ಚಳ್ಳಕೆರೆಯಲ್ಲಿ ಆಯೋಜಿಸಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರು ಮಹನೀಯರ ಭಾವಚಿತ್ರಗಳಿಗೆ ಶಾಸಕ ಟಿ.ರಘುಮೂರ್ತಿ ಪುಷ್ಪಾರ್ಚನೆ ಮಾಡಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಸಮಾಜದ ಎಲ್ಲಾ ಜನವರ್ಗಗಳ ಬದುಕಿನಲ್ಲಿ ಅರಿವಿನ ದೀವಿಗೆ ಹಚ್ಚುವ ಮೂಲಕ ಡಾ.ಅಂಬೇಡ್ಕರ್ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಟಿ.ರಘುಮೂರ್ತಿ ಬಣ್ಣಿಸಿದರು.ಚಳ್ಳಕೆರೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾ.ಬಾಬೂ ಜಗಜೀವನ ರಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಲಿಯುಗದ ಸೂರ್ಯನಾಗಿ ಎಲ್ಲಾ ಜಾತಿಯ ಜನರ ಧರ್ಮದ ಜನರ ಬಾಳಿನಲ್ಲಿ ಬೆಳಕಾಗಿದ್ದಾರೆ. ಅವರು ನಮ್ಮ ಬದುಕಿನಲ್ಲಿ ಪ್ರತಿದಿನವೂ ಜೊತೆಗಿರುತ್ತಾರೆ. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ಭಾರತದ ಆಡಳಿತ ವ್ಯವಸ್ಥೆಯನ್ನು ರೂಪಿಸಿದವರು ಎಂದರು.ಬಾಬು ಜಗಜೀವನರಾಂ ಅವರು ರಕ್ಷಣಾ ಮಂತ್ರಿಯಾಗಿ ಯುದ್ಧ ನಡೆಯುವ ಕಾಲದಲ್ಲಿ ದೇಶವನ್ನು ಹೇಗೆ ತೆಗೆದುಕೊಂಡು ಹೋಗಿದ್ದರು ಎಂಬುದು ಬಹಳ ಮುಖ್ಯವಾದುದು. ಹಸಿರು ಕ್ರಾಂತಿಯ ಹರಿಕಾರರಾಗಿ ಭಾರತದ ಉಪ ಪ್ರಧಾನಿಯಾಗಿ ಅವರು ಸಲ್ಲಿಸಿದ ಸೇವೆ ಶ್ಲಾಘನೀಯವಾದುದು ಎಂದರು.
ಸಂವಿಧಾನದ ಆಶಯಗಳನ್ನು ಈಡೇರಿಸುವ ಕಡೆಗೆ ಎಲ್ಲರ ಸಹಕಾರ ಅಗತ್ಯ. ಯಾಕೆಂದರೆ, ಪ್ರಸ್ತುತ ಸಂದರ್ಭದಲ್ಲಿ ಎಲ್ಲರೂ ಅಂಬೇಡ್ಕರ್ ಅವರನ್ನು ಅಪ್ಪಿಕೊಳ್ಳುತ್ತಿದ್ದಾರೆ. ಆದ್ದರಿಂದ, ಅಂಬೇಡ್ಕರ್ ಅವರು ಬಿತ್ತಿಹೋದ ತತ್ವಸಿದ್ಧಾಂತಗಳು ಈ ಕಾಲಘಟ್ಟದಲ್ಲಿ ಹೆಚ್ಚೆಚ್ಚು ಪ್ರಚುರಗೊಳ್ಳುತ್ತಿವೆ ಎಂದು ಶ್ಲಾಘಿಸಿದರು.ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳದ ಕುರಿತು ಹೈಕೋರ್ಟ್ ತಡೆಯಾಜ್ಞೆ ಕುರಿತು ಸದನದಲ್ಲಿ ಮಾತನಾಡಿದ್ದನ್ನು ಪುನರುಚ್ಚರಿಸಿದರು.
ರಾಜಕಾರಣವನ್ನು ಬಿಟ್ಟು ಎಲ್ಲರೂ ಕೂಡ ಶೋಷಿತರ, ನೊಂದವರ ಪರವಾಗಿ ಅಧಿಕಾರಕ್ಕೆ ಬಂದ ಸರ್ಕಾರಗಳು ಕೆಲಸ ಮಾಡಬೇಕು. ಪರಿಶಿಷ್ಟ ಜಾತಿ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರಬಾರದು ಎಂಬ ಹೈಕೋರ್ಟ್ ತಡೆಯಾಜ್ಞೆಗೆ ಶಾಶ್ವತ ಪರಿಹಾರ ಸಿಗಬೇಕಾದರೆ ಕೇಂದ್ರ ಸರ್ಕಾರ 9ನೇ ಶೆಡ್ಯೂಲ್‌ಗೆ ಸೇರಿಸಬೇಕು ಎಂದರು.ಒಳ ಮೀಸಲಾತಿ ಕುರಿತು ಕಾಂಗ್ರೆಸ್ ಸರ್ಕಾರ ಖಂಡಿತ ಬದ್ಧತೆ ಪ್ರದರ್ಶನ ಮಾಡಲಾಗುತ್ತದೆ. ಒಳ ಮೀಸಲಾತಿ ಬೇಡಿಕೆ ಈಡೇರಿಸಲಾಗುವುದು ಎಂದರು.
