ಜಿಲ್ಲಾ ಜಾನಪದ ಸಮ್ಮೇಳನಕ್ಕೆ ಡಾ. ಬಿದರಿ ಅಧ್ಯಕ್ಷ

| Published : May 08 2025, 12:33 AM IST

ಸಾರಾಂಶ

ಬಾಗಲಕೋಟೆ ಜಿಲ್ಲಾ ದ್ವಿತೀಯ ಕನ್ನಡ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಜಾನಪದ ಆಶುಕವಿ ಸಿದ್ದಪ್ಪ ಬಿದರಿ ದಂಪತಿಯನ್ನು ಕಜಾಪ ಪದಾಧಿಕಾರಿಗಳು ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ತಾಲೂಕಿನ ಅನಗವಾಡಿ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಹಾಗೂ ತಾಲೂಕು ಘಟಕಗಳ ಆಶ್ರಯದಲ್ಲಿ ಮೇ 20ರಂದು ಜರುಗಲಿರುವ ಬಾಗಲಕೋಟೆ ಜಿಲ್ಲಾ ದ್ವಿತೀಯ ಕನ್ನಡ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜಾನಪದ ಆಶುಕವಿ ಡಾ.ಸಿದ್ದಪ್ಪ ಬಿದರಿ ಅವರನ್ನು ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಲಾಯಿತು. ತಾಲೂಕಿನ ಅನಗವಾಡಿ ಗ್ರಾಮದ ಗುರು ಹಿರಿಯರೊಂದಿಗೆ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು ಡಾ.ಸಿದ್ದಪ್ಪ ಬಿದರಿ ಅವರ ಮನೆಗೆ ತೆರಳಿ ಬಿದರಿ ದಂಪತಿಯನ್ನು ಸನ್ಮಾನಿಸಿ, ಆಹ್ವಾನ ನೀಡಲಾಯಿತು.

ಈ ವೇಳೆ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಎಂ.ಸಾವಕಾರ ಮಾತನಾಡಿ, ಬೀಳಗಿಯ ಹೆಮ್ಮೆಯಾಗಿರುವ ಜಾನಪದ ಆಶುಕವಿ ಸಿದ್ದಪ್ಪ ಬಿದರಿ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಬಾಗಲಕೋಟೆ ಜಿಲ್ಲಾ 2ನೇ ಕನ್ನಡ ಜಾನಪದ ಸಮ್ಮೇಳನವನ್ನು ಪಕ್ಷಾತೀತ, ಜಾತ್ಯತೀತ, ಧರ್ಮಾತೀತವಾಗಿ ಸಂಘಟಿಸಿ, ಯಶಸ್ವಿಗೊಳಿಸಲು ಅನಗವಾಡಿ ಗ್ರಾಮಸ್ಥರು ಶ್ರಮಿಸುತ್ತಿದ್ದಾರೆ. ಆಶುಕವಿ ಸಿದ್ದಪ್ಪ ಬಿದರಿ ಸಾರಸ್ವತ ಲೋಕಕ್ಕೆ ಹಲವು ಮೌಲ್ಯಿಕ ಕೃತಿಗಳನ್ನು ಕೊಟ್ಟಿದ್ದು, ನೆಲಮೂಲ ಸಂಸ್ಕೃತಿಯಾಗಿರುವ ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ನಾಡಿನಾದ್ಯಂತ ಶ್ರಮಿಸುತ್ತಿದ್ದಾರೆ. ಶ್ರೀಯುತರ ಸಾಧನೆ ಗಮನಿಸಿ ಒಮ್ಮತದಿಂದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಒಪ್ಪಿಕೊಂಡು ಸನ್ಮಾನ ಸ್ವೀಕರಿಸಿದ ಡಾ.ಸಿದ್ದಪ್ಪ ಬಿದರಿ ಕೃತಜ್ಞತಾ ಪೂರ್ವಕವಾಗಿ ಮಾತನಾಡಿ, ಸಮ್ಮೇಳನದ ಸರ್ವಾಧ್ಯಕ್ಷತೆ ನನಗೆ ಒಲಿದು ಬಂದಿರುವುದು ಸಂತಸ ತಂದಿದೆ. ತೆರೆ ಮರೆಯ ನನ್ನ ಸಾಧನೆಗೆ ಈ ಗೌರವ ಸ್ಥಾನ ನೀಡಿದ್ದಕ್ಕಾಗಿ ಜಾನಪದ ಪರಿಷತ್ತಿನ ಅಧ್ಯಕ್ಷರಿಗೂ, ಸರ್ವ ಬಳಗಕ್ಕೂ ಋಣಿಯಾಗಿರುವೆ ಎಂದು ಹೇಳಿದರು.

ಈ ವೇಳೆ ಕಜಾಪ ಜಿಲ್ಲಾ ಖಜಾಂಚಿ ಸುರೇಶ ವಸ್ತ್ರದ, ಜಿಲ್ಲಾ ಸಂಚಾಲಕ ನಿಂಗರಾಜ ಮಬ್ರುಮಕರ, ತಾಲೂಕಾಧ್ಯಕ್ಷ ಬಸವರಾಜ ದಾವಣಗೆರೆ, ಖಜಾಂಚಿ ಎಂ.ಬಿ.ತಾಂಬೋಳಿ, ಮಹಿಳಾ ಘಟಕದ ಅಧ್ಯಕ್ಷೆ ಎಚ್.ಬಿ.ಮಾಳಗೊಂಡ, ಎಂ.ಎಸ್.ಮಠಪತಿ, ಬಿ.ಎಂ.ಸಾಹುಕಾರ, ಶಿವಾನಂದ ಹಿರೇಮಠ, ಆನಂದರಾವ ನಾಯ್ಕ, ಎಸ್.ಬಿ.ಯಾವಗಲ್ಮಠ, ಮಹೇಶ ಮಾದರ, ಪಿ.ಎಂ.ನದಾಫ, ಶಂಕರ ಡಬರಿ, ಬಿ.ಎಸ್.ಮಾಳಗೊಂಡ, ಲಕ್ಷ್ಮಣ ಬಂಡಿವಡ್ಡರ, ಜೆ. ಎಂ. ಬಂಧುಗೋಳ ಮತ್ತಿತರಿದ್ದರು.