ಸಂವಿಧಾನದಲ್ಲಿರುವ ವಿಷಯಗಳನ್ನು ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಳ್ಳಬೇಕಿದೆ. ಹುಟ್ಟಿನಿಂದ ಸಾಯುವವರೆಗೂ ಸಂವಿಧಾನದಲ್ಲಿಯೇ ಬದುಕಬೇಕಾಗಿರುವುದರಿಂದ ಸಂವಿಧಾನದ ಅರಿವು ಮುಖ್ಯವಾಗಿದೆ .
ಕನ್ನಡಪ್ರಭ ವಾರ್ತೆ ಮಳವಳ್ಳಿ
ದೇಶದ ಎಲ್ಲಾ ಜನರು ಜಾತಿ, ಧರ್ಮ ಮತ್ತು ಲಿಂಗಬೇಧವಿಲ್ಲದೇ ಒಂದೇ ಎನ್ನುವ ಸಮಾನತೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಕೊಟ್ಟಿದ್ದಾರೆ. ಅದರಂತೆ ನಾವು ನಡೆಯಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ಒಂದೊಂದು ವೋಟು ಎಂಬ ತೀರ್ಮಾನ ಕೊಟ್ಟು ಜನರಿಂದಲೇ ಜನಪ್ರತಿನಿಧಿ ಆಯ್ಕೆ ಮಾಡುವ ಹಕ್ಕು ತಂದುಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ಆಡಳಿತ, ಕಾನೂನು, ಜನರ ಬದುಕಿಗೆ ಸಂವಿಧಾನ ಹೇಗೆ ಇರಬೇಕು ಎಂಬುವುದರ ಬಗ್ಗೆ ಸಂಪೂರ್ಣ ಅರ್ಥಗರ್ಭಿತವಾದ ಮೂಲಗ್ರಂಥವನ್ನು ಅಂಬೇಡ್ಕರ್ ಕೊಟ್ಟಿದ್ದಾರೆ. ಇಂಥವರ ಬಗ್ಗೆ ಕ್ಷುಲ್ಲಕ ವಿಚಾರಕ್ಕೆ ಬಾಯಿಗೆ ಬಂದಂತೆ ಮಾತನಾಡುವವರಿಗೆ ಧಿಕ್ಕಾರವಿರಲಿ ಎಂದು ಹೇಳಿದರು.ವಿವಿಧತೆಯಲ್ಲಿ ಏಕತೆ ಇರುವ ದೇಶ ಭಾರತ. ಹಲವು ಧರ್ಮ,ಜಾತಿ, ಭಾಷೆ, ಸಂಸ್ಕೃತಿ ಆಚರಣೆ, ಎಲ್ಲವೂ ವಿಭಿನ್ನವಾಗಿದ್ದರೂ, ಕನ್ಯಾಕುಮಾರಿಯಿಂದ- ಕಾಶ್ಮೀರದವರೆಗೆ, ಅಸ್ಸಾಂನಿಂದ ಗುಜರಾತ್ ವರೆಗೆ ದೇಶದಲ್ಲಿ ಇರುವಂಥ ಪರಂಪರೆ ಹಾಗೂ ಬದುಕಿನಲ್ಲಿ ನಾವು ಭಾರತೀಯರು ಎಂದು ಹೆಮ್ಮೆಯಿಂದ ಬದುಕಲು ಸಂವಿಧಾನವೇ ಮೂಲ ಕಾರಣವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವಿಶ್ರಾಂತ ಉಪನ್ಯಾಸಕ ಪ್ರೊ.ರಂಗಸ್ವಾಮಿ ಮಾತನಾಡಿ, ಸಂವಿಧಾನದಲ್ಲಿರುವ ವಿಷಯಗಳನ್ನು ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಳ್ಳಬೇಕಿದೆ. ಹುಟ್ಟಿನಿಂದ ಸಾಯುವವರೆಗೂ ಸಂವಿಧಾನದಲ್ಲಿಯೇ ಬದುಕಬೇಕಾಗಿರುವುದರಿಂದ ಸಂವಿಧಾನದ ಅರಿವು ಮುಖ್ಯವಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ಸಂವಿಧಾನ ಪೀಠಿಕೆ ಓದಲಾಯಿತು. ವೇದಿಕೆಯಲ್ಲಿ ತಹಸೀಲ್ದಾರ್ ಲೋಕೇಶ್, ತಾಪಂ ಇಒ ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಕ್ಷೇತ್ರಶಿಕ್ಷಣಾಧಿಕಾರಿ ವಿ.ಈ.ಉಮಾ, ಗ್ಯಾರಂಟಿ ಯೋಜನೆ ಅನುಷ್ಠಾನ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ, ತಾಲೂಕು ಅಧ್ಯಕ್ಷ ಮಾದೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜು, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಮುಖಂಡರಾದ ಸಂತೋಷ್, ಕಸಾಪ ತಾಲೂಕು ಅಧ್ಯಕ್ಷ ಚೇತನ್‌ಕುಮಾರ್ ಸೇರಿದಂತೆ ಇತರರು ಇದ್ದರು.