ಇದಕ್ಕೂ ಮುನ್ನ ಬಾಬು ಜಗಜೀವನ ರಾಂ ವೃತ್ತದಿಂದ ಮೆರವಣಿಗೆ ಪ್ರಾರಂಭವಾಗಿ ನೆಹರೂ ವೃತ್ತದ ಮಾರ್ಗವಾಗಿ ಬೆಂಗಳೂರು ರಸ್ತೆಯ ಬಸವೇಶ್ವರ ವೃತ್ತದವರೆಗೂ ಮೆರವಣಿಗೆ ನಡೆದು ನಂತರ ತಾಲೂಕು ಕಚೇರಿ ಹತ್ತಿರ ಬಂದು ವೇದಿಕೆ ಕಾರ್ಯಕ್ರಮ ನಡೆಯಿತು.ಈ ವೇಳೆ ತಹಸೀಲ್ದಾರ್ ರೇಹಾನ ಪಾಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆ ಆಯುಕ್ತ ಡಾ.ನಾಗವೇಣಿ, ತಾಪಂ ಇಒ ಎಚ್.ಶಶಿಧರ್, ಬಿಇಒ ಕೆ.ಎಸ್.ಸುರೇಶ್, ಮುಖಂಡರಾದ ಜಿ.ಮಾರಣ್ಣ, ಭೀಮನಕೆರೆ ಶಿವಮೂರ್ತಿ, ಸಿ.ಜೆ.ಜಯಕುಮಾರ್, ಕೆಡಿಪಿ ಸದಸ್ಯ ಮೀರಾಸಾಬಿಹಳ್ಳಿ ರಂಗಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ನಗರಸಭೆ ಮಾಜಿ ಉಪಾಧ್ಯಕ್ಷ ಟಿ.ವಿಜಯಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ.ವೀರೇಶ್, ಗದ್ದಿಗೆ ತಿಪ್ಪೇಸ್ವಾಮಿ, ಡಿವೈಎಸ್‌ಪಿ ಸತ್ಯನಾರಾಯಣ ರಾವ್, ಚೌಳೂರ್ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದೇವ್ಲಾ ನಾಯ್ಕ, ಗಾಂಧಿನಗರ ಚಂದ್ರಣ್ಣ, ನೇತ್ರಾವತಿ, ಗಿರಿಯಪ್ಪ, ಚಳ್ಳಕೆರೆಯಪ್ಪ, ವಿಶ್ವನಾಥ ರೆಡ್ಡಿ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಇನ್ನಿತರರು ಭಾಗವಹಿಸಿದ್ದರು. ಪ್ರೊ.ಮಲ್ಲಿಕಾರ್ಜುನ ಹಲಸಂಗಿ, ನವೀನ್ ಪೂಜಾರಹಳ್ಳಿ, ಮಮತಾ, ಬಿ.ಆನಂದ ಕುಮಾರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಕುರಿತು ಉಪನ್ಯಾಸ ನೀಡಿದರು.
*ಸನ್ಮಾನಿತರಿಗೆ ಮಾಹಿತಿ ನೀಡದ ಇಲಾಖೆ:ಚಳ್ಳಕೆರೆ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಆಯ್ಕೆ ಮಾಡಿ ಸನ್ಮಾನಿಸುವ ಕುರಿತು ಒಂದು ಸಮಿತಿಯನ್ನು ನೇಮಕ ಮಾಡಲಾಗಿತ್ತು. ಈ ಸಮಿತಿಯಲ್ಲಿ ಸಮಾಜದ ಹಿರಿಯರು ಹಾಗೂ ತಹಸೀಲ್ದಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇರುತ್ತಾರೆ. ಇಂತಹ ಸಮಿತಿ ಆಯ್ಕೆ ಮಾಡಿದ ಸನ್ಮಾನಿತರಿಗೆ ಸಮಾಜ ಕಲ್ಯಾಣ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ. ಸಮಿತಿಯಲ್ಲಿರುವ ದಲಿತ ಮುಖಂಡರಿಗೆ ಹೇಳಿ ನೀವೇ ವಿಷಯ ತಿಳಿಸಿ ಎಂದು ಕೈತೊಳೆದು ಕೊಂಡುಬಿಟ್ಟಿದ್ದಾರೆ.
ಮುಖಂಡರೊಬ್ಬರು ಆಯ್ಕೆ ಮಾಡಿದ ಎಲ್ಲರಿಗೂ ಪೋನ್ ಮಾಡಿ ವಿಷಯ ತಿಳಿಸಿ ಸಮಾಜ ಕಲ್ಯಾಣ ಅಧಿಕಾರಿಗಳು ನಿಮ್ಮನ್ನು ಸಂಪರ್ಕ ಮಾಡುತ್ತಾರೆ ಎಂದು ಹೇಳಿದ್ದರು. ಆದರೆ ಸಮಾಜಕಲ್ಯಾಣ ಇಲಾಖೆ ಸಿಬ್ಬಂದಿಯೊಬ್ಬರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಮೂರ್ತಿ ಅವರ ಭಾಷಣ ಮುಗಿದು ಇನ್ನೇನು ಎಲ್ಲರೂ ಕಾರ್ಯಕ್ರಮ ಮುಗಿಯಿತು ಎಂದು ಎದ್ದು ನಿಂತಾಗ ಸನ್ಮಾನಿತರಾಗಿ ಆಯ್ಕೆ ಆಗಿರುವವರಿಗೆ ಕರೆ ಮಾಡಲು ಶುರು ಮಾಡಿದ್ದರು. ಕನಿಷ್ಠ ಒಂದು ಗಂಟೆ ಮುಂಚೆಯಾದರೂ ಕರೆ ಮಾಡಿ ತಿಳಿಸಬಹುದಿತ್ತು ಎಂತಹ ಬೇಜಾವಾಬ್ದಾರಿತನ ಎಂದು ವೇದಿಕೆ ಮುಂಭಾಗದಲ್ಲಿದ್ದ ಕೆಲವರು ಬೇಸರ ವ್ಯಕ್ತ ಪಡಿಸುತ್ತಿರುವುದು ಕಂಡು ಬಂದಿತು.