ಡಾ. ಅಂಬೇಡ್ಕರ್ ಅವರು ಬಡವರ ಹಾಗೂ ಹಿಂದುಳಿದ ವರ್ಗಗಳ ಉನ್ನತಿಗಾಗಿ ತಮ್ಮ ಸಂಪೂರ್ಣ ಜೀವನವನ್ನು ಅರ್ಪಿಸಿದ್ದರು. ಸಮಾನತೆ ಆಧರಿತ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

ಗದಗ: ಡಾ. ಅಂಬೇಡ್ಕರ್ ಹಾಗೂ ಡಾ. ಬಾಬೂಜಿ ಅವರ ಜೀವನದ ತತ್ವ- ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಬಡತನವು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಇವರ ಜೀವನವೇ ಸ್ಪಷ್ಟಪಡಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 119ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಡಾ. ಅಂಬೇಡ್ಕರ್ ಅವರು ಬಡವರ ಹಾಗೂ ಹಿಂದುಳಿದ ವರ್ಗಗಳ ಉನ್ನತಿಗಾಗಿ ತಮ್ಮ ಸಂಪೂರ್ಣ ಜೀವನವನ್ನು ಅರ್ಪಿಸಿದ್ದರು. ಸಮಾನತೆ ಆಧರಿತ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಭಾರತೀಯ ಸಂವಿಧಾನವನ್ನು ರೂಪಿಸಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದ ಮಹತ್ವದ ವ್ಯಕ್ತಿತ್ವ ಎಂದರು.ಅರ್ಥಶಾಸ್ತ್ರ, ಇತಿಹಾಸ ಹಾಗೂ ಮನಶಾಸ್ತ್ರ ಸೇರಿದಂತೆ ಹಲವು ವಿಷಯಗಳಲ್ಲಿ ಅಪಾರ ಜ್ಞಾನ ಹೊಂದಿದ್ದ ಡಾ. ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿಯ ಮುಖ್ಯಸ್ಥರಾಗಿ ನೇಮಿಸಲಾಗಿತ್ತು. ಜಾತಿ ಪದ್ಧತಿಯನ್ನು ನಿರ್ಮೂಲಗೊಳಿಸಿ ಸಮಾನತೆ ಸ್ಥಾಪನೆಗೆ ಅವರು ಕೈಗೊಂಡ ಪ್ರಯತ್ನಗಳು ಶ್ಲಾಘನೀಯ ಎಂದರು. ಸಂವಿಧಾನದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಅಳವಡಿಸಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಿದ ಮಹಾನ್ ನಾಯಕ ಡಾ. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಅವರ ಮೂರು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಬಲ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ರಾಷ್ಟ್ರ ಪ್ರಶಸ್ತಿ ವಿಜೇತ ಎಸ್.ಎನ್. ಬಳ್ಳಾರಿ ಉಪನ್ಯಾಸ ನೀಡಿ, ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರು ಬಾಲ್ಯದಿಂದಲೇ ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿದ ಮಹಾನ್ ವ್ಯಕ್ತಿ. ತಮ್ಮ ಬಾಲ್ಯದ ನೋವು ಮತ್ತು ಅನುಭವಗಳನ್ನು ಸಮಾಜದ ಇತರರು ಅನುಭವಿಸಬಾರದು ಎಂಬ ದೃಢಸಂಕಲ್ಪದಿಂದ ಅವರು ಸಮಾನತೆಗಾಗಿ ಜೀವನಪರ್ಯಂತ ಹಗಲಿರುಳು ಹೋರಾಡಿದರು ಎಂದರು.ನಿವೃತ್ತ ಪ್ರಾ. ಪ್ರೊ. ಡಿ.ಜಿ. ಜೋಗಣ್ಣನವರ ಅವರು ಡಾ. ಬಾಬು ಜಗಜೀವನರಾಂ ಕುರಿತು ಮಾತನಾಡಿ, ಅವರು ಮೃದು ಸ್ವಭಾವದವರಾಗಿದ್ದು, ಅಪ್ರತಿಮ ಹೋರಾಟಗಾರರಾಗಿದ್ದರು. ಅಂಬೇಡ್ಕರ್ ಹಾಗೂ ಬಾಬೂಜಿ ಇಬ್ಬರೂ ಅಸ್ಪೃಶ್ಯತೆ ನಿವಾರಣೆಗೆ ಸ್ಫೂರ್ತಿದಾಯಕ ವ್ಯಕ್ತಿತ್ವಗಳಾಗಿದ್ದಾರೆ. ಡಾ. ಬಾಬೂಜಿ ಅವರ ಬಾಲ್ಯ ಜೀವನ ಕಷ್ಟಕರವಾಗಿದ್ದು, ತಾಯಿಯನ್ನು ಕಳೆದುಕೊಂಡು ಸಂಕಷ್ಟಗಳಲ್ಲಿ ಬೆಳೆದ ಅವರು ಕಠಿಣ ಪರಿಶ್ರಮದಿಂದ ದೇಶದ ಉನ್ನತ ಸ್ಥಾನಗಳಿಗೆ ಏರಿದರು ಎಂದರು.ಈ ವೇಳೆ ಡಾ. ಅಂಬೇಡ್ಕರ್ ಅವರ ಕುರಿತಾದ ಪ್ರಬಂಧ ಸಂಕಲನವನ್ನು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸೇರಿದಂತೆ ಅತಿಥಿಗಳು ಬಿಡುಗಡೆ ಮಾಡಿದರು. ನಂತರ ಉತ್ತಮ ಕಾರ್ಯನಿರ್ವಹಣೆ ಮಾಡಿದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಕೃಷ್ಣಗೌಡ ಪಾಟೀಲ, ಬಸವಾರಾಜ ಕಡೆಮನಿ, ಕೃಷ್ಣಾ ಪರಾಪೂರ, ಅಶೋಕ ಕುಡತಿನಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್‌ ಕೆ.ಆರ್., ಸಹಾಯಕ ಆಯುಕ್ತ ಗಂಗಪ್ಪ ಎಂ., ತಹಸೀಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಡಾ. ಬಸವರಾಜ ಬಳ್ಳಾರಿ, ರಾಜಾರಾಮ ಪವಾರ ಸೇರಿದಂತೆ ಇತರರು ಇದ್ದರು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸಂವಿಧಾನ ಪ್ರಸ್ತಾವನೆ ಬೋಧಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಸ್ವಾಗತಿಸಿದರು. ಪ್ರೊ.‌ ಬಾಹುಬಲಿ ಜೈನರ ನಿರೂಸಿದರು. ಮೆರವಣಿಗೆ

ಡಾ. ಅಂಬೇಡ್ಕರ್ ಹಾಗೂ ಡಾ. ಬಾಬೂಜಿಯವರ ಭಾವಚಿತ್ರಗಳ ಮೆರವಣಿಗೆಯು ಗದಗ ನಗರಸಭೆ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಗೌರವ ಮಾಲಾರ್ಪಣೆಯೊಂದಿಗೆ ಪ್ರಾರಂಭಗೊಂಡಿತು. ಮಹಾತ್ಮ ಗಾಂಧಿ ಸರ್ಕಲ್, ಮಹೇಂದ್ರಕರ್ ಸರ್ಕಲ್, ಟಾಂಗಾ ಕೂಟ್, ಬಸವೇಶ್ವರ ಸರ್ಕಲ್, ಗುಜ್ಜರಬಸ್ತಿ, ಮುಳಗುಂದ ನಾಕಾ ಮಾರ್ಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಭವನಕ್ಕೆ ತಲುಪಿತು.