ಡಾ. ಬಿ.ಎ. ವಿವೇಕ ರೈ ಅವರಿಗೆ ಪಂಪ ಪ್ರಶಸ್ತಿ ಪ್ರದಾನ

| Published : Apr 13 2025, 02:15 AM IST

ಡಾ. ಬಿ.ಎ. ವಿವೇಕ ರೈ ಅವರಿಗೆ ಪಂಪ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡದ ನೆಲದಲ್ಲಿ ಪಂಪ ಪ್ರಶಸ್ತಿ ಪಡೆದಿರುವುದಕ್ಕೆ ಬದುಕಿನಲ್ಲಿ ಧನ್ಯತೆ ಪಡೆದಿದ್ದೇನೆ.

ಶಿರಸಿ: ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ಹಮ್ಮಿಕೊಂಡ ಕದಂಬೋತ್ಸವ ೨೦೨೫ರ ವೇದಿಕೆಯಲ್ಲಿ ೨೦೨೪-೨೫ ಸಾಲಿನ "ಪಂಪ ಪ್ರಶಸ್ತಿ "ಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಅವರಿಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡದ ನೆಲದಲ್ಲಿ ಪಂಪ ಪ್ರಶಸ್ತಿ ಪಡೆದಿರುವುದಕ್ಕೆ ಬದುಕಿನಲ್ಲಿ ಧನ್ಯತೆ ಪಡೆದಿದ್ದೇನೆ. ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡಿ ಕನ್ನಡಗರ ಪ್ರೀತಿಯನ್ನು ಧಾರೆ ಎರೆದಿದ್ದಾರೆ. ಬನವಾಸಿಯು ಬಹುಸಂಸ್ಕೃತಿಯ ಹಾಗೂ ಬಹುಧರ್ಮದ ಪವಿತ್ರ ತಾಣವಾಗಿದೆ. ಬನವಾಸಿಯಲ್ಲಿ ಪಂಪ ತಿಳಿಸಿದಂತೆ ಮಾವು, ಮಲ್ಲಿಗೆಯ ಕಂಪು ಹರಡುವಂತೆ ಇಲ್ಲಿ ಆ ಗಿಡಗಳನ್ನು ನೆಡುವಂತಾಗಬೇಕು. ಪ್ರತಿಯೊಬ್ಬರೂ ಬಹುಧರ್ಮವನ್ನು ಸ್ವೀಕರಿಸಬೇಕು.‌ ಒಂದು ಧರ್ಮದಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಅಂತೆಯೇ ಅಕ್ಷರ ಹಾಗೂ ಧ್ಯೇಯ ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದರು.

ಇಂತಹ ಜಾತಿಯಲ್ಲಿ ಹುಟ್ಟುತ್ತೇನೆ ಎಂದು ಯಾರೂ ಅರ್ಜಿ ಹಾಕಿ ಹುಟ್ಟುವುದಿಲ್ಲ.‌ ಹುಟ್ಟಿದ ಮೇಲೆ ಏನು ಕೆಲಸ ಮಾಡುತ್ತೇವೆ ಎಂಬುದು ಮುಖ್ಯ. ನಾವು ಮಾಡುವ ಕೆಲಸ ಕುಲ; ಹುಟ್ಟಿನಿಂದ ಕುಲ ಬರುವುದಿಲ್ಲ. ಪಂಪ, ಬಸವಣ್ಣ, ಕುವೆಂಪು, ಕನಕದಾಸರು ನಮಗೆ ಆದರ್ಶರಾಗಬೇಕು. ಬನವಾಸಿಯ ಪಂಪವನ ನೋಡಿ ಬಹಳ ದುಃಖವಾಯಿತು. ಅದರ ನಿರ್ವಹಣೆ ಮಾಡುವುದು ಅತ್ಯವಶ್ಯವಾಗಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಶಾಸಕರಾದ ಶಿವರಾಮ ಹೆಬ್ಬಾರ, ಸತೀಶ ಸೈಲ್, ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಶಿರಸಿ ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ಬನವಾಸಿ ಗ್ರಾಪಂ ಅಧ್ಯಕ್ಷೆ ಬಿಬಿ ಆಯಿಷಾ, ಗುಡ್ನಾಪುರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯ್ಕ ಮತ್ತಿತರರು ಇದ್ದರು.

ಪಂಪನಿಗೆ ಸ್ಮಾರಕ ಕಟ್ಟುವುದು ಬೇಡ. ಪಂಪ ಭವನ ನಿರ್ಮಾಣ ಮಾಡಿ ಪಂಪನ ಸಾಧನೆ, ಕಾವ್ಯಗಳು ಹಾಗೂ ಸಾಧನೆಗಳನ್ನು ನಮೂದಿಸಿದರೆ ಕನ್ನಡ ನಾಡಿನ ಜನರಿಗೆ ಅವರ ಕುರಿತು ತಿಳಿಸಿದಂತಾಗುತ್ತದೆ. ಇದು ನನ್ನ ಸಲಹೆ ೨೦೨೫ನೇ ಸಾಲಿನ ಪಂಪ ಪ್ರಶಸ್ತಿ ಪುರಸ್ಕೃತ ಡಾ.ಬಿ.ಎ. ವಿವೇಕ ರೈ.