ವೈದ್ಯಕೀಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದೇನೆ. ಕೋವಿಡ್ ವೇಳೆ ತಾಲೂಕಿನ ಜನರ ಆರೋಗ್ಯ ಹಿತದೃಷ್ಟಿಯಿಂದ ಸುಮಾರು 30 ಲಕ್ಷ ರು.ಬೆಲೆ ಬಾಳುವ ಆರೋಗ್ಯ ಕಿಟ್ ವಿತರಿಸಿದ್ದೇನೆ. ತಾಲೂಕಿನಲ್ಲಿಯೇ ಹುಟ್ಟಿ ಬೆಳೆದು ಎಲ್ಲಾ ಸಮಸ್ಯೆಗಳನ್ನು ಕಂಡಿದ್ದು, ಹೊಸ ಬದಲಾವಣೆಗಾಗಿ ಕ್ಷೇತ್ರದ ಮತದಾರರು ನಿರೀಕ್ಷೆಯಲ್ಲಿದ್ದಾರೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ವೈದ್ಯಕೀಯ ವೃತ್ತಿ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿರುವುದಾಗಿ ಡಾ.ಚಂದ್ರಶೇಖರ್ ತಿಳಿಸಿದರು.ಪಟ್ಟಣದ ತಮ್ಮಡಹಳ್ಳಿ ರಸ್ತೆಯ ರಾಜಪ್ಪ ಕನ್ವೇಷನ್ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದೇನೆ. ಕೋವಿಡ್ ವೇಳೆ ತಾಲೂಕಿನ ಜನರ ಆರೋಗ್ಯ ಹಿತದೃಷ್ಟಿಯಿಂದ ಸುಮಾರು 30 ಲಕ್ಷ ರು.ಬೆಲೆ ಬಾಳುವ ಆರೋಗ್ಯ ಕಿಟ್ ವಿತರಿಸಿದ್ದೇನೆ. ತಾಲೂಕಿನಲ್ಲಿಯೇ ಹುಟ್ಟಿ ಬೆಳೆದು ಎಲ್ಲಾ ಸಮಸ್ಯೆಗಳನ್ನು ಕಂಡಿದ್ದು, ಹೊಸ ಬದಲಾವಣೆಗಾಗಿ ಕ್ಷೇತ್ರದ ಮತದಾರರು ನಿರೀಕ್ಷೆಯಲ್ಲಿದ್ದಾರೆಂದು ಹೇಳಿದರು.
ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಬದಲಾವಣೆ ಕಾಣಬೇಕಿದೆ. ರಾಜಕೀಯ ಶಕ್ತಿ ನೀಡಿದರೇ ಅಭಿವೃದ್ಧಿ ಜೊತೆಗೆ ಮುಖಂಡರು ಹಾಗೂ ಕಾರ್ಯಕರ್ತರನ್ನು ಎಂದಿಗೂ ಕೈ ಬಿಡುವುದಿಲ್ಲ. ನಿರಂತರವಾಗಿ ಕ್ಷೇತ್ರ ಪ್ರವಾಸ ಮಾಡಿ ಯುವಕರನ್ನು ಸಂಘಟಿಸುವುದಾಗಿ ಹೇಳಿದರು.ತಾಪಂ ಮಾಜಿ ಸದಸ್ಯ ನಟೇಶ್ ಮಾತನಾಡಿ, ತಾಲೂಕಿನ ಜೆಡಿಎಸ್ ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ. ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸದೇ ನಿರ್ಲಕ್ಷ್ಯ ವಹಿಸುವ ಮಾಜಿ ಶಾಸಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎನ್ನುವುದು ನಮ್ಮೆಲ್ಲರ ಒತ್ತಾಯವಾಗಿದೆ. ಜೆಡಿಎಸ್ ವರಿಷ್ಠರಾದ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ತಾಲೂಕಿಗೆ ಹೊಸ ನಾಯಕತ್ವಕ್ಕೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ಜೆಡಿಎಸ್ ಪಕ್ಷ ಮುಖಂಡ ಜವರೇಗೌಡರು ಸ್ನೇಹ ಪೂರ್ವಕವಾಗಿ ದೇವರ ಸೇವೆಯನ್ನು ಇಟ್ಟಿಕೊಂಡಿದ್ದಾರೆ. ಡಾ.ಚಂದ್ರಶೇಖರ್ ಅವರಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ಸಭೆ ನಡೆಸಲಾಗುತ್ತಿದೆ. ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಬೇಡ ಎಂದರು.ಜೆಡಿಎಸ್ ಹಿರಿಯ ಮುಖಂಡ ವೀರೇಗೌಡ ಮಾತನಾಡಿ, ಮಾಜಿ ಶಾಸಕ ಡಾ.ಅನ್ನದಾನಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸ್ಪಂದಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪಕ್ಷಕ್ಕೆ ಹಿನ್ನೆಡೆಯಾಗುತ್ತಿರುವುದರಿಂದ ಜೆಡಿಎಸ್ ಪಕ್ಷಕ್ಕೆ ಹೊಸ ಆಕಾಂಕ್ಷಿತ ಅಭ್ಯರ್ಥಿ ಅವಶ್ಯಕತೆ ಇದೆ. ಸ್ಪರ್ಧೆ ಮಾಡುವ ಆಶಯ ಹೊಂದಿರುವ ಡಾ.ಚಂದ್ರಶೇಖರ್ ಮೊದಲು ತಾಲೂಕಿನಾದ್ಯಂತ ಪಕ್ಷ ಸಂಘಟನೆಗೆ ಮುಂದಾಗಲಿ ಎಂದರು.
ಜೆಡಿಎಸ್ ಮುಖಂಡ ಜವರೇಗೌಡ ಮಾತನಾಡಿ, ತಾಲೂಕಿನಲ್ಲಿ ಜೆಡಿಎಸ್ ಪಕ್ಷ ತನ್ನದೇ ಆದ ಸಾಮಾರ್ಥ್ಯವನ್ನು ಹೊಂದಿದೆ. ಕ್ಷೇತ್ರಕ್ಕೆ ಹೊಸಬರು ಬರಲಿ ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ. ವೈದ್ಯ ವೃತ್ತಿಯಲ್ಲಿರುವ ಚಂದ್ರಶೇಖರ್ ಅವರು ರಾಜಕೀಯ ಪ್ರವೇಶ ಮಾಡಲು ಕ್ಷೇತ್ರಕ್ಕೆ ಬಂದಿದ್ದು, ಸಹಕಾರ ನೀಡಬೇಕೆಂದು ಕೋರಿದರು.