ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇಲ್ಲಿನ ಚೆನ್ನಬಸಪ್ಪ ಸಭಾಂಗಣದಲ್ಲಿ ಮಂಗಳವಾರ ಡಾ. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಮಡಿಕೇರಿಯ ಸರಸ್ವತಿ ಡಿಎಡ್ ಕಾಲೇಜಿನ ಪ್ರಾಂಶುಪಾಲರಾದ ಕುಮಾರ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟಿದ ದಿನ ಆಚರಿಸಿಕೊಳ್ಳುವಂತ ಪರಿಸ್ಥಿತಿ ಅಂದು ಇರಲಿಲ್ಲ. ಇಂದು ಧೀಮಂತ ನಾಯಕ, ಮಹಾನ್ ನಾಯಕ ಎಂದು ಪ್ರಪಂಚದಲ್ಲಿ ಗುರುತಿಸಲಾಗಿದೆ. ಅವರು ನಮ್ಮ ದೇಶದ ನಾಯಕರಾಗಿಲ್ಲ. 198 ರಾಷ್ಟ್ರಗಳಲ್ಲಿ ಅಂಬೇಡ್ಕರ್ ಜನ್ಮ ದಿನಾಚರಣೆ ಆಚರಿಸುತ್ತಿರುವುದು ಅವರಿಗೆ ಸಂದ ಗೌರವವಾಗಿದೆ. ಅವರು ಪ್ರಪಂಚಕ್ಕೆ ಜ್ಞಾನವನ್ನು ನೀಡಿದ್ದಾರೆ ಎಂದರು.
ಸಮಾಜದಲ್ಲಿ ಇಂದು ಹೋರಾಟಗಳು ಅತಿಯಾಗುತ್ತಿವೆ. ಅದರ ಲಾಭ ಕೇವಲ ಸ್ವಂತಕ್ಕಾಗಿ ಮಾತ್ರ ಆಗುತ್ತಿದ್ದು, ಅದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಮುಖಂಡರು ಇಂತಹ ಹೋರಾಟಕ್ಕೆ ಅವಕಾಶ ಮಾಡಿಕೊಡುವುದು ಬೇಡ. ಯಾವುದೇ ಹೋರಾಟ ಮಾಡಿದ ತಕ್ಷಣ ಅದರ ಲಾಭ ಸಿಗುವುದಿಲ್ಲ. ಅದಕ್ಕೆ ಕಾಲಾವಕಾಶ ಬೇಕಿದೆ ಎಂದರು.ಸ್ವತಃ ಅನುಭವದ ಮೂಲಕ ಅಂಬೇಡ್ಕರ್ ಹೋರಾಟದ ರೂಪುರೇಷೆ ಸಿದ್ಧ ಮಾಡುತ್ತಿದ್ದರು. 13 ಗ್ರಂಥಗಳನ್ನು ರಚಿಸಿದ್ದಾರೆ. ಸತತ ಹೋರಾಟದ ಮೂಲಕ ಸಮಾಜಕ್ಕೆ ಅವರನ್ನು ಅರ್ಪಿಸಿಕೊಂಡಿದ್ದರು. ಯಾರಿಗೂ ಅಂಜದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ನಾಯಕರಾಗಿದ್ದರು. 12ನೇ ವಯಸ್ಸಿನಲ್ಲಿಯೇ ಸಮಾಜದ ಬಗ್ಗೆ ಚಿಂತಿಸಿದ್ದರು. ಕಾರ್ಮಿಕರು, ದೀನ ದಲಿತರು ಪರ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ. ಅವರ ಎಲ್ಲ ಆಲೋಚನೆಗಳು ಇಂದಿಗೂ ಜೀವಂತವಾಗಿವೆ. ಅವರ ಮಾರ್ಗದಲ್ಲಿ ನಾವೆಲ್ಲರೂ ಮುನ್ನೆಡೆಯಬೇಕಿದೆ. ಕೇವಲ ಕಾಟಾಚಾರಕ್ಕೆ ಜನ್ಮದಿನದ ಕಾರ್ಯಕ್ರಮವನ್ನು ಮಾಡದೆ, ಅಧಿಕಾರಿಗಳು ಮತ್ತು ನಮ್ಮ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಹಾನ್ ನಾಯಕನ ಜನ್ಮದಿನವನ್ನು ಆಚರಿಸಬೇಕು ಎಂದು ತಿಳಿಸಿದರು.ಕಾರ್ಯಕ್ರಮವನ್ನು ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಉದ್ಘಾಟಿಸಿದರು. ನಂತರ ಮಾತನಾಡಿ, ಅಂಬೇಡ್ಕರ್ ಅವರ ಜೀವನ ಚರಿತ್ರೆಗಾಗಿ ಅವರಿಗೆ ಸಂಬಂಧ ಪಠ್ಯ ಪುಸ್ತಕಗಳನ್ನು ಓದಬೇಕು. ಸಮಾಜದ ಪಿಡುಗು, ಅಸ್ಪೃಶ್ಯತೆ ಎಲ್ಲವನ್ನು ಬಗ್ಗೆ ನಿರ್ಧರಿಸಿದರು. 1947 ರ ನಂತರ ಸ್ವಾತಂತ್ರ್ಯದ ನಂತರ ನಮ್ಮ ಜೀವನ ಹೇಗಿರಬೇಕು ಎಂದು ತನ್ನ ಸಂವಿಧಾನದ ಮೂಲಕ ದೇಶಕ್ಕೆ ಅರ್ಪಣೆ ಮಾಡಿ, ಎಲ್ಲರೂ ಸರ್ವಸಮಾನರಾಗಿ ಬದುಕಬೇಕು ಹಾಗೂ ಸಮಾನತೆಯಿಂದ ಬದುಕುವಂತೆ ತಿಳಿಸಿದ್ದಾರೆ. ಅಂಬೇಡ್ಕರ್ ಜಯಂತಿ ಮಾಡುವ ಮೂಲಕ ಅವರನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ಜೀವನಪೂರ್ತಿ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಮನುಷ್ಯರಾಗಿ ಬದುಕಲು ಎಲ್ಲರೂ ಮುಂದಾಗಬೇಕೆಂದರು.ವೇದಿಕೆಯಲ್ಲಿ ಸೂಡ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ. ಅದಮ್, ಕೆಡಿಪಿ ಸದಸ್ಯ ವೇದಕುಮಾರ್, ಪ್ರಮುಖರಾದ ಜಯಪ್ಪ ಹಾನಗಲ್ಲು, ಬಿ.ಈ. ಜಯೇಂದ್ರ, ಹೊನ್ನಪ್ಪ, ಜಾನಕಿ ವೆಂಕಟೇಶ್, ಮೋಹಿನಿ, ತಾಲೂಕು ಪಂಚಾಯಿತಿ ಇಒ ಪರಮೇಶ ಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆರ್ ಎಫ್ ಒ ಶೈಲೇಂದ್ರಕುಮಾರ್, ಇನ್ಸಪೆಕ್ಟರ್ ಮುದ್ದುಮಹದೇವ, ಬಿಇಒ ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಇದ್ದರು.