೆ ಪೂರ್ಣಗೊಳ್ಳಲಿದೆ ಎಂದರು.

ಬಂಗಾರಪೇಟೆ, ದೊಡ್ಡಬಳ್ಳಾಪುರ, ಕೆಂಗೇರಿ, ವೈಟ್‌ಫೀಲ್ಡ್, ಚನ್ನಪಟ್ಟಣ, ಕೆ.ಆರ್‌.ಪುರ, ರಾಮನಗರ ರೈಲ್ವೆ ನಿಲ್ದಾಣವನ್ನು ‘ಅಮೃತ್‌ ಭಾರತ್‌’ ಯೋಜನೆಯಡಿ ಮೇಲ್ದರ್ಜೆಗೆ ಏರಿಸುವ ಕಾಮಗಾರಿ ನಡೆದಿದೆ. ನಗರದಲ್ಲಿ ₹208 ಕೋಟಿ ವೆಚ್ಚದಲ್ಲಿ 8 ಮೇಲ್ಸೇತುವೆ, ₹35.41 ಕೋಟಿ ಮೊತ್ತದಲ್ಲಿ 4 ಅಂಡರ್‌ ಬ್ರಿಡ್ಜ್‌ ಕೆಲಸ ನಡೆದಿದೆ ಎಂದು ವಿವರಿಸಿದರು.

ನಗರದ ರೈಲ್ವೆ ಸಂಪರ್ಕ ಉತ್ತಮಗೊಳಿಸಲು ಒಟ್ಟಾರೆ ₹43 ಸಾವಿರ ಕೋಟಿ ವೆಚ್ಚದ ಕಾಮಗಾರಿ ಅನುಷ್ಠಾನಗೊಳ್ಳುತ್ತಿದೆ. 2022ರಲ್ಲಿ ಬೆಟ್ಟಹಲಸೂರು - ರಾಜಾನುಕುಂಟೆ 15 ಕಿ.ಮೀ. ಹೊಸ ಲೈನ್ (₹250 ಕೋಟಿ), ವೈಟ್‌ಫೀಲ್ಡ್ - ಬಂಗಾರಪೇಟೆ (47 ಕಿ.ಮೀ.) ನಾಲ್ಕು ಹಳಿ (₹2350 ಕೋಟಿ) ಬೈಯಪ್ಪನಹಳ್ಳಿ - ಹೊಸೂರು 48.5 ಕಿ.ಮೀ. ನಾಲ್ಕುಹಳಿ (₹2550 ಕೋಟಿ) ಹಾಗೂ ಯಲಹಂಕ - ದೇವನಹಳ್ಳಿ 23.7 ಕಿ.ಮೀ. ಜೋಡಿಹಳಿ (₹934 ಕೋಟಿ) ಸಮೀಕ್ಷೆ ಮಂಜೂರಾಗಿದೆ ಎಂದರು.

ಕಳೆದ ವರ್ಷ ಬೆಂಗಳೂರು-ತುಮಕೂರು 70 ಕಿ.ಮೀ. ನಾಲ್ಕುಹಳಿ (₹3640 ಕೋಟಿ), ಚಿಕ್ಕಬಾಣಾವರ - ಹಾಸನ 166 ಕಿ.ಮೀ. ಜೋಡಿಹಳಿ (₹2656 ಕೋಟಿ), ಬೆಂಗಳೂರು - ಮೈಸೂರು 137 ಕಿ.ಮೀ. ನಾಲ್ಕುಹಳಿ (₹4384 ಕೋಟಿ) ಹಾಗೂ ದೇವನಹಳ್ಳಿ - ಬಂಗಾರಪೇಟೆ 125 ಕಿ.ಮೀ. ಜೋಡಿಹಳಿ (₹2250 ಕೋಟಿ) ಯೋಜನೆಯ ಸರ್ವೆಗೆ ಮಂಜೂರಾತಿ ಸಿಕ್ಕಿದೆ ಎಂದು ತಿಳಿಸಿದರು.

ಜನಪ್ರತಿನಿಧಿಗಳೊಂದಿಗೆ ಸಭೆ

ಇದಕ್ಕೂ ಮುನ್ನ ಸಚಿವ ಸೋಮಣ್ಣ ಅವರು ರಾಜ್ಯದ ರೈಲ್ವೆ ಕುರಿತಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್, ಸಂಸದರಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್‌, ಮಲ್ಲೇಶ್‌ ಬಾಬು, ರಾಜ್ಯಸಭೆ ಸದಸ್ಯ ಕೆ.ನಾರಾಯಣ್‌, ಶಾಸಕರಾದ ಮುನಿರತ್ನ, ಎಸ್‌.ಟಿ.ಸೋಮಶೇಖರ್‌, ಎಸ್‌.ಮುನಿರಾಜು, ಡಾ। ಸಿ.ಎನ್‌.ಅಶ್ವತ್ಥನಾರಾಯಣ, ಬಿ.ಎ.ಬಸವರಾಜು, ಎನ್‌.ಎ.ಹ್ಯಾರಿಸ್‌, ವಿಧಾನಪರಿಷತ್ ಸದಸ್ಯ ಎಚ್‌.ಎಸ್‌.ಗೋಪಿನಾಥ್‌, ಸಮ್ಮುಖದಲ್ಲಿ ನೈಋತ್ಯ ರೈಲ್ವೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು.