ಸರ್ಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆ ನಿರ್ಮಾಣಕ್ಕೆ ಡಿಪಿಆರ್‌ ತಯಾರಿ ಟೆಂಡರ್‌ ಪ್ರಕ್ರಿಯೆ ಶುರು: ಅಶೋಕ್‌ ರೈ

| Published : Apr 24 2025, 11:49 PM IST

ಸರ್ಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆ ನಿರ್ಮಾಣಕ್ಕೆ ಡಿಪಿಆರ್‌ ತಯಾರಿ ಟೆಂಡರ್‌ ಪ್ರಕ್ರಿಯೆ ಶುರು: ಅಶೋಕ್‌ ರೈ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ಮೆಡಿಕಲ್ ಕಾಲೇಜಿಗೆ ಪೂರಕವಾಗಿ ಬನ್ನೂರು ಗ್ರಾಮದ ಸೇಡಿಯಾಪು ನಲ್ಲಿ ೩೦೦ ಹಾಸಿಗೆ ಆಸ್ಪತ್ರೆ ನಿರ್ಮಾಣ ಹಾಗೂ ಕಾಪು, ವೆನ್‌ಲಾಕ್ ಸೇರಿದಂತೆ ಮೂರು ಆಸ್ಪತ್ರೆಗಳಿಗೆ ಡಿಪಿಆರ್ ತಯಾರಿಕೆಗೆ ರು.೧.೬೪ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಬಜೆಟಿನಲ್ಲಿ ಪ್ರಸ್ತಾಪಿತ ಪುತ್ತೂರು ಮೆಡಿಕಲ್ ಕಾಲೇಜಿಗೆ ಪೂರಕವಾಗಿ ಬನ್ನೂರು ಗ್ರಾಮದ ಸೇಡಿಯಾಪು ನಲ್ಲಿ ೩೦೦ ಹಾಸಿಗೆ ಆಸ್ಪತ್ರೆ ನಿರ್ಮಾಣ ಹಾಗೂ ಕಾಪು, ವೆನ್‌ಲಾಕ್ ಸೇರಿದಂತೆ ಮೂರು ಆಸ್ಪತ್ರೆಗಳಿಗೆ ಡಿಪಿಆರ್ ತಯಾರಿಕೆಗೆ ರು.೧.೬೪ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಆ ಮೂಲಕ ಮೆಡಿಕಲ್ ಕಾಲೇಜು ಆಗುವುದಿಲ್ಲ ಎಂಬ ಋಣಾತ್ಮಕ ಟೀಕೆಗಳಿಗೆ ಉತ್ತರ ದೊರೆತಂತಾಗಿದೆ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು ೫೦೦ ಬೆಡ್‌ಗೆ ಆಸ್ಪತ್ರೆ ಮೇಲ್ದರ್ಜೆಗೇರಿದರೆ ಅನುಕೂಲವಾಗಲಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಸೇಡಿಯಾಪಿನಲ್ಲಿ ಆಯುಷ್ ಆಸ್ಪತ್ರೆ, ನರ್ಸಿಂಗ್ ಕಾಲೇಜು, ಆಯುರ್ವೇದ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಿನ ಬಜೆಟ್‌ನಲ್ಲಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ತಿಳಿಸಲಾಗಿದೆ. ಮೆಡಿಕಲ್ ಕಾಲೇಜಿಗೆ ಪೂರಕವಾಗಿ ೪ ಸ್ಟಾರ್ ಹೊಟೇಲ್ ನ ಅಗತ್ಯವಿದೆ. ಇದು ಆರ್ಥಿಕವಾಗಿಯೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕೆಲವು ಕಂಪನಿಗಳ ಜತೆ ಚರ್ಚಿಸಲಾಗಿದೆ ಎಂದು ತಿಳಿಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಉಪ್ಪಿನಂಗಡಿ ಗ್ರಾಮದಲ್ಲಿ ನೇತ್ರಾವತಿ ಹಾಗೂ ಕುಮಾರಧಾರ ನದಿ ಸಂಗಮದಲ್ಲಿ ಕಿಂಡಿ ಅಣೆಕಟ್ಟು ಹಾಗೂ ಅಭಿವೃದ್ಧಿ ಕಾಮಗಾರಿ ರು.೩೫೩ ಕೋಟಿ ವೆಚ್ಚದಲ್ಲಿ ನಡೆಯಲಿದ್ದು, ಈ ಪೈಕಿ ದೇವಸ್ಥಾನದ ಅಭಿವೃದ್ಧಿ ಜತೆಗೆ ರಾಜ್ಯದ ಭಕ್ತರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಸತಿಗೃಹ, ಊಟದ ವ್ಯವಸ್ಥೆ ಆಗಬೇಕು. ಸುಮಾರು ರು. ೧೦ ಕೋಟಿ ವೆಚ್ಚದಲ್ಲಿ ವಸತಿಗೃಹ ಹಾಗೂ ಪಿಂಡಪ್ರಧಾನ ಕಾರ್ಯಗಳ ವ್ಯವಸ್ಥೆ ಆಗಲಿದೆ ಎಂದು ತಿಳಿಸಿದರು. ಕೇರಳ ಗಡಿ ಭಾಗವಾದ ಬೆಟ್ಟಂಪಾಡಿ-ಪಾಣಾಜೆ-ಕಾಟುಕುಕ್ಕೆ-ಅಡ್ಕಸ್ಥಳ, ಸಾರಡ್ಕ-ಅಡ್ಯನಡ್ಕ-ವಿಟ್ಲ-ಕಬಕ-ಪುತ್ತೂರು ಮಾರ್ಗವಾಗಿ ಬಸ್ಸಿನ ವ್ಯವಸ್ಥೆ ಮಾಡಲಾಗುವುದು. ಉಪ್ಪಿನಂಗಡಿ ಗ್ರಾಮದ ಬಜತ್ತೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕಾಗಿ ರು. ೨೨ ಕೋಟಿ ಅನುದಾನ ಬಿಡುಗಡೆಗೊಂಡಿದ್ದು ೬.೫ ಎಕ್ರೆ ಜಾಗದಲ್ಲಿ ಈ ಭವನ ನಿರ್ಮಾಣವಾಗಲಿದೆ. ಇದು ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದರು.ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯವರು ರು.೫೦ ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದು, ಈ ಪೈಕಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸರ್ವ ಅಭಿವೃದ್ಧಿಯೂ ನಡೆಯಲಿದೆ. ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಪಕ್ಷಾತೀತವಾಗಿ ಸುಮಾರು ೨೦ ಜನರ ತಂಡದ ಸಮಿತಿ ರಚಿಸಲಾಗುವುದು. ಇದಕ್ಕಾಗಿ ಉದ್ಯಮಿಗಳು, ಎಲ್ಲಾ ಪಕ್ಷದವರನ್ನು ಸೇರಿಸಿಕೊಳ್ಳಲಾಗುವುದು. ಇದಕ್ಕಾಗಿ ರು. ೫೦ ಕೋಟಿ ರೂಪಾಯಿಯ ಮಾಸ್ಟರ್ ಪ್ಲಾನ್ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ ಜಿಲ್ಲೆಯಲ್ಲೇ ಅತೀ ಎತ್ತರದ ರಾಷ್ಟ್ರೀಯ ಧ್ವಜಸ್ತಂಭ ನಿರ್ಮಾಣ ಮಾಡಲು ಈಗಾಗಲೇ ನಗರಸಭೆಯಿಂದ ಮಂಜೂರಾತಿಗೊಂಡಿದೆ. ಇದರ ಪ್ರಥಮ ಹಂತದಲ್ಲಿ ಮಣ್ಣು ಪರೀಕ್ಷೆ ಮಾಡಲು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.ಮೇ ೧೭ಕ್ಕೆ ಕಾಂಗ್ರೆಸ್ ಕುಟುಂಬ ಸಮ್ಮಿಲನಪುತ್ತೂರಿನಲ್ಲಿ ಮೇ ೧೭ ರಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಕಾಂಗ್ರೆಸ್ ಕುಟುಂಬ ಸಮ್ಮಿಲನ ಎಪಿಎಂಸಿ ಸಭಾಂಗಣದ ಹೊರ ಆವರಣದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಕಾರ್ಯಾಗಾರವನ್ನೂ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯದ ಕಾರ್ಯಕಾರಿ ಅಧ್ಯಕ್ಷ ಚಂದ್ರಶೇಖರ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.