ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ಶೋಷಿತ ಸಮುದಾಯ ರಾಜಕೀಯ ಅಧಿಕಾರ ಪಡೆಯುವ ಮೂಲಕ ಮಾತ್ರ ಅಭಿವೃದ್ಧಿಯನ್ನು ಕಂಡುಕೊಳ್ಳಬಹುದು ಎಂದು ಸಾರಿದ ಧೀಮಂತ ನಾಯಕರಾಗಿದ್ದಾರೆಂದು ಶಾಸಕ ಜಿ.ಡಿ. ಹರೀಶ್ ಗೌಡ ಅಭಿಪ್ರಾಯಪಟ್ಟರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲೂಕು ಘಟಕ, ಆದಿಜಾಂಬವ ಸಂಘದ ಸಹಯೋಗದಲ್ಲಿ ಪಟ್ಟಣದಲ್ಲಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಂರ 118ನೆ ಜಯಂತಿ ಅಂಗವಾಗಿ ನಡೆದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಾಲ್ಯದಿಂದಲೇ ಬಾಬೂಜಿ ಅಸಮಾನತೆ, ನಿಷ್ಕೃಷ್ಟತೆ ವಿರುದ್ಧ ಹೋರಾಟ ಮನೋಭಾವ ತಳೆದಿದ್ದರು. ಅನ್ಯಾಯವನ್ನು ಧೈರ್ಯದಿಂದ ಪ್ರಶ್ನಿಸುವ ಮತ್ತು ಅದರ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಂಡಿದ್ದರು. ಸತತ 40 ವರ್ಷಗಳ ಕಾಲ ದೇಶದ ಸಂಸತ್ ಸದಸ್ಯರಾಗಿ ವಿವಿಧ ಖಾತೆಗಳ ಸಚಿವರಾಗಿ ಯಶಸ್ವಿಯಾಗಿ ನಿಭಾಯಿಸಿದರು ಎಂದರು.ತಹಸೀಲ್ದಾರ್ ಜೆ. ಮಂಜುನಾಥ್ ಮಾತನಾಡಿ, ಬಾಬೂಜಿ ಮತ್ತು ಅಂಬೇಡ್ಕರ್ ಈ ದೇಶದ ಎರಡು ಕಣ್ಣುಗಳಿದ್ದಂತೆ. ಅಂಬೇಡ್ಕರ್ ಶಿಕ್ಷಣದ ಮೂಲಕ ಅಭಿವೃದ್ಧಿ ಎನ್ನುವ ಧ್ಯೇಯದೊಂದಿಗೆ ದುಡಿದರೆ, ಬಾಬೂಜಿ ರಾಜಕೀಯ ಅಧಿಕಾರ ಪಡೆಯುವ ಮೂಲಕ ಅಭಿವೃದ್ಧಿಯ ಕನಸನ್ನು ಕಂಡಿದ್ದರು ಎಂದರು.ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಶಿವಣ್ಣ, ಜಿಲ್ಲಾ ಕಾರ್ಯದರ್ಶಿ ಡಿ. ಕುಮಾರ್, ತಾಲೂಕಿನ ಆದಿಜಾಂಬವ ಸಮಾಜದ ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಿಡಿಸಿಟ್ಟರು. ನಗರದಲ್ಲಿ ಬಾಬೂಜಿ ಪ್ರತಿಮೆ ಸ್ಥಾಪನೆಗೆ ಒತ್ತಾಯಿಸಿದರು.ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಗಜೇಂದ್ರ, ಅಮೃತ, ಸ್ವಪ್ನ, ನಿಶಾ ಮತ್ತು ವಿಜಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಬಾಬೂಜಿಯವರ ಭಾವಚಿತ್ರವನ್ನೊಳಗೊಂಡ ಭವ್ಯ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳು, ಮಂಗಳವಾದ್ಯ ಮುಂತಾದವು ಭಾಗವಸಿದ್ದವು. ಮುಖಂಡರಾದ ನಿಂಗರಾಜ ಮಲ್ಲಾಡಿ, ಎಸ್ಸಿ, ಎಸ್ಟಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಮಹದೇವ್, ದೇವರಾಜ ಒಡೆಯರ್, ರಾಘು, ಸಣ್ಣಮಾದಯ್ಯ, ಕುಮಾರ್, ಆಂಜನೇಯ, ಉಪವಿಭಾಗಾಧಿಕಾರಿ ಎಚ್.ಬಿ. ವಿಜಯಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ಕುಮಾರ್, ಬಿಇಒ ಎಸ್.ಪಿ. ಮಹದೇವ ಇದ್ದರು.------------------