ಸಾರಾಂಶ
ಬಾದಾಮಿ ತಾಲೂಕಿನ ಕಬ್ಬಲಗೇರಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರವಿರುವ ಧ್ವಜದ ಕಟ್ಟೆಯ ಪುನರ್ ನಿರ್ಮಾಣವನ್ನು ಗ್ರಾಮದ ಹಿರಿಯರ ಉಪಸ್ಥಿತಿಯಲ್ಲಿ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾದಾಮಿ ತಾಲೂಕಿನ ಕಬ್ಬಲಗೇರಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರವಿರುವ ಧ್ವಜದ ಕಟ್ಟೆಯ ಪುನರ್ ನಿರ್ಮಾಣವನ್ನು ಗ್ರಾಮದ ಹಿರಿಯರ ಉಪಸ್ಥಿತಿಯಲ್ಲಿ ಮಾಡಲಾಯಿತು.ಗ್ರಾಮದ ದಲಿತ ಕಾಲೋನಿ ಹತ್ತಿರ ಇತ್ತೀಚೆಗೆ ಪೊಲೀಸ್ ಇಲಾಖೆಯಿಂದ ಡಾ.ಅಂಬೇಡ್ಕರ್ ಭಾವಚಿತ್ರ ಇರುವ ಧ್ವಜದ ಕಟ್ಟೆಯನ್ನು ದಲಿತರ ಪ್ರತಿರೋಧದ ಮಧ್ಯೆಯೂ ತೆರವುಗೊಳಿಸಲಾಗಿತ್ತು ಹಾಗೂ ಆ ಸಂದರ್ಭದಲ್ಲಿ ದಲಿತ ಯುವಕರ ಮೇಲೆ ಹಲ್ಲೆ ಸಹ ನಡೆಸಲಾಗಿತ್ತು. ಈ ವಿಷಯದ ಕುರಿತು ಕೆಲವು ಸಂಘಟನೆ ಮುಖಂಡರು ಗ್ರಾಮದಲ್ಲಿ ಉಂಟಾದ ವಾಲ್ಮೀಕಿ ಮತ್ತು ಮಾದಿಗ ಸಮುದಾಯದ ಮಧ್ಯದ ಬಿಗುವಿನ ವಾತಾವರಣ ತಿಳಿಗೊಳಿಸಿ ಸಾಮರಸ್ಯದಿಂದ ಇರಲು ತಿಳಿ ಹೇಳಿದ್ದರು.
ಅದೇ ರೀತಿ ಗ್ರಾಮಕ್ಕೆ ಭೇಟಿ ನೀಡಿದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ವೈ.ಸಿ.ಕಾಂಬಳೆ ವಕೀಲರ ನೇತೃತ್ವದಲ್ಲಿ ಎಐಬಿಎಸ್‌ಪಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಗುರುಶಾಂತಪ್ಪ ಮದಿನಕರ ಮತ್ತು ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಕಾಂತಿಚಂದ್ರ ಜ್ಯೋತಿ ಹಾಗೂ ಸಿಂಧೂರ ಲಕ್ಷ್ಮಣ ಯುವಸೇನೆ ತಾಲೂಕಾಧ್ಯಕ್ಷ ಗಿರೀಶ ತಳವಾರ ರವರು ಎರಡು ಸಮುದಾಯದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪುನಃ ಅದೇ ಸ್ಥಳದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರ ಇರುವ ಧ್ವಜದ ಕಟ್ಟೆಯನ್ನು ಸಿಮೆಂಟ್‌ನಿಂದ ಪುನರ್ ನಿರ್ಮಾಣಗೊಳಿಸಿದ್ದಾರೆ.ತದನಂತರ ಡಾ.ಅಂಬೇಡ್ಕರ್ ಭಾವಚಿತ್ರ ಹಾಗೂ ಕಟ್ಟೆಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಾದಾಮಿ ಕ್ರೈಂ ಪಿಎಸೈ ವಿಜಯಕುಮಾರ ರಾಠೋಡ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮದ ಬಾಲಪ್ಪ ಮಾದರ, ವೆಂಕಟೇಶ ಮಾದರ, ಬಸವರಾಜ ಮಾದರ ಮುಂತಾದ ನೂರಾರು ಜನ ಗ್ರಾಮಸ್ಥರಿದ್ದರು.