ಸಾಮಾಜಿಕ ನ್ಯಾಯಕ್ಕಾಗಿ ಡಾ.ಅಂಬೇಡ್ಕರ್ ಹೋರಾಟ: ಪ್ರೊ. ಧನಂಜಯ

| Published : Apr 15 2024, 01:18 AM IST

ಸಾರಾಂಶ

ಸಮಾಜದಲ್ಲಿನ ಅಸ್ಪೃಶ್ಯತೆ, ಜಾತಿ ಪದ್ಧತಿ, ಸಾಮಾಜಿಕ ನ್ಯಾಯದ ಬಗ್ಗೆ ಹೋರಾಟ ನಡೆಸಿದ ಧೀಮಂತ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ಹೇಳಿದರು.

ತಾಲೂಕು ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌- ಬಾಬು ಜಗಜೀವನ ರಾಮ್ ಜಯಂತಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸಮಾಜದಲ್ಲಿನ ಅಸ್ಪೃಶ್ಯತೆ, ಜಾತಿ ಪದ್ಧತಿ, ಸಾಮಾಜಿಕ ನ್ಯಾಯದ ಬಗ್ಗೆ ಹೋರಾಟ ನಡೆಸಿದ ಧೀಮಂತ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ಹೇಳಿದರು.ಭಾನುವಾರ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿ, ಎಲ್ಲರಿಗೂ ಸಮಾನ ಹಕ್ಕು ದೊರಕಬೇಕು ಎಂಬ ಸದುದ್ದೇಶದಿಂದ ಈ ದೇಶಕ್ಕೆ ಅತ್ಯಂತ ಶ್ರೇಷ್ಟವಾದ ಸಂವಿಧಾನವನ್ನು ಕೊಡುಗೆಯಾಗಿ ನೀಡಿದರು. ಅವರು ಎಂದಿಗೂ ಆಸ್ತಿ, ಐಶ್ವರ್ಯಕ್ಕೆ ಜೋತು ಬಿದ್ದವರಲ್ಲ. ಅವರ ಜೀವನ ಎಲ್ಲರಿಗೂ ಮಾದರಿ. ಆಗಿನ ಕಾಲದಲ್ಲಿ ದಲಿತರನ್ನು ಮನೆಯೊಳಗೆ, ದೇವಸ್ಥಾನದೊಳಗೆ ಸೇರಿಸುತ್ತಿರಲಿಲ್ಲ. ಅಸ್ಪೃಶ್ಯರಂತೆ ದಲಿತರನ್ನು ಮೇಲ್ವರ್ಗದ ಸಮುದಾಯ ಕಾಣುತ್ತಿತ್ತು. ಆಗಿನ ಕಾಲದಲ್ಲಿ ಹೋರಾಟ ಮಾಡಿ, ಅಸ್ಪೃಶ್ಯತೆಗೆ ನಾಂದಿ ಹಾಡುವ ಮೂಲಕ ದೀನ ದಲಿತರ ಬದುಕಿನ ಆಶಾ ಕಿರಣವಾಗಿದ್ದಾರೆ. ದಲಿತರಿಗೆ, ಶೋಷಿತರಿಗೆ ಸಮಾಜದಲ್ಲಿ ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ ಎಂದರು.ಸಭೆ ಅಧ್ಯಕ್ಷ ವಹಿಸಿದ್ದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್ ಎಂ.ಎಸ್.ರಮೇಶ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನ ಅತ್ಯಂತ ಶ್ರೇಷ್ಟ ಸಂವಿಧಾನವಾಗಿದೆ. ಈ ಸಂವಿಧಾನದ ಮೂಲಕ ಎಲ್ಲಾ ಸಮುದಾಯದವರೂ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಡಿ.ರಾಮು, ಎಚ್.ಎಂ.ಶಿವಣ್ಣ, ಬಿಇಓ ಕೆ.ಆರ್.ಪುಷ್ಪಾ, ಪ.ಪಂ. ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಈಶ್ವರ್, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ನಿರಂಜನ್‌ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.