ಸಾರಾಂಶ
ಬೆಳಗ್ಗೆ 10ಕ್ಕೆ ಉದ್ಘಾಟನಾ ಕಾರ್ಯಕ್ರಮ,ಆ.18ರ ಸಂಜೆ 4ಕ್ಕೆ ಸಮಾರೋಪ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಜಿಲ್ಲಾ ವೈಟ್ ಲಿಫ್ಟಿಂಗ್ ಸಂಸ್ಥೆ ಹಾಗೂ ಫಿಸಿಕಲ್ ಎಜುಕೇಷನ್ ಟೀಚರ್ಸ್ ಅಕಾಡೆಮಿ ಟ್ರಸ್ಟ್ ಸಂಯುಕ್ತವಾಗಿ ಆ.17 ಮತ್ತು 18 ರಂದು ನಗರದ ಜಯಲಕ್ಷ್ಮೀಪುರಂ ಮಹಾಜನ ಕಾಲೇಜಿನ ಡಾ. ಅಬ್ದುಲ್ ಕಲಾಂ ಮೈದಾನದಲ್ಲಿ ರಾಜ್ಯ ವೈಟ್ ಲಿಫ್ಟಿಂಗ್ ಚಾಂಪಿಯನ್ ಷಿಪ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಡಾ.ಸಿ. ಕೃಷ್ಣ ತಿಳಿಸಿದರು.ಆ.17ರ ಬೆಳಗ್ಗೆ 10ಕ್ಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ವೈಟ್ ಲಿಫ್ಟರ್ಸ್ ಸಂಸ್ಥೆಯ ಗೌರವಾಧ್ಯಕ್ಷ ಡಾ.ಪಿ. ದಯಾನಂದ ಪೈ, ಗೌರವ ಕಾರ್ಯದರ್ಶಿ ಎಸ್.ಎಚ್. ಆನಂದೇಗೌಡ, ಕಾರ್ಯಾಧ್ಯಕ್ಷೆ ಶ್ಯಾಮಲಾ ಶೆಟ್ಟಿ, ಮಾಜಿ ವೈಟ್ ಲಿಫ್ಟರ್ ಪುಷ್ಪರಾಜ್ ಹೆಗ್ಡೆ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮೊದಲಾದವರು ಅತಿಥಿಯಾಗುವರು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆ.18ರ ಸಂಜೆ 4ಕ್ಕೆ ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಪಿ. ಸುರೇಶ್ ಆಳ್ವ, ಭಾರತೀಯ ಬಾಲ್ ಬ್ಯಾಡ್ ಮಿಂಟನ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ದಿನೇಶ್ ಅತಿಥಿಯಾಗುವರು. ಮೈಸೂರಿನಲ್ಲಿ ಪ್ರಥಮ ಬಾರಿಗೆ ಈ ರೀತಿಯ ಪಂದ್ಯಾವಳಿ ನಡೆಯುತ್ತಿದೆ. ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತಿದ್ದು, 350 ಹೆಚ್ಚು ವೈಟ್ ಲಿಫ್ಟಿಂಗ್ ಪಟುಗಳು ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು.ಶೇಷಾದ್ರಿಪುರಂ ಪದವಿ ಕಾಲೇಜು ಪ್ರಾಂಶುಪಾಲೆ ಪ್ರೊ. ಸೌಮ್ಯ ಈರಪ್ಪ, ಸಿ.ಕೆ. ಮುರಳೀಧರ್, ಡಾ. ಸದಾಶಿವ ಭಟ್, ಪ್ರೊ. ಗುರುಮೂರ್ತಿ ಭಟ್ ಇದ್ದರು.