ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಕೆಆರ್‌ಎಸ್ ಜಲಾಶಯದಿಂದ ಬೆಂಗಳೂರಿಗೆ ಕೊಳವೆಗಳ ಮೂಲಕ ಕುಡಿಯುವ ನೀರು ಪೂರೈಕೆಗೆ ರಾಜ್ಯ ಸರ್ಕಾರ ಡಿಪಿಆರ್ ಸಿದ್ಧಪಡಿಸಿರುವ ವಿರುದ್ಧ ಜಿಲ್ಲೆಯ ರೈತರು ಒಗ್ಗಟ್ಟಿನ ಹೋರಾಟ ಮಾಡಬೇಕು ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಪ್ರತಿನಿತ್ಯ 500 ಎಂಎಲ್‌ಡಿ ನೀರು ಸರಬರಾಜು ಮಾಡುವ ಸರ್ಕಾರದ ತೀರ್ಮಾನ ಮುಂದಿನ ದಿನಗಳಲ್ಲಿ ಜಿಲ್ಲೆಯ ರೈತರಿಗೆ ಮರಣ ಶಾಸನವಾಗಲಿದೆ ಎಂದು ಎಚ್ಚರಿಸಿದರು.
ಕೆಆರ್‌ಎಸ್ ಜಲಾಶಯ ವರುಣನ ಕೃಪೆಯಿಂದ ಮೂರನೇ ಬಾರಿ ತುಂಬಿದ್ದರೂ ಸಹ ಮದ್ದೂರು ತಾಲೂಕಿನ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಇನ್ನು ಎರಡನೇ ಬಾರಿ ಬೆಳೆ ಬೆಳೆಯಲು ರೈತರು ಹರಸಾಹಸ ಮಾಡುವ ಪರಿಸ್ಥಿತಿ ಇದೆ. ಇಂಥ ಪರಿಸ್ಥಿತಿಯಲ್ಲಿ ಬೆಂಗಳೂರಿಗೆ ಕೆಆರ್‌ಎಸ್ ಜಲಾಶಯದಿಂದ ನೀರು ಹರಿಸುವ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಆಗ್ರಪಡಿಸಿದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯಂತೆ ಬೆಂಗಳೂರಿಗೆ ಪ್ರತಿನಿತ್ಯ 500 ಎಂಎಲ್‌ಡಿ ನೀರು ಪೂರೈಕೆ ಮಾಡಿಕೊಂಡರೆ ಜಿಲ್ಲೆಯ ರೈತರ ಹಿಂಗಾರು ಹಂಗಾಮಿನ ಬೆಳೆಗೆ ನೀರಿನ ಕೊರತೆಯಾಗಲಿದೆ. ಈ ಬಗ್ಗೆ ರೈತರು ಯೋಜನೆ ಬಗ್ಗೆ ಧ್ವನಿ ಎತ್ತಿ ಹೋರಾಟ ಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಜೆಡಿಎಸ್ ಮುಖಂಡರಾದ ಮರಿ ಮಾದೇಗೌಡ, ಸಂತೋಷ್ ತಮ್ಮಣ್ಣ, ಹನುಮಂತೇಗೌಡ, ಕೆ.ಟಿ.ಸುರೇಶ್ ಮತ್ತು ಪ್ರವೀಣ್ ಭಾಗವಹಿಸಿದ್ದರು.70ಕ್ಕೂ ಹೆಚ್ಚು ಮಂದಿಗೆ ಕಿವಿ, ಮೂಗು,ಗಂಟಲು ತಪಾಸಣೆ
ಹಲಗೂರು: ಲಯನ್ಸ್ ಕ್ಲಬ್ ಆವರಣದಲ್ಲಿ ಮಂಡ್ಯ ಡಿಆರ್ ಎಂ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಸಹಯೋಗದಲ್ಲಿ ನಡೆದ ಉಚಿತ ಕಿವಿ, ಮೂಗು ಮತ್ತು ಗಂಟಲು ತಪಾಸಣಾ ಶಿಬಿರದಲ್ಲಿ ಸುಮಾರು 70ಕ್ಕೂ ಹೆಚ್ಚು ಮಂದಿಯ ಆರೋಗ್ಯ ತಪಾಸಣೆ ನಡೆಸಿದ ಡಾ.ಅರ್ಮಿನ್ ಫಾತಿಮಾ ತಮೂರು ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಆಸ್ಪತ್ರೆಗೆ ಬರುವಂತೆ ಸಲಹೆ ನೀಡಿದರು.ನಂತರ ಮಾತನಾಡಿದ ವೈದ್ಯರು, ಕಿವಿಗೆ ಬೀಗದ ಕೀ ಹಾಕುವುದು, ಕಿವಿ ನೋವು ಬಂದಾಗ ಕಡ್ಡಿ ಹಾಕುವುದು ಹಾಗೂ ಕಿವಿಯಲ್ಲಿರುವ ಗುಗ್ಗೆ ತೆಗೆಯಲು ಬಡ್ಸ್ ಹಾಕುವುದು, ಕೆಲವರು ಬಟ್ಟೆ ಪಿನ್ ಹಾಕಿ ಗುಗ್ಗೆಯನ್ನು ತೆಗೆಯಲು ಉಪಯೋಗಿಸುತ್ತಾರೆ. ಅದು ಅಪಾಯಕಾರಿ. ನಿಮಗೆ ಯಾವುದಾದರೂ ಸಮಸ್ಯೆ ಕಂಡು ಬಂದರೆ ಸಂಬಂಧಪಟ್ಟ ವೈದಾಧಿಕಾರಿಗಳ ಬಳಿಗೆ ಹೋಗಿ ತಪಾಸಣೆ ನಡೆಸಿಕೊಂಡು ಅವರು ನೀಡುವ ಸೂಚನೆ- ಸಲಹೆಗಳನ್ನು ಪಡೆದುಕೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಆಸ್ಪತ್ರೆ ಸಿಬ್ಬಂದಿಯನ್ನು ಹಲಗೂರು ಲಯನ್ಸ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಎನ್.ಕೆ. ಕುಮಾರ್, ಕಾರ್ಯದರ್ಶಿ ಡಿ.ಎಲ್. ಮಾದೇಗೌಡ, ಖಜಾಂಜಿ ಶಿವರಾಜು, ಶಂಕರ್, ಸತೀಶ್, ಎಚ್. ಆರ್. ಪದ್ಮನಾಭ, ಎ.ಎಸ್. ದೇವರಾಜು, ಡಾ. ಶಂಶುದ್ದೀನ್, ಪ್ರವೀಣ್, ಮನೋಹರ್, ಶ್ರೀನಿವಾಸ್, ಪುಟ್ಟಸ್ವಾಮಿ ಹಾಜರಿದ್ದರು.