ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಸಮಾರಂಭ ನಡೆಯಿತು.ಕುಶಾಲನಗರದ ಕಲಾಭವನದಲ್ಲಿ ನಡೆದ ಸಭಾ ಕಾರ್‍ಯಕ್ರಮವನ್ನು ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ ಉದ್ಘಾಟಿಸಿದರು. ಸಾಮಾಜಿಕ ಕ್ರಾಂತಿಯ ಹರಿಕಾರರಾದ, ನಡೆದಾಡುವ ವಿಶ್ವ ಕೋಶದಂತಿದ್ದ ಡಾ. ಬಿ.ಆರ್. ಅಂಬೇಡ್ಕರ್ ಇಂದಿಗೂ ಮನೆ ಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಮಹಾನ್ ಚೇತನ ಎಂದು ಬಣ್ಣಿಸಿದ ಅವರು, ಡಾ. ಅಂಬೇಡ್ಕರ್ ಜೀವನ, ಪಾಂಡಿತ್ಯ, ಹೋರಾಟ ಪ್ರತಿಯೊಬ್ಬರಿಗೂ ಸದಾ ಆದರ್ಶವಾಗುವಂಥದ್ದು ಎಂದರು.
ಶಿಕ್ಷಣದ ಹಕ್ಕು ಪ್ರತಿಪಾದನೆ, ಸಾಮಾಜಿಕ ಬದಲಾವಣೆಗಳಿಗಾಗಿ ಹೋರಾಟ, ಸ್ವತಂತ್ರ ಭಾರತದ ಸಂವಿಧಾನ ಕರ್ತೃ ಡಾ. ಅಂಬೇಡ್ಕರ್ ಅವರ ಚಿಂತನೆ ಇಂದಿಗೂ ಚಿರಸ್ಥಾಯಿಯಾಗಿದೆ ಎಂದರು. ಡಿಎಸ್ಎಸ್ ಮುಖಂಡ ಕೆ.ಬಿ. ರಾಜು ಅಂಬೇಡ್ಕರ್ ಅವರ ಜೀವನ ಚರಿತ್ರೆ, ಹೋರಾಟದ ಬಗ್ಗೆ ತಿಳಿಸಿ, ಮುಂದಿನ ಪೀಳಿಗೆಗೆ ಅಂಬೇಡ್ಕರ್ ಅವರ ವಿಚಾರಧಾರೆ, ಚಿಂತನೆಗಳನ್ನು ಬಿತ್ತಬೇಕು ಎಂದು ಹೇಳಿದರು.ಶನಿವಾರಸಂತೆ ಪ್ರೌಢಶಾಲೆ ಶಿಕ್ಷಕ ಜಯ ಕುಮಾರ್ ಮುಖ್ಯ ಭಾಷಣ ಮಾಡಿದರು. ನಿವೃತ್ತ ಅರಣ್ಯಾಧಿಕಾರಿ ಸಿದ್ದಪ್ಪ, ಪ್ರಮುಖರಾದ ಅಬ್ದುಲ್ ರಜಾಕ್ ಮಾತನಾಡಿದರು.ಪುರಸಭೆ ಮುಖ್ಯಾಧಿಕಾರಿ ಗಿರೀಶ್, ವೃತ್ತ ನಿರೀಕ್ಷಕ ಪ್ರದೀಪ್, ಪತ್ರಕರ್ತ ರಘು ಎಚ್.ಎಂ.,
ದಲಿತ ಸಂಘಟನೆಗಳ ಪ್ರಮುಖರಾದ ದಾಮೋದರ್, ಎಚ್.ಟಿ. ವಸಂತ, ಎಚ್.ಪಿ. ಶಿವಕುಮಾರ್, ವಾಲ್ಮೀಕಿ ಸಮಾಜದ ಪ್ರಮುಖರಾದ ಕೆ.ಎನ್. ಅಶೋಕ್, ಗಂಗಾಧರ, ವಿವಿಧ ಇಲಾಖೆ ಅಧಿಕಾರಿಗಳಾದ ವೀರಣ್ಣ, ರಕ್ಷಿತ್, ಶ್ರೀದೇವಿ, ಶ್ರೀನಿವಾಸ್, ಮಧು ಮತ್ತಿತರರು ಇದ್ದರು.ಅಂಗನವಾಡಿ ಆಶಾ ಕಾರ್‍ಯಕರ್ತರು, ಕಂದಾಯ, ಪೊಲೀಸ್, ಮತ್ತಿತರ ಇಲಾಖೆ ಸಿಬ್ಬಂದಿ, ನೌಕರರು ಪಾಲ್ಗೊಂಡಿದ್ದರು. ಕಾರ್‍ಯಕ್ರಮಕ್ಕೆ ಮುನ್ನ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರ ಹೊತ್ತ ವಾಹನದ ಮೆರವಣಿಗೆ ನಡೆಯಿತು.