ಧ್ವನಿ ಇಲ್ಲದವರ ಧ್ವನಿಯಾಗಿ, ಶಿಕ್ಷಣಕ್ಕೆ ಆದ್ಯತೆ ನೀಡಿ, ದೇಶದ ಹಿತಕ್ಕೆ ಹಿರಿದಾದ ಸಂವಿಧಾನದ ಕೊಡುಗೆ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸುದೀರ್ಘ ಕಾಲ ಲೋಕ ಸಭೆಯಲ್ಲಿದ್ದು, ಸತ್ಯ ನಿಷ್ಠ ಸ್ವಾಭಿಮಾನದ ಆಡಳಿತಕ್ಕೆ ಸಾಕ್ಷಿಯಾದ ಡಾ. ಬಾಬು ಜಗಜೀವನರಾಂ ಭಾರತದ ಭವ್ಯ ನಕ್ಷತ್ರಗಳು ಎಂದು ತಾಲೂಕು ತಹಸೀಲ್ದಾರ ಎಸ್. ರೇಣುಕಾ ತಿಳಿಸಿದರು.
ಹಾನಗಲ್ಲ: ಧ್ವನಿ ಇಲ್ಲದವರ ಧ್ವನಿಯಾಗಿ, ಶಿಕ್ಷಣಕ್ಕೆ ಆದ್ಯತೆ ನೀಡಿ, ದೇಶದ ಹಿತಕ್ಕೆ ಹಿರಿದಾದ ಸಂವಿಧಾನದ ಕೊಡುಗೆ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸುದೀರ್ಘ ಕಾಲ ಲೋಕ ಸಭೆಯಲ್ಲಿದ್ದು, ಸತ್ಯ ನಿಷ್ಠ ಸ್ವಾಭಿಮಾನದ ಆಡಳಿತಕ್ಕೆ ಸಾಕ್ಷಿಯಾದ ಡಾ. ಬಾಬು ಜಗಜೀವನರಾಂ ಭಾರತದ ಭವ್ಯ ನಕ್ಷತ್ರಗಳು ಎಂದು ತಾಲೂಕು ತಹಸೀಲ್ದಾರ ಎಸ್. ರೇಣುಕಾ ತಿಳಿಸಿದರು.ಮಂಗಳವಾರ ಹಾನಗಲ್ಲಿನ ಬಾಬು ಜಗಜೀವನರಾಂ ಭವನದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಹಾಗೂ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಅಸಮಾನತೆಯನ್ನು ದೂರ ಮಾಡಲು ದೊಡ್ಡ ಪ್ರಮಾಣದಲ್ಲಿ ಶ್ರಮಿಸಿದ ಕೀರ್ತಿ ಹಾಗೂ ಸ್ವಾಭಿಮಾನದ ಹಿರಿಮೆ ಈ ಇಬ್ಬರೂ ಮಹನೀಯರಿಗೆ ಸಲ್ಲುತ್ತದೆ. ಶಿಕ್ಷಣ ಪಡೆದರೆ ಅದುವೇ ಬದಲಾವಣೆಗೆ ಸ್ಫೂರ್ತಿ. ಎಲ್ಲದಕ್ಕೂ ಹೋರಾಟ ಬೇಕು ಎಂಬ ಸ್ಥಿತಿ ಇದೆ. ಆದರೆ ದೇಶಕ್ಕಾಗಿ, ಸಮಾನತೆಗಾಗಿ ಹೋರಾಡಿದ ಮಹನೀಯರು ಭವ್ಯ ನಕ್ಷತ್ರದಂತೆ ಕಂಗೊಳಿಸುತ್ತಾರೆ. ದೇಶದ ಹಿತಕ್ಕಾಗಿ ವಿಭಜಕ, ವಿಧ್ವಂಸಕ ಕೃತ್ಯಗಳನ್ನು ವಿರೋಧಿಸುವ ಅಗತ್ಯವಿದೆ. ಮನುಷ್ಯನಿಗೆ ಈಗ ಸ್ವಾಭಿಮಾನದ ಅಗತ್ಯವಿದೆ. ಭಾರತಕ್ಕೆ ಗಟ್ಟಿಯಾದ ಸಂವಿಧಾನ ನೀಡಿದ್ದರಿಂದಲೇ ಈಗ ಭಾರತ ತಲೆ ಎತ್ತಿ ನಿಲ್ಲುವಂತಾಗಿದೆ ಎಂದರು.ದಲಿತ ಮುಖಂಡ ಹನುಮಂತಪ್ಪ ಯಳ್ಳೂರ ಮಾತನಾಡಿ, ಸಮಾಜದ ಏಳಿಗೆಗೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ. ಕಾನೂನಿನಡಿಯಲ್ಲಿ ನಮ್ಮ ರಕ್ಷಣೆಗೆ ಮುಂದಾಗೋಣ. ನಾವೆಲ್ಲ ಒಟ್ಟಾಗಿದ್ದರೆ ಎಲ್ಲವನ್ನೂ ಎದುರಿಸಲು ಸಾಧ್ಯ. ಒಗ್ಗಟ್ಟೆ ಬಲ ಎಂಬುದರ ಅರಿವು ನಮಗೆ ಇರಲಿ. ಡಾ.ಬಿ.ಆರ್.ಅಂಬೇಡ್ಕರ ನಮಗೆಲ್ಲ ದೇವರ ಸಮಾನ ಎಂದರು.ಇದೇ ಸಂದರ್ಭದಲ್ಲಿ ಹಾವೇರಿ ವಿಶ್ವವಿದ್ಯಾಲಯದ ಎಂಎ ಪದವಿಯಲ್ಲಿ ಚಿನ್ನದ ಪದಕ ವಿಜೇತ ನೇತ್ರಾ ಹರಿಜನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗಂಗಾ ಹರಿಜನ ಡಾ. ಬಿ.ಆರ್.ಅಂಬೇಡ್ಕರ್ ಕುರಿತ ಗೀತೆ ಹಾಡಿ ಸಭಾಸದರ ಮೆಚ್ಚುಗೆಗೆ ಪಾತ್ರಳಾದಳು. ಹೊನ್ನಪ್ಪ ಬಿ., ಎಚ್.ಎಸ್. ಬಾರ್ಕಿ ಮಾತನಾಡಿದರು.ವೇದಿಕೆಯಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ವಿಜಯಕುಮರ ದೊಡ್ಡಮನಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುನಾಥ ಗವಾಣಿಕರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ರಡ್ಡೇರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಿ.ಬಿ. ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ, ಸಿಪಿಐ ಬಿ.ಕೆ. ಹಳಬಣ್ಣನವರ, ಗಣ್ಯರಾದ ಉಮೇಶ ದೊಡ್ಡಮನಿ, ನಿಂಗಪ್ಪ ಕಾಳೇರ, ಹನುಮಂತಪ್ಪ ಕೋಣನಕೊಪ್ಪ, ಸಿದ್ದಲಿಂಗಪ್ಪ ಕಮಡೊಳ್ಳಿ, ಸೊಮಶೇಖರ ಕೋತಂಬರಿ, ರಾಜಕುಮಾರ ಶಿರಪಂಥಿ, ಜಗದೀಶ ಹರಿಜನ, ದಾನಪ್ಪ ಗಂಟೇರ, ಶಿವಾನಂದ ಭಜಂತ್ರಿ, ಸಿ.ಮಂಜುನಾಥ, ಹನುಮಂತಪ್ಪ ಮರಗಡಿ, ಮಂಜುನಾಥ ಗೊರನವರ, ಮಹಮ್ಮದಲಿ ಬಂಕಾಪುರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಬಾಲಚಂದ್ರ ಅಂಬಿಗೇರ ಹಾಗೂ ನಾಗರಾಜ ಅವರು ಡಾ. ಅಂಬೇಡ್ಕರ ಮತ್ತು ನಾಡಗೀತೆ ಹಾಡಿದರು. ಸಿದ್ದು ಗೌರಣ್ಣನವರ ಕಾರ್ಯಕ್ರಮ ನಿರೂಪಿಸಿದರು.ಮೆರವಣಿಗೆ: ತಾಲೂಕು ಪಂಚಾಯತ್ ಆವರಣದಲ್ಲಿರುವ ಡಾ. ಬಿ.ಅರ್. ಅಂಬೇಡ್ಕರ ಪುತ್ಥಳಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ಡಾ.ಬಾಬು ಜಗಜೀವನರಾಂ ಭವನದವರೆಗೆ ವಾದ್ಯ ವೈಭವಗಳೊಂದಿಗೆ ಡಾ.ಬಿ.ಅರ್. ಅಂಬೇಡ್ಕರ ಹಾಗೂ ಡಾ.ಬಾಬು ಜಗಜೀವನರಾಂ ಅವರ ಭಾವಬಿಂಬದ ಮೆರವಣಿಗೆ ನಡೆಯಿತು.