ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೋಳ್ವಾಲ್ಕರ್ ಅವರು ಸಂವಿಧಾನವನ್ನು ಸುಡಬೇಕೆಂದು ಹೇಳಿದ್ದರೆಂಬ ಮಾತು ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹಾಗೂ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ನಡುವೆ ರಾಜೀನಾಮೆಯ ಸವಾಲು-ಪ್ರತಿ ಸವಾಲುಗಳ ವಿನಿಯಮಕ್ಕೆ ಕಾರಣವಾಯಿತು.
ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೋಳ್ವಾಲ್ಕರ್ ಅವರು ಸಂವಿಧಾನವನ್ನು ಸುಡಬೇಕೆಂದು ಹೇಳಿದ್ದರೆಂಬ ಮಾತು ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹಾಗೂ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ನಡುವೆ ರಾಜೀನಾಮೆಯ ಸವಾಲು-ಪ್ರತಿ ಸವಾಲುಗಳ ವಿನಿಯಮಕ್ಕೆ ಕಾರಣವಾಯಿತು.‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ’ ಕುರಿತು ಮಾತನಾಡುವ ಸಂದರ್ಭದಲ್ಲಿ ಬಿ.ಕೆ. ಹರಿಪ್ರಸಾದ್ ಅವರು, ಸಂವಿಧಾನ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಆದರೆ ಸಂವಿಧಾನ ಜಾರಿಗೆ ತರಲು ಮುಂದಾದಾಗ ಆರ್‌ಎಸ್‌ಎಸ್‌ನ ಗೋಳ್ವಾಲ್ಕರ್ ಅವರು ಬೇರೆ ಬೇರೆ ದೇಶಗಳ ಸಂವಿಧಾನ ಆಧರಿಸಿ ಸಂವಿಧಾನ ರಚಿಸಲಾಗಿದೆ. ಈ ಸಂವಿಧಾನವನ್ನು ನಾವು ಒಪ್ಪಲ್ಲ, ಈ ಸಂವಿಧಾನವನ್ನು ಸುಡುತ್ತೇನೆ ಎಂಬ ಮಾತನ್ನು ರಾಮಲೀಲಾ ಮೈದಾನದಲ್ಲಿ ಹೇಳಿದ್ದರು ಎಂದರು.
ಈ ಮಾತಿಗೆ ಎದ್ದು ನಿಂತ ಎನ್.ರವಿಕುಮಾರ್, ಸಂವಿಧಾನವನ್ನು ಸುಡುತ್ತೇನೆ ಎಂದು ಹೇಳಿರುವುದು ಸುಳ್ಳು, ಈ ಬಗ್ಗೆ ದಾಖಲೆ ನೀಡಿ ಎಂದರು. ಬಿಜೆಪಿಯ ಪ್ರತಾಪ ಸಿಂಹ ನಾಯಕ್, ಭಾರತಿ ಶೆಟ್ಟಿ ಮುಂತಾದವರು ರವಿಕುಮಾರ್ ಅವರಿಗೆ ಬೆಂಬಲಿಸಿ ಮಾತನಾಡಿದರು.ಆಗ ಬಿ.ಕೆ. ಹರಿಪ್ರಸಾದ್ ಅವರು ತಾವು ಈಗಲೇ ರಾಜೀನಾಮೆ ಪತ್ರವನ್ನು ಸಭಾಪತಿಗೆ ಸಲ್ಲಿಸುತ್ತೇನೆ. ತಾವು ಹೇಳಿದ್ದನ್ನು ಸುಳ್ಳು ಎಂದು ಸಾಬೀತು ಪಡಿಸಿದರೆ ರಾಜೀನಾಮೆ ಅಂಗೀಕರಿಸಲಿ, ಸತ್ಯವಾಗಿದ್ದರೆ ಅವರು ರಾಜೀನಾಮೆ ಪತ್ರವನ್ನು ಈಗ ಕೊಡಲಿ ಎಂದು ಸವಾಲು ಹಾಕಿದರು. ಅದಕ್ಕೆ ರವಿಕುಮಾರ್ ಮತ್ತಿತರರು ರಾಜೀನಾಮೆ ಪತ್ರವನ್ನು ಮೊದಲು ಸಲ್ಲಿಸಿ ಎಂದು ಆಗ್ರಹಿಸಿದರು.
