ಸಾರಾಂಶ
ಹಾವೇರಿ (ಶಿಗ್ಗಾಂವಿ): ‘ಡಾ.ಬಿ.ಆರ್.ಅಂಬೇಡ್ಕರ್ ಅವರು ಇಸ್ಲಾಂ ಧರ್ಮಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ದರು’ ಎಂಬ ಕಾಂಗ್ರೆಸ್ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ವಿವಾದಾತ್ಮಕ ಹೇಳಿಕೆ ಸಂಚಲನ ಮೂಡಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಶಿಗ್ಗಾಂವಿಯ ಹನುಮಂತ ಪಾಟೀಲ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಆದಿ ಜಾಂಬವ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡುವ ವೇಳೆ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಂಬೇಡ್ಕರ್ ಮುಸ್ಲಿಂ ಧರ್ಮ ಸ್ವೀಕರಿಸಲು ಎಲ್ಲ ಸಿದ್ಧತೆ ಆಗಿತ್ತು. ಆದರೆ ಕೊನೆ ಕ್ಷಣದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು ಎಂದು ನಾನು ಓದಿದ್ದೇನೆ, ತಿಳಿದುಕೊಂಡಿದ್ದೇನೆ. ಆದರೆ ಕೊನೆ ಕ್ಷಣದಲ್ಲಿ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದರು. ಒಂದು ವೇಳೆ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸದಿದ್ದರೆ, ದಲಿತರು ಮುಸ್ಲಿಂ ಆಗುತ್ತಿದ್ದರು. ಆರ್.ಬಿ. ತಿಮ್ಮಾಪುರ ಹೋಗಿ ರಹೀಮ್ ಖಾನ್ ಆಗುತ್ತಿದ್ದರು. ಡಾ.ಜಿ. ಪರಮೇಶ್ವರ ಹೋಗಿ ಪೀರ್‌ಸಾಹೇಬ್ ಆಗುತ್ತಿದ್ದರು. ಎಲ್. ಹನುಮಂತಪ್ಪ ಹೋಗಿ ಹಸನಸಾಬ್ ಆಗುತ್ತಿದ್ದರು. ಮಂಜುನಾಥ ತಿಮ್ಮಾಪುರ ಹೋಗಿ ಬಾಬೂಸಾಬ್ ಆಗುತ್ತಿದ್ದರು ಎಂದರು. ಆದರೆ, ಈಗಲೂ ಎಲ್ಲೆಲ್ಲಿ ದಲಿತ ಕೇರಿ ಇದೆಯೋ ಅಲ್ಲೆಲ್ಲ ಪಕ್ಕದಲ್ಲಿಯೇ ಮುಸ್ಲಿಂ ದರ್ಗಾ ಇದೆ. ದಲಿತರಿಗೂ, ಮುಸ್ಲಿಮರಿಗೂ ಇವರು ಬಾಂಧವ್ಯ ಹಾಗೆ ಇದೆ ಎಂದರು. ಡಾ.ಬಿ.ಆರ್. ಅಂಬೇಡ್ಕರ್ ಅವರು ಇಸ್ಲಾಂ ಧರ್ಮಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ದರು ಎಂಬ ಅಜ್ಜಂಪೀರ್ ಖಾದ್ರಿ ಅವರ ವಿವಾದಾತ್ಮಕ ಹೇಳಿಕೆ ಅಚ್ಚರಿ ಮೂಡಿಸಿದ್ದು, ಎಲ್ಲೆಡೆ ಚರ್ಚೆಗೆ ಎಡೆಮಾಡಿಕೊಟ್ಟಿದೆ.ವಿಷಾದ ವ್ಯಕ್ತಪಡಿಸಿದ ಖಾದ್ರಿ:ಹಾವೇರಿ: ಅಂಬೇಡ್ಕರ್ ಕುರಿತಾದ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹೇಳಿದ್ದಾರೆ.ಶಿಗ್ಗಾಂವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ನನಗೆ ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಇರಲಿಲ್ಲ. ನಾನು 20 ವರ್ಷದ ಹಿಂದೆ ಯಾವುದೋ ಕಾರ್ಯಕ್ರಮದಲ್ಲಿ ಕೇಳಿದ್ದ ಮಾತನ್ನು ಶಿಗ್ಗಾಂವಿಯಲ್ಲಿ ನಡೆದ ಆದಿಜಾಂಭವ ಜಾಗೃತಿ ಸಮಾವೇಶದಲ್ಲಿ ಭಾಷಣ ಮಾಡುವಾಗ ಹೇಳಿದ್ದೆ. ನಮ್ಮ ಕ್ಷೇತ್ರದಲ್ಲಿ ನಾವು ಹಾಗೂ ದಲಿತ ಬಾಂಧವರು ತುಂಬಾ ಪ್ರೀತಿಯಿಂದ ಇದ್ದೇವೆ. ಅಂಬೇಡ್ಕರ್ ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ನಾನು ಅಂಬೇಡ್ಕರ್ ಪಾದದ ಧೂಳಿಗೂ ಸಮ ಅಲ್ಲ, ಎಮೋಷನ್‌ನಲ್ಲಿ ಈ ಮಾತ ಹೇಳಿದ್ದೇನೆ. ಇದರಿಂದ ಯಾವುದೇ ತಪ್ಪು ಸಂದೇಶ ಹೋಗಬಾರದು. ಹೀಗಾಗಿ ಈ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.