25ರವರೆಗೆ ಡಾ.ಅಂಬೇಡ್ಕರ್‌ ವಿಚಾರಧಾರೆ ಯಾತ್ರೆ

| Published : Apr 15 2025, 12:49 AM IST

ಸಾರಾಂಶ

ಅಂಬೇಡ್ಕರ್‌ ಸಂವಿಧಾನದ ಮೂಲಕ ಭಾರತ ಆಧುನಿಕತೆ ಪಡೆದುಕೊಂಡಿದೆ. ಅಭಿವೃದ್ಧಿ ಪಥದಲ್ಲಿ ದೇಶ ಸಾಗುತ್ತಿದೆ. ಇದಕ್ಕೆ ಕಾರಣ ಅಂಬೇಡ್ಕರ್‌ ಸಂವಿಧಾನ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಾಂಗ್ರೆಸ್ ಒಂದು ಸುಡುವ ಮನೆ, ಎಚ್ಚರ ಎಂದು ಅಂಬೇಡ್ಕರರು ಏಕೆ ಹೇಳಿದ್ದರು ಎಂಬುವುದು ಸೇರಿದಂತೆ ಅವರ ವಿಚಾರಧಾರೆಗಳ ಕುರಿತಂತೆ ರಾಜ್ಯಾದ್ಯಂತ ಏ.14ರಿಂದ ಏ.25ರವರೆಗೆ ಡಾ.ಬಾಬಾಸಾಹೇಬ ಅಂಬೇಡ್ಕರ್‌ ವಿಚಾರ ಯಾತ್ರೆ ನಡೆಯಲಿದೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ ಹೇಳಿದರು.

ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದಿಂದ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ನಡೆದ ಡಾ.ಅಂಬೇಡ್ಕರ್‌ 134ನೇ ಜಯಂತಿ ಆಚರಣೆ ಹಾಗೂ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್‌ ಸಂವಿಧಾನದ ಮೂಲಕ ಭಾರತ ಆಧುನಿಕತೆ ಪಡೆದುಕೊಂಡಿದೆ. ಅಭಿವೃದ್ಧಿ ಪಥದಲ್ಲಿ ದೇಶ ಸಾಗುತ್ತಿದೆ. ಇದಕ್ಕೆ ಕಾರಣ ಅಂಬೇಡ್ಕರ್‌ ಸಂವಿಧಾನ. ಬಿಜೆಪಿಯು ಡಾ.ಅಂಬೇಡ್ಕರರ ವಿಚಾರಕ್ಕೆ ಅವರ ಹೋರಾಟಕ್ಕೆ ಮನ್ನಣೆ ಕೊಟ್ಟು ಏ.25ರವರೆಗೆ ಬಾಬಾಸಾಹೇಬರ ವಿಚಾರಧಾರೆ, ಅನುಭವಿಸಿದ ಕಷ್ಟ, ಆದಂತ ಅವಮಾನ, ಸನ್ಮಾನ ಇವೆಲ್ಲವನ್ನು ದೇಶಾದ್ಯಂತ ಭಾರತೀಯ ಜನತಾ ಪಾರ್ಟಿ ಕೊಂಡುಯ್ಯುತ್ತಿದೆ. ಅದಕ್ಕಾಗಿ ನಗರದಲ್ಲಿ ದೀಪೋತ್ಸವ ಕಾರ್ಯಕ್ರಮ ಮಾಡಲಾಗಿದೆ. ಅಲ್ಲದೆ ಇಂದು ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಗಿದೆ. ಸಂವಿಧಾನ ಕೇವಲ ವಕೀಲರ ದಾಖಲೆಗಳಲ್ಲ. ಇದು ಜೀವನದ ಮಾಧ್ಯಮ ಮತ್ತು ಆತ್ಮಯುಗದ ಆತ್ಮವಾಗಿದೆ. ಆದ್ದರಿಂದ ದೇಶದ್ಯಾಂತ ಈ ವಿಚಾರ ಕ್ರಾಂತಿ ನಡಯಲಿದೆ ಎಂದರು.

ಮಾಜಿ ಶಾಸಕರಾದ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಡಾ.ಅಂಬೇಡ್ಕರ್‌ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್ಟ್ರದ ಉತ್ತಮ ಆಡಳಿತದ ದಿಕ್ಕಿನೆಡೆಗೆ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ. 370ನೇ ವಿಧಿ ನಿರ್ಮೂಲನೆ ಬಳಿಕ ಒಂದು ರಾಷ್ಟ್ರ ಒಂದು ಸಂವಿಧಾನ ಜಾರಿಗೊಳಿಸಲಾಗಿದೆ. 2015 ರಿಂದ 26 ನವೆಂಬರ್ ಅನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತಿದೆ. ಹಳೆಯ ಸಂಸತ್ ಕಟ್ಟಡಕ್ಕೆ ಸಂವಿಧಾನ ಸದನ ಎಂದು ಹೆಸರಿಸಲಾಗಿದೆ. ಡಾ.ಅಂಬೇಡ್ಕರ್‌ಗೆ ಅತಿ ಹೆಚ್ಚು ಗೌರವ ಕೊಟ್ಟು ಅವರ ದೃಷ್ಟಿಕೋನದಲ್ಲಿ ಪ್ರಧಾನಿ ಮೋದಿಯವರು ಸಾಗುತ್ತಿದ್ದು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಡಾ.ಬಾಬಾಸಾಹೇಬರ ಬದುಕು ಬರಹಗಳ ಅಧ್ಯಯನ ಮಾಡಿ, ಅವರ ಆದರ್ಶಗಳನ್ನು ತಮ್ಮ ಜೀವನಲ್ಲಿ ಕಾರ್ಯಕರ್ತರು ಅಳವಡಿಸಿಕೋಳ್ಳಬೇಕು ಎಂದರು. ಪ್ರಾಸ್ತಾವಿಕವಾಗಿ ಜಗದೀಶ ಹಿರೇಮನಿ ಮಾತನಾಡಿದರು. ಶಿವಾನಂದ ಟವಳಿ ಸ್ವಾಗತಿಸಿ, ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮುತ್ತಣ್ಣ ಬೇಣ್ಣೂರ ವಂದಿಸಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಸಿ.ಟಿ.ಉಪಾಧ್ಯ, ರಾಜು ರೇವಣಕರ್, ಶಿವಾನಂದ ಟವಳಿ, ಡಾ.ಎಂ.ಎಸ್.ದಡ್ಡೆನ್ನವರ, ಹೂವಪ್ಪ ರಾಠೋಡ, ಸಾಬು ದೊಡಮನಿ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಉಪಾಧ್ಯಕ್ಷೆ ಶೋಭಾ ರಾವ, ಯಲ್ಲಪ್ಪ ನಾರಾಯಣಿ, ಶಿವು ಸುರುಪುರ ಸೇರಿ ಅನೇಕರು ಇದ್ದರು. ಕಾರ್ಯಕ್ರಮಕ್ಕೂ ಮುಂಚೆ ನಗರದಲ್ಲಿ ಡಾ.ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.