ಈ ಹಿಂದೆ ರಾಷ್ಟ್ರಮಟ್ಟದಲ್ಲಿ ಪದ್ಮಶ್ರೀ, ಪದ್ಮಭೂಷಣದಂತಹ ಪ್ರಶಸ್ತಿಗಳು ಶ್ರೀಮಂತರಿಗೆ, ಉದ್ಯಮಿಗಳಿಗೆ ಮೀಸಲಾಗಿದ್ದವು. ಆದರೆ, ಭಾರತದ ಪ್ರಧಾನಿಯಾದ ನಂತರ ನರೇಂದ್ರ ಮೋದಿ ಅವರು ದೇಶದಲ್ಲಿ ಎಲೆಮರೆಕಾಯಿಯಂತೆ ದುಡಿದು ಸಾಧನೆ ಮಾಡುತ್ತಿರುವ ಸಾಧಕರನ್ನು ಗುರುತಿಸಿ, ಅವರಿಗೆ ಅತ್ಯುನ್ನತ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಚಿತ್ರನಟ, ರೆಬಲ್ ಸ್ಟಾರ್ ಡಾ.ಅಂಬರೀಶ್ ಅವರಲ್ಲಿದ್ದ ಸೇವಾ ಮನೋಭಾವದ ಗುಣಗಳಿಂದಾಗಿ ನಮ್ಮನ್ನಗಲಿ 8 ವರ್ಷಗಳು ಕಳೆದರೂ ಅಭಿಮಾನಿಗಳ ಪಾಲಿಗೆ ಜೀವಂತವಾಗಿದ್ದಾರೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.ಇಲ್ಲಿನ ಪೊಲೀಸ್ ಠಾಣೆ ಮುಂಭಾಗ ಮದ್ದೂರು ತಾಲೂಕು ಡಾ.ಅಂಬರೀಶ್ ಅಭಿಮಾನಿಗಳ ಒಕ್ಕೂಟ ಮತ್ತು ಎಂ.ಎಚ್. ಅಂಬರೀಶ್ ಫೌಂಡೇಶನ್ ವತಿಯಿಂದ ರೆಬೆಲ್ ಸ್ಟಾರ್ ಅಂಬರೀಶ್ ಅವರ 74ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಡಾ.ಅಂಬಿ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಅಂಬಿ ಕಾಯಕ ಸೇವಾ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬರೀಶ್ ಅವರು ಸಿನಿಮಾ, ರಾಜಕೀಯ ಎರಡು ಕ್ಷೇತ್ರಗಳಲ್ಲೂ ಅಜಾತಶತ್ರುವಾಗಿದ್ದರು. ಸಂಸದರಾಗಿ, ಕೇಂದ್ರ ಸಚಿವರಾಗಿ, ಮಂಡ್ಯ ಕ್ಷೇತ್ರದ ಶಾಸಕರಾಗಿ, ರಾಜ್ಯದ ವಸತಿ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜಿಲ್ಲೆಗೆ ಕೊಡುಗೆ ನೀಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿದ್ದು ಜಿಲ್ಲೆಗೆ ನೀಡಿದ ಹಲವು ಕೆಲಸಗಳು ಶಾಶ್ವತವಾಗಿವೆ ಎಂದು ತಿಳಿಸಿದರು.ಅಂಬರೀಶ್ ರವರಿಗೆ ಹುಟ್ಟೂರು ಹಾಗೂ ಈ ಭಾಗದ ಜನರನ್ನು ಕಂಡರೆ ಅಪಾರ ಪ್ರೀತಿ. ಯಾರೇ ಅಭಿಮಾನಿಗಳು ಕಷ್ಟ ಅಂತ ಬಂದರೆ ತಕ್ಷಣ ಸ್ಪಂದಿಸಿ ಅವರಿಗೆ ನೆರವಾಗುತ್ತಿದ್ದರು. ಇವರು ಸಿನಿಮಾ ರಂಗದಲ್ಲಿ ಸಲ್ಲಿಸಿದ ಸೇವೆ, ಜನಪರ ಕಾರ್ಯಗಳು ಇಂದಿಗೂ ಜೀವಂತವಾಗಿದ್ದು, ಹಲವರಿಗೆ ಆರಾಧ್ಯ ದೈವವೆನಿಸಿದ್ದಾರೆ ಎಂದು ಬಣ್ಣಿಸಿದರು.
ನಾನು ಮಂಡ್ಯದ ಸಂಸದೆಯಾದ ನಂತರ ಜಿಲ್ಲೆಯ ಎಲ್ಲಾ ಭಾಗಗಳಿಗೂ ಭೇಟಿ ನೀಡಿದ್ದೇನೆ. ಆದರೆ, ಮದ್ದೂರು ತಾಲೂಕಿಗೆ, ಕೆ.ಎಂ. ದೊಡ್ಡಿ ಭಾಗಕ್ಕೆ ಭೇಟಿ ನೀಡಿದಾಗ ನಮ್ಮ ಊರ ಸೊಸೆಯಾಗಿ ಬರುತ್ತೇನೆ. ಈ ವಿಷಯ ನನಗೆ ಹೆಚ್ಚು ಸಂತೋಷ ನೀಡುತ್ತದೆ ಎಂದರು.ಪ್ರಧಾನಿ ಮೋದಿಯವರ ಕಾರ್ಯ ಶ್ಲಾಘನೀಯ:
ಈ ಹಿಂದೆ ರಾಷ್ಟ್ರಮಟ್ಟದಲ್ಲಿ ಪದ್ಮಶ್ರೀ, ಪದ್ಮಭೂಷಣದಂತಹ ಪ್ರಶಸ್ತಿಗಳು ಶ್ರೀಮಂತರಿಗೆ, ಉದ್ಯಮಿಗಳಿಗೆ ಮೀಸಲಾಗಿದ್ದವು. ಆದರೆ, ಭಾರತದ ಪ್ರಧಾನಿಯಾದ ನಂತರ ನರೇಂದ್ರ ಮೋದಿ ಅವರು ದೇಶದಲ್ಲಿ ಎಲೆಮರೆಕಾಯಿಯಂತೆ ದುಡಿದು ಸಾಧನೆ ಮಾಡುತ್ತಿರುವ ಸಾಧಕರನ್ನು ಗುರುತಿಸಿ, ಅವರಿಗೆ ಅತ್ಯುನ್ನತ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಾಂಡವಪುರ ಪುಸ್ತಕ ಮನೆಯ ಎನ್.ಅಂಕೇಗೌಡ, ಜಿಲ್ಲೆಯ ಹೆಸರಾಂತ ಕೀಲುಮೂಳೆ ತಜ್ಞ ಡಾ.ಎಚ್.ಎಸ್.ರವಿಕುಮಾರ್, ಮಂಡ್ಯ ಜಿಲ್ಲಾ ರಕ್ತದಾನಿ, ನೆಲದನಿ ಬಳಗದ ಅಧ್ಯಕ್ಷ ಎಂ.ಸಿ ಲಂಕೇಶ್ ಅವರ ಸಮಾಜ ಸೇವೆ ಪರಿಗಣಿಸಿ ಅಂಬಿ ಕಾಯಕ ಸೇವಾ ಪ್ರಶಸ್ತಿ ಹಾಗೂ ₹25 ಸಾವಿರ ನಗದು ನೀಡಿ ಗೌರವಿಸಲಾಯಿತು. ಇದೇ ವೇಳೆ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಐಪಿಎಸ್ ಹುದ್ದೆಗೆ ಆಯ್ಕೆಯಾಗಿರುವ ಜಿಲ್ಲೆಯ ಪ್ರತಿಭಾನ್ವಿತ ರೈತ ಕುಟುಂಬದ ಪ್ರತಿಭೆ ಧನಂಜಯ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಾದ ಟಿ.ಸಹನಾ, ಸಂಜನಾ, ತೇಜಸ್ವಿನಿ, ಫೈಜಾ ಅಲಿ ಸೈಯದ್ ಅವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸ್ಥಳೀಯವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ನಟ, ಅಂಬಿ ಪುತ್ರ ಅಭಿಷೇಕ ಅಂಬರೀಶ್, ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ಜಿಪಂ ಮಾಜಿ ಸದಸ್ಯ ವಿವೇಕಾನಂದ, ಹನಕೆರೆ ಶಶಿಕುಮಾರ್, ಒಕ್ಕೂಟದ ಅಧ್ಯಕ್ಷ ಮುಟ್ಟನಹಳ್ಳಿ ಮಹೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಕುದುರುಗುಂಡಿ ನಾಗೇಶ್, ಬಸವರಾಜು, ಸಿ.ಎ ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ಮರಿಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.