ಲಕ್ಷ್ಮೇಶ್ವರ: ಶಾಸಕ ಡಾ. ಚಂದ್ರು ಲಮಾಣಿ ಭ್ರಷ್ಟಾಚಾರದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಮೂಲಕ ಕ್ಷೇತ್ರದ ಮತದಾರರು ಮತ್ತು ಜನತೆಯ ನಂಬಿಕೆಗೆ ದ್ರೋಹ ಮಾಡಿದ್ದಾರೆ. ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕತೆ ಇಲ್ಲದ ಅವರು ಕೂಡಲೇ ರಾಜೀನಾಮೆ ಕೊಟ್ಟು ವೈದ್ಯ ವೃತ್ತಿ ಮುಂದುವರಿಸಬೇಕು ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಮತ್ತು ರಾಮಕೃಷ್ಣ ದೊಡ್ಡಮನಿ ಆಗ್ರಹಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಹಟ್ಟಿ ಮತಕ್ಷೇತ್ರಕ್ಕೆ ಒಳ್ಳೆಯ ಹೆಸರು ಇದೆ. ವಿದ್ಯಾವಂತನೆಂದು ಜನರು ಕೊಟ್ಟ ಅವಕಾಶವನ್ನು ದುರುಪಯೋಗ ಮಾಡಿಕೊಂಡು ಲಂಚದ ಮೂಲಕ

ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಹಣ ಕೊಳ್ಳೆ ಹೊಡೆದುಕೊಂಡು ಹೋಗುವ ಇವರಿಂದ ಯಾವುದೇ ಅಭಿವೃದ್ಧಿ ಕೆಲಸ ಸಾಧ್ಯವಿಲ್ಲ. ಜೀವ ಬೆದರಿಕೆ, ಜಾತಿ ನಿಂದನೆ ಕೇಸ್ ಮಾಡಿಸುವ ಸಂಸ್ಕೃತಿಯ ಶಾಸಕನಿಂದ ಜನ ರೋಸಿ ಹೋಗಿದ್ದಾರೆ. ಪಕ್ಷಕ್ಕೆ ನೈತಿಕ ಹಕ್ಕಿದ್ದರೆ ಬಿಜೆಪಿಯವರು ಮತ್ತು ಜನರ ಹಿತದೃಷ್ಟಿಯಿಂದ ರಾಜ್ಯಪಾಲರು ಅವರ ರಾಜೀನಾಮೆ ಪಡೆಯಬೇಕು. ಕ್ಷೇತ್ರಕ್ಕೆ ಕೋಟ್ಯಂತರ ರು. ಅನುದಾನ ಬಂದಿದೆ. ಅದರೆ ಶಾಸಕ ಡಾ. ಚಂದ್ರು ಲಮಾಣಿ ರಾಜ್ಯ ಸರ್ಕಾರದಿಂದ ನಯಾಪೈಸೆ ಬಂದಿಲ್ಲ ಎಂದು ಹೇಳುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುತ್ತ, ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಏಕಚಕ್ರಾಧಿಪತ್ಯದ ಭ್ರಮೆಯಲ್ಲಿದ್ದ ಇವರ ಸ್ವಯಂಕೃತ ಅಪರಾಧದಿಂದ ಶಿಕ್ಷೆಗೆ ಒಳಗಾಗಿದ್ದಾರೆ ಎಂದರು.

ಕೆಪಿಸಿಸಿ ಸದಸ್ಯೆ ಸುಜಾತಾ ದೊಡ್ಡಮನಿ, ಚನ್ನಪ್ಪ ಜಗಲಿ, ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ಕೊಪ್ಪದ, ಪಂಚ ಗ್ಯಾರಂಟಿ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ನಾಗರಾಜ ಮಡಿವಾಳರ, ವೀರೇಂದ್ರಗೌಡ ಪಾಟೀಲ, ಶರಣು

ಗೋಡಿ, ಸೋಮಣ್ಣ ಬೆಟಗೇರಿ ಮಾತನಾಡಿ, ಡಾ. ಲಮಾಣಿ ಶಾಸಕ ರಾಜೀನಾಮೆ ಸಲ್ಲಿಸಬೇಕು ಎಂದರು. ಆನಂತರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.ಫಕ್ಕೀರೇಶ ಮ್ಯಾಟಣ್ಣವರ, ರಾಮಣ್ಣ ಲಮಾಣಿ (ಶಿಗ್ಲಿ), ಯಲ್ಲಪ್ಪ ಸೂರಣಗಿ, ನೀಲಪ್ಪ ಶರಸೂರಿ, ಶಿವಣ್ಣ ಕಬ್ಬೇರ, ಕಲ್ಲಪ್ಪ ಗಂಗಣ್ಣವರ, ಮನೋಜ ರಾಠೋಡ, ಜಗದೀಶ ಹುಲಿಗೆಮ್ಮನವರ, ಶಿವರಾಜಗೌಡ ಪಾಟೀಲ, ಪರಮೇಶ ಲಮಾಣಿ, ತಿಪ್ಪಣ್ಣ ಸಂಶಿ, ನಾಗರಾಜ ದೊಡ್ಡಮನಿ, ವಾಸೀಂ ಮುಚ್ಚಾಲೆ ಇದ್ದರು.