ಡಾ. ಅಂಬೇಡ್ಕರ್, ಡಾ. ಜಗಜೀವನರಾಂ ಸದಾ ಸ್ಮರಣೀಯರು: ದಿನಕರ ಶೆಟ್ಟಿ

| Published : Apr 15 2025, 12:53 AM IST

ಡಾ. ಅಂಬೇಡ್ಕರ್, ಡಾ. ಜಗಜೀವನರಾಂ ಸದಾ ಸ್ಮರಣೀಯರು: ದಿನಕರ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಮಟಾದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನರಾಂ ಅವರ ೧೧೮ನೇ ಜಯಂತಿ ಮತ್ತು ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಶಾಸಕ ದಿನಕರ ಶೆಟ್ಟಿ ಪುಷ್ಪನಮನ ಸಲ್ಲಿಸಿದರು.

ಕುಮಟಾ: ಭಾರತಕ್ಕೆ ವಿಶ್ವದ ಶ್ರೇಷ್ಠ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದೇಶದಲ್ಲಿ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಅವರನ್ನು ಈ ದೇಶ ಯಾವತ್ತೂ ಮರೆಯುವುದಿಲ್ಲ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಕಾರ್ಯಾಲಯದಲ್ಲಿ ತಾಲೂಕಾಡಳಿತ, ಪುರಸಭೆ, ತಾಪಂ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ ೧೧೮ನೇ ಜಯಂತಿ ಮತ್ತು ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಡಾ. ಅಂಬೇಡ್ಕರ್‌ ನೀಡಿದ ಸಂವಿಧಾನವು ನಮಗೆ ಮೂಲಭೂತ ಹಕ್ಕು, ಕರ್ತವ್ಯಗಳು ಹಾಗೂ ಸುರಕ್ಷಿತತೆಯನ್ನು ನೀಡಿದರೆ, ಜಗಜೀವನರಾಂ ಅವರ ಹಸಿರು ಕ್ರಾಂತಿಯು ದೇಶದ ಬೆನ್ನೆಲುಬಾದ ರೈತ ಸಮುದಾಯ ಹಾಗೂ ರಾಷ್ಟ್ರದ ಭವಿಷ್ಯವನ್ನು ಸುಭದ್ರಗೊಳಿಸಿದೆ ಎಂದರು.

ಡಾ. ಬಾಬು ಜಗಜೀವನರಾಂ ಕುರಿತು ಗೋಕರ್ಣ ಭದ್ರಕಾಳಿ ಪಿಯು ಕಾಲೇಜು ಉಪನ್ಯಾಸಕ ನರಸಿಂಗ ಲಮಾಣಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಕೃಷ್ಣ ನಾಯ್ಕ ಉಪನ್ಯಾಸ ನೀಡಿದರು. ಸಾಧಕರನ್ನು ಗೌರವಿಸಲಾಯಿತು.

ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ್‌ ಶ್ರೀಕೃಷ್ಣ ಕಾಮಕರ, ಗ್ರೇಡ್-೨ ತಹಸೀಲ್ದಾರ್‌ ಸತೀಶ ಗೌಡ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಭಾರತಿ ಆಚಾರ್ಯ, ತಾಪಂ ಇಒ ರಾಜೇಂದ್ರ ಎಲ್. ಭಟ್, ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಸಿಪಿಐ ಯೋಗೀಶ, ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ವಿನಾಯಕ ಭಂಡಾರಿ, ವಿವಿಧ ಇಲಾಖೆಯ ಅಧಿಕಾರಿ-ಸಿಬ್ಬಂದಿ ಇದ್ದರು. ಕಮಲಾ ಬಾಳಿಗಾ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಸತೀಶ ಭಟ್ ಕಾರ್ಯಕ್ರಮ ನಿರ್ವಹಿಸಿದರು.