ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮಾಧ್ಯಮಗಳು ನೊಂದವರ ಪರ ಧ್ವನಿಯಾಗಿ ಅವರಿಗೆ ನ್ಯಾಯ ಕೊಡಿಸುವ ಮಾಧ್ಯಮಗಳಾಗಬೇಕು ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿ. ವಸಂತ ಕುಮಾರ್ ತಿಳಿಸಿದರು.ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣಿ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಪತ್ರಕರ್ತರ ಸಂಘ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಿಕೋದ್ಯಮದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕೆಯಲ್ಲಿ ಮೆದಳು, ಹೃದಯ ಹಾಗೂ ಕರಳುಗಳೆಂಬ ಮೂರು ಅಂಗಗಳಿವೆ. ಪತ್ರಿಕೋದ್ಯಮಿಗಳು ನೊಂದವರ ಪರ ಬರೆಯುವ ವ್ಯಕ್ತಿಗಳು ಆಗಬೇಕು. ಆದರೇ ಇಂದು ಮಾಧ್ಯಮ ಒಂದು ಉದ್ಯಮ ಆಗಿದ್ದು, ಒಳ್ಳೆ ಸುದ್ದಿ ಬೇಗ ಹರಡುವುದಿಲ್ಲ. ಕೆಟ್ಟ ಸುದ್ದಿ ಬೇಗ ಹರಡುತ್ತದೆ ಇದು ಬದಲಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.ಅಭಿವೃದ್ದಿಯಲ್ಲಿ 2 ರೀತಿ ಇದ್ದು, ಆಂತರಿಕ ಹಾಗೂ ಬಾಹ್ಯ ಅಭಿವೃದ್ಧಿಗಳು ಇವೆ. ಭಾಷೆಯನ್ನು ಎಲ್ಲಿ ಹೇಗೆ ಬಳಸಬೇಕು ಎಂಬುದರ ಬಗ್ಗೆ ಅರಿವು ಇರಬೇಕು. ಪತ್ರಿಕೆಯಲ್ಲಿ ಬರುವ ಕೆಲವು ಸುದ್ದಿಗಳು ಆ ದಿನಕ್ಕೆ ಮಾತ್ರ ಸೀಮಿತ, ಕೆಲವು ಲೇಖನಗಳು ಶಾಶ್ವತವಾಗಿ ಬಳಕೆಗೆ ಬರುತ್ತವೆ ಎಂದು ಅವರು ತಿಳಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಪ್ರತಿಯೊಬ್ಬರೂ ಪತ್ರಿಕೋದ್ಯಮದ ಇತಿಹಾಸವನ್ನು ಹಾಗೂ ಭಾರತದ ಪರಂಪರೆಯನ್ನು ತಿಳಿದುಕೊಳ್ಳಬೇಕು. ಮಹಾತ್ಮಾ ಗಾಂಧೀಜಿ, ಡಾ. ಬಿ. ಆರ್ ಅಂಬೇಡ್ಕರ್ ಹಾಗೂ ಬಾಲ ಗಂಗಾಧರ ತಿಲಕ್ ಈ ಮೂವರು ಸ್ವಾತಂತ್ರ್ಯ ಹೋರಾಟಗಾರರ ಜೊತೆಗೆ ಇವರು ಪತ್ರಕರ್ತರು. ಈ ಮೂವರ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು ಎಂದು ತಿಳಿಸಿದರು.ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವಮೂರ್ತಿ ಮಾತನಾಡಿ, ನೀವೆಲ್ಲರೂ ಮುಂದೆ ಪತ್ರಿಕೋದ್ಯಮಿಗಳು ಆಗಬೇಕೆಂದು ಇರುವವರು. ಇವತ್ತಿಗೂ ಅಭಿವೃದ್ಧಿ ಪತ್ರಿಕೋದ್ಯಮ ಮಾಡುತ್ತಿರುವ ಮಾಧ್ಯಮ ಆಕಾಶವಾಣಿ. ಮಾಹಿತಿ, ಶಿಕ್ಷಣ, ಮನರಂಜನೆ ಈ ಮೂರು ಅಂಶಗಳನ್ನು ಇಟ್ಟುಕೊಂಡು ಪತ್ರಿಕೋದ್ಯಮ ನಡೆಸುತ್ತಿದೆ. ಆದ್ದರಿಂದ ತಾವೆಲ್ಲರೂ ನಿಯಮಿತವಾಗಿ ಆಕಾಶವಾಣಿ ಕೇಳಬೇಕು ಎಂದು ತಿಳಿಸಿದರು.
ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ ಮುಖ್ಯಸ್ಥೆ ಪ್ರೊ.ಎಂ.ಎಸ್. ಸಪ್ನಾ ಮಾತನಾಡಿ, ಪತ್ರಿಕೋದ್ಯಮದಲ್ಲಿ ಬರವಣಿಗೆ ಹಾಗೂ ತಂತ್ರಜ್ಞಾನ ಅತ್ಯಗತ್ಯ. ತಂತ್ರಜ್ಞಾನ ಅಭಿವೃದ್ಧಿ ಆದಂತೆ ನಾವು ಅದಕ್ಕೆ ಹೊಂದಿಕೊಳ್ಳುತ್ತಾ ಹೋಗಬೇಕು. ಕೃತಕ ಬುದ್ಧಿಮತ್ತೆ ಕಳೆದ ಒಂದು ದಶಕದಿಂದ ಈಚೆಗೆ ಹೆಚ್ಚು ಬಳಕೆಗೆ ಬಂದಿದೆ. ಜನರನ್ನು ಹೇಗೆ ತಮ್ಮ ಕಡೆಗೆ ಸೆಳೆಯಬೇಕು, ಜನರಿಗೆ ಯಾವುದರ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಜನರನ್ನು ಹೇಗೆ ಆಕರ್ಷಿಸಬೇಕು ಎಂಬುದು ಕೃತಕ ಬುದ್ಧಿಮತ್ತೆಯನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.ಪತ್ರಿಕೋದ್ಯಮಿಗಳು ಸಮಾಜಕ್ಕೆ ಜ್ಞಾನವನ್ನು ನೀಡುವ ಮಧ್ಯಮಗಳಾಗಿ ಇರಬೇಕು. ಸಮಾಜಕ್ಕೆ ಒಳ್ಳೆಯದು ಹಾಗೂ ಕೆಟ್ಟದು ಯಾವುದು ಎಂಬುದನ್ನು ತಿಳಿಸಬೇಕು. ಇಂದು ಸಾಮಾಜಿಕ ಮಾಧ್ಯಮಗಳು ಹೆಚ್ಚಾಗಿ ಬಳಕೆಯಲ್ಲಿವೆ. ಸಾಮಾಜಿಕ ಮಾಧ್ಯಮಗಳು ಪ್ರತಿಯೊಬ್ಬರ ಜೀವನದಲ್ಲಿ ಹೆಚ್ಚಿನ ಪ್ರಭಾವ ಬೀರುವ ಮಾಧ್ಯಮವಾಗಿ ಬೆಳೆದಿವೆ ಎಂದು ಅವರು ಮಾಹಿತಿ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಡಿ. ಅಶೋಕ್ ಕುಮಾರ್, ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್, ಮಹಾರಾಣಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಅಶ್ವಿನಿ ಮೊದಲಾದವರು ಇದ್ದರು.