ಸಾರಾಂಶ
ಮುಂಡಗೋಡ ಪಟ್ಟಣದಲ್ಲಿ ಸೋಮವಾರ ಜರುಗಿದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ ಜಯಂತ್ಯೋತ್ಸವದಲ್ಲಿ ಮೊರಾರ್ಜಿ ದೇಸಾಯಿ ವಸತಿ ವಿದ್ಯಾಲಯದ ಪ್ರಾಂಶುಪಾಲ ಮಂಜುನಾಥ ಮರಿತಮ್ಮಣ್ಣವರ ಉಪನ್ಯಾಸ ನೀಡಿದರು.
ಮುಂಡಗೋಡ: ಡಾ. ಅಂಬೇಡ್ಕರ್ ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ ಬದಲಾಗಿ ಶಕ್ತಿಯಾಗಿದ್ದರು ಎಂದು ಇಲ್ಲಿಯ ಮೊರಾರ್ಜಿ ದೇಸಾಯಿ ವಸತಿ ವಿದ್ಯಾಲಯದ ಪ್ರಾಂಶುಪಾಲ ಮಂಜುನಾಥ ಮರಿತಮ್ಮಣ್ಣವರ ಹೇಳಿದರು.
ಸೋಮವಾರ ಪಟ್ಟಣದಲ್ಲಿ ಜರುಗಿದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ ಅವರ ಜಯಂತ್ಯೋತ್ಸವದಲ್ಲಿ ಅವರು ಉಪನ್ಯಾಸ ನೀಡಿದರು. ಸ್ವಾತಂತ್ರ್ಯಾನಂತರ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಆ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಬಲಿಷ್ಠವಾದ ಸಂವಿಧಾನ ರಚನೆ ಮಾಡಿ, ದೇಶದ ಅಭಿವೃದ್ಧಿಯ ಯೋಜನೆ ರೂಪಿಸುವಲ್ಲಿ ಸಹಕಾರಿಯಾದರು. ಶಿಕ್ಷಣ, ಸಂಘಟನೆ ಮತ್ತು ಹೋರಾಟಕ್ಕೆ ಆದ್ಯತೆ ನೀಡುವ ಮೂಲಕ ಪ್ರತಿಯೊಬ್ಬರೂ ಶಿಕ್ಷಣ ಜ್ಞಾನ ಹೊಂದಬೇಕು ಎಂಬುದು ಅವರ ಧ್ಯೇಯವಾಗಿತ್ತು. ಸರ್ವರಿಗೂ ಸಮ ಪಾಲು ಸರ್ವರಿಗೂ ಸಮ ಬಾಳು ಎಂಬ ದೃಷ್ಟಿಕೋನದಲ್ಲಿ ಚಾತುರ್ವರ್ಣ ನೀತಿಯ ವಿರುದ್ಧ ಹೋರಾಟ ನಡೆಸಿ, ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ-ಮಹಾರಾಜರಿಗಿಂತ ಹೆಚ್ಚು ಬೆಲೆ ಇರುವುದು ಜ್ಞಾನವಂತರಿಗೆ ಎಂಬುದನ್ನು ಪ್ರತಿಪಾದಿಸುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. ಅವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆಯಬೇಕು ಎಂದು ಕರೆ ನೀಡಿದರು.ಮಾಜಿ ಶಾಸಕ ವಿ.ಎಸ್. ಪಾಟೀಲ, ಜಿಪಂ ಮಾಜಿ ಸದಸ್ಯ ಎಲ್.ಟಿ. ಪಾಟೀಲ, ಪಪಂ ಅಧ್ಯಕ್ಷೆ ಜಯಸುಧಾ ಬೋವಿ, ತಹಸೀಲ್ದಾರ್ ಶಂಕರ ಗೌಡಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಾಳೇಶ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಕರಿಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಾಮು ಬಯಲುಸೀಮೆ, ದಲಿತ ಮುಖಂಡ ಎಸ್. ಫಕ್ಕೀರಪ್ಪ, ಚಿದಾನಂದ ಹರಿಜನ, ಎನ್.ಡಿ. ಕಿತ್ತೂರ, ಬಸವರಾಜ ಸಂಗಮೇಶ್ವರ, ಹನುಮಂತಪ್ಪ ಭಜಂತ್ರಿ, ಅಶೋಕ ಚಲವಾದಿ, ಶರೀಫ ಮುಗಳಿಕಟ್ಟಿ ಉಪಸ್ಥಿತರಿದ್ದರು.