ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ:
ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆಯ ಬಲವರ್ಧನೆಗೆ ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಕೊಡುಗೆ ಅಪಾರ ಮತ್ತು ಅನನ್ಯವಾದದ್ದು. ಅತ್ಯುನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಿ.ವಿ.ವಿ ಸಂಘವನ್ನು ಶಿಕ್ಷಣದ ಕಾಶಿಯನ್ನಾಗಿಸಿದ್ದಾರೆ ಎಂದು ಬಿ.ವಿ.ವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ. ಸಜ್ಜನ (ಬೇವೂರ) ಹೇಳಿದರು.ಶುಕ್ರವಾರ ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ.ಚರಂತಿಮಠ ಅವರ ಜನ್ಮದಿನದ ಪ್ರಯುಕ್ತ ಕುಮಾರೇಶ್ವರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಾಲು ಮತ್ತು ಬ್ರೆಡ್ ವಿತರಿಸಿದ ನಂತರ ಅವರು ಮಾತನಾಡಿದರು.
ಆರೋಗ್ಯ ಸೇವಾಸೌಲಭ್ಯವನ್ನು ಸಾರ್ವಜನಿಕರಿಗೆ ಒದಗಿಸಿ ಕುಮಾರೇಶ್ವರ ಆಸ್ಪತ್ರೆಯನ್ನು ಬಡವರ ಆರೋಗ್ಯ ಧಾಮವನ್ನಾಗಿ ರೂಪಿಸಿರುವರು. ಸಮಾಜಕ್