ಶೋಷಿತ ವರ್ಗದವರಿಗೆ ಧ್ವನಿಯಾಗುವ ಮೂಲಕ ಅವರು ಜಗತ್ತಿಗೆ ಮಾನವೀಯತೆಯ ದಿಕ್ಸೂಚಿಯಾದರು. ರಾಷ್ಟ್ರಪ್ರೇಮ, ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಸಂವಿಧಾನದ ಪಾತ್ರ ಅನನ್ಯವಾದುದು.
ರೋಣ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯದ ನಾಯಕರಲ್ಲ. ಬದಲಿಗೆ ಇಡೀ ರಾಷ್ಟ್ರಕ್ಕೆ ದಿಕ್ಕು ತೋರಿಸಿದ ದಿಕ್ಸೂಚಿ, ಮಹಾನ್ ಚೇತನರಾಗಿದ್ದು, ಅವರ ತತ್ವ, ಸಂದೇಶ ಎಲ್ಲರಿಗೂ ದಾರಿದೀಪವಾಗಿವೆ ಎಂದು ಗಜೇಂದ್ರಗಡ ಎಸ್.ಎಂ. ಭೂಮರಡ್ಡಿ ಪಿಯು ಕಾಲೇಜಿನ ಉಪನ್ಯಾಸಕ ಜಿ.ಬಿ. ಗುಡಿಮನಿ ತಿಳಿಸಿದರು.
ಮಂಗಳವಾರ ಪಟ್ಟಣದ ಪುರಸಭೆ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಪುರಸಭೆಯ ಸಹಯೋಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 135ನೇ ಹಾಗೂ ಡಾ. ಬಾಬು ಜಗಜೀವನರಾಂ 119ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಶೋಷಿತ ವರ್ಗದವರಿಗೆ ಧ್ವನಿಯಾಗುವ ಮೂಲಕ ಅವರು ಜಗತ್ತಿಗೆ ಮಾನವೀಯತೆಯ ದಿಕ್ಸೂಚಿಯಾದರು. ರಾಷ್ಟ್ರಪ್ರೇಮ, ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಸಂವಿಧಾನದ ಪಾತ್ರ ಅನನ್ಯವಾದುದು. ಜಾತಿ ವ್ಯವಸ್ಥೆಯಿಂದ ಜರ್ಜರಿತವಾಗಿದ್ದ ಸಮಾಜಕ್ಕೆ ಸಮಾನತೆ ಎಂಬ ಹೊಸ ದಾರಿಯನ್ನು ಅಂಬೇಡ್ಕರ್ ತೋರಿಸಿಕೊಟ್ಟರು. ಸಂವಿಧಾನದ ಮೂಲಕ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕುಗಳನ್ನು ನೀಡಿ, ಸಾಮಾಜಿಕ ನ್ಯಾಯ ಕಲ್ಪಿಸಿದರು. ಅಂಬೇಡ್ಕರ್ ಸಾರಿದ ತತ್ವ, ಸಂದೇಶ, ಅವರ ಬದುಕು ಆದರ್ಶನೀಯವಾಗಿದೆ ಎಂದರು.
ಉಪನ್ಯಾಸಕ ಪುಂಡಲೀಕ ಮಾದರ, ಭಾರತದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸದಲ್ಲಿ ಬಾಬೂಜಿ ಎಂದೇ ಖ್ಯಾತರಾದ ಜಗಜೀವನರಾಂ ಅವರ ಕೊಡುಗೆ ಅಪಾರವಾಗಿದೆ. ಬಾಬು ಜಗಜೀವನರಾಂ ಅವರು ಭಾರತದ ಕೃಷಿ ಕ್ಷೇತ್ರದಲ್ಲಿ ತಂದ ಬದಲಾವಣೆಗಳು ದೇಶವನ್ನು ಹಸಿವಿನಿಂದ ಮುಕ್ತಗೊಳಿಸಿದವು. ಆ ಕಾಲಘಟ್ಟದಲ್ಲಿ ಅವರು ವಹಿಸಿದ ಪಾತ್ರ ಅನನ್ಯ. ಭಾರತವು ಆಹಾರಕ್ಕಾಗಿ ಇತರ ದೇಶಗಳ ಮೇಲೆ ಅವಲಂಬಿತವಾಗಿದ್ದ ಕಾಲದಲ್ಲಿ, ಕೃಷಿ ಸಚಿವರಾಗಿ ಅವರು ಹೊಸ ತಳಿಗಳ ಪರಿಚಯ ಮತ್ತು ನೀರಾವರಿ ಯೋಜನೆಗಳಿಗೆ ಒತ್ತು ನೀಡಿದರು. ಇದರ ಪರಿಣಾಮವಾಗಿ ಭಾರತವು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಯಿತು ಎಂದರು.ಅಧ್ಯಕ್ಷತೆಯನ್ನು ತಹಸೀಲ್ದಾರ್ ನಾಗರಾಜ ಕೆ. ವಹಿಸಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜನಪದ ಕಲಾವಿದ ರಾಮಕೃಷ್ಣ ಪೂಜಾರ ಹುಲ್ಲೂರ, ಸಂತೋಷ ಪೂಜಾರ ಅವರಿಂದ ಕ್ರಾಂತಿ ಗೀತೆಗಳು, ದೇಶಭಕ್ತಿ ಗೀತೆಗಳ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಬಿಇಒ ಅರ್ಜುನ ಕಾಂಬೋಗಿ, ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ, ಪಿಎಸ್ಐ ಪ್ರಕಾಶ ಬಣಕಾರ, ತಾಪಂ ಯೋಜನಾಧಿಕಾರಿ ಸಿ.ಎಸ್. ನೀಲಗುಂದ, ಪ್ರಕಾಶ ಜಗ್ಗಲ, ವಿ.ಬಿ. ಸೋಮನಕಟ್ಟಿಮಠ, ಪ್ರಕಾಶ ಹೊಸಳ್ಳಿ, ಸುರೇಶ ನಡುವಿನಮನಿ, ದೇವೇಂದ್ರ ಕೊಳ್ಳಪ್ಪನವರ, ಬಸವರಾಜ ತಳವಾರ ಮುಂತಾದವರು ಉಪಸ್ಥಿತರಿದ್ದರು. ವಿಶ್ವನಾಥ ಕಮ್ಮಾರ ಸ್ವಾಗತಿಸಿದರು. ಶರಣು ವಾಲ್ಮೀಕಿ ನಿರೂಪಿಸಿದರು.