ಶಿಗ್ಗಾಂವಿ: ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಮ್ ಅವರು ಈ ದೇಶದ ಎರಡು ಅರಿವಿನ ಕಣ್ಣುಗಳಿದ್ದಂತೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಹೇಳಿದರು.ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಕೋಶದಿಂದ ಗುರುವಾರ ಏರ್ಪಡಿಸಿದ್ದ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ್ ರವರ ೧೧೯ನೇ ಮತ್ತು ಭಾರತ ರತ್ನ, ಡಾ. ಬಿ.ಆರ್. ಅಂಬೇಡ್ಕರ್ ೧೩೫ನೇ ಜನ್ಮ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಈ ದೇಶದ ಅಸ್ಪೃಸ್ಯರು, ಶೋಷಿತರು, ದಮನಿತರಿಗೆ ನಡೆಯಲು, ನುಡಿಯಲು, ತೊಡಲು, ಸ್ವಾಭಿಮಾನದ ಬದುಕು ನಡೆಸಲು ಡಾ. ಬಾಬಾಸಾಹೇಬ ಅಂಬೇಡ್ಕರ್ ತಮ್ಮ ಬದುಕನ್ನೇ ಸಮರ್ಪಿಸಿದರು. ಸಂವಿಧಾನವನ್ನು ರಚಿಸುವ ಮೂಲಕ ಸರ್ವರಿಗೂ ಸ್ವಾತಂತ್ರ‍್ಯ, ಸಮಾನತೆಯ ಬದುಕಿನ ಅವಕಾಶ ಕಲ್ಪಿಸಿಕೊಟ್ಟರು ಎಂದರು.

ಡಾ.ಬಾಬು ಜಗಜೀವನರಾಮ್ ಅವರು ಸಹ ಈ ದೇಶಕ್ಕೆ ವಿಶಿಷ್ಟ ಕೊಡುಗೆ ನೀಡಿ ಸಮಾನತೆಯ ಸದುದ್ದೇಶದ ಸಾಕಾರಕ್ಕೆ ತಮ್ಮ ಬದುಕನ್ನೇ ಮೀಸಲಿಟ್ಟಿದ್ದರು. ಹೀಗಾಗಿ, ಈ ಎರಡು ಮಹಾನ್ ಚೇತನಗಳು ಈ ದೇಶದ ಎರಡು ಅರಿವಿನ ಕಣ್ಣುಗಳಿದ್ದಂತೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಹಿರಿಯ ಚಿಂತಕ ಡಾ. ಬಿ.ಎಂ. ಪುಟ್ಟಯ್ಯ ಅವರು, ಬಹಳ ಕ್ಲಿಷ್ಟಕರವಾದ ಸಮಸ್ಯೆಗಳ ಸುಳಿಗಳಲ್ಲಿ ಸಿಲುಕಿದ್ದ ಈ ದೇಶದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವದ ಬದುಕನ್ನು ಕಲ್ಪಿಸುವ ನಿಟ್ಟಿನಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ನೀಡಿದ ಸಂವಿಧಾನ ಎಲ್ಲರ ಪಾಲಿನ ಧರ್ಮ ಗ್ರಂಥವಿದ್ದಂತೆ ಎಂದರು.

ಸ್ವಾತಂತ್ರ‍್ಯ, ಸಮಾನತೆ, ಸಹಬಾಳ್ವೆ, ಸ್ವಾಭಿಮಾನದ ಬದುಕನ್ನು ನಮ್ಮ ಸಂವಿಧಾನ ಖಾತ್ರಿ ಪಡಿಸುತ್ತದೆ. ಆದರೆ, ಸಂವಿಧಾನದ ಈ ಆಶಯಗಳನ್ನು ದೇಶವನ್ನಾಳಿದ ಸರಕಾರಗಳು ಅನುಷ್ಠಾನಗೊಳಿಸಲೇ ಇಲ್ಲ. ಹೀಗಾಗಿ, ಇಂದಿಗೂ ಭಾರತದಲ್ಲಿ ಜಾತಿ, ಲಿಂಗ ತಾರತಮ್ಯ ತಾಂಡವಾಡುತ್ತಿದೆ. ಆರ್ಥಿಕ ಅಸಮಾನತೆ, ಶೋಷಣೆ ನಿರಂತರವಾಗಿ ಮುಂದುವರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂವಿಧಾನದ ಆಶಯಗಳನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕರೆ ನೀಡಿದರು.


ಅಲ್ಲದೇ ಇನ್ನು ಮುಂದೆ ಎಲ್ಲ ಕಾರ್ಯಕ್ರಮಗಳಲ್ಲಿ ಮತ್ತು ಅಂಬೇಡ್ಕರ್ ಹೆಸರಿನಲ್ಲಿರುವ ಎಲ್ಲ ಸಂಸ್ಥೆಗಳ ಹೆಸರನ್ನು ಡಾ.ಬಾಬಾಸಾಹೇಬ ಅಂಬೇಡ್ಕರ್ ಎಂದು ಬಳಸಬೇಕು ಮತ್ತು ರಾಜ್ಯದಲ್ಲಿ ಎಲ್ಲ ಸರಕಾರಿ ಹಾಗೂ ಖಾಸಗಿ ಬ್ಯಾಂಕಗಳಲ್ಲಿ ಡಾ.ಬಾಬಾಸಾಹೇಬರ ಭಾವಚಿತ್ರ ಹಾಕುವಂತೆ ಸರಕಾರಕ್ಕೆ ಅವರು ಹಕ್ಕೊತ್ತಾಯ ಮಂಡಿಸಿದರು. ಇದಕ್ಕೆ ಸಭಿಕರು ಚೆಪ್ಪಾಳೆ ತಟ್ಟುವ ಮೂಲಕ ಅನುಮೋದನೆ ನೀಡಿದರು.ಇದೇ ಸಂದರ್ಭದಲ್ಲಿ ಡಾ. ಬಾಬು ಜಗಜೀವನರಾಮ್ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿಶ್ವನಾಥ ಎಚ್ ಅವರು, ಜಾತಿ ಶೋಷಣೆ, ಕಷ್ಟ ಕೊಟಲೆ ತಾರತಮ್ಯದಿಂದ ಕೂಡಿದ್ದ ವಿಷಮ ಸಾಮಾಜಿಕ ಪರಿಸ್ಥಿತಿಯಲ್ಲಿ ಬಾಬು ಜಗಜೀವನರಾಮ್ ತಮ್ಮ ಬಾಲ್ಯವನ್ನು ಕಳೆದರು. ಎಳೆ ವಯಸ್ಸಿನಿಂದಲೆ ಅಪ್ರತಿಮ ಪ್ರತಿಭಾವಂತರಾಗಿದ್ದ ಅವರು, ಈ ಅನಿಷ್ಟಗಳನ್ನು ಮೆಟ್ಟಿನಿಂತು ದೇಶದ ಉಪ ಪ್ರಧಾನಿ ಹುದ್ದೆಯವರೆಗೆ ಬೆಳೆದು ನಿಂತರು ಎಂದು ಹೇಳಿದರು. ದೇಶದಲ್ಲಿ ಅಹಾರ ಕೊರತೆ ಎದುರಾದಾಗ ಹಸಿರು ಕ್ರಾಂತಿಯ ಮೂಲಕ ದೇಶದ ಜನರ ಹಸಿವನ್ನು ನೀಗಿಸಿದ ಮಹಾನ್ ವ್ಯಕ್ತಿ ಬಾಬೂಜಿ ಎಂದು ತಿಳಿಸಿದರು. ಕಾರ್ಮಿಕ ಹಕ್ಕುಗಳು, ಶೋಷಿತ, ದಮನಿತರ ಧ್ವನಿಯಾಗಿದ್ದ ಅವರ ಬದುಕು, ಹೋರಾಟ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ವಿಶ್ವನಾಥ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಡಾ.ಕೆ. ಶಿವಶಂಕರ, ಎನ್ನೆಸ್ಸೆಸ್‌ ಸಂಯೋಜನಾಧಿಕಾರಿ ಡಾ.ಗಿರೇಗೌಡ ಅರಳಿಹಳ್ಳಿ, ಹಿರಿಯ ಸಂಶೋಧನಾಧಿಕಾರಿ ಡಾ.ಕೆ. ಪ್ರೇಮಕುಮಾರ, ಸಹಾಯಕ ಪ್ರಾಧ್ಯಾಪಕ ಡಾ. ವೆಂಕನಗೌಡ ಪಾಟೀಲ, ಡಾ. ಬಸವರಾಜ ಸಿ., ಡಾ. ಅರುಣ ಅಂಗಡಿ, ಡಾ. ಚಂದ್ರಪ್ಪ ಸೊಬಟಿ, ಸಹಾಯಕ ಗ್ರಂಥಪಾಲಕ ಶಂಕರಗೌಡ ಮಾಲಿಪಾಟೀಲ ಸೇರಿದಂತೆವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು. ಡಾ. ಮಲ್ಲಿಕಾರ್ಜುನ ಮಾನ್ಪಡೆ ನಿರೂಪಿಸಿದರು. ಸಹಾಯಕ ಕುಲಸಚಿವ ಶಹಜಾನ ಮುದಕವಿ ಸ್ವಾಗತಿಸಿದರು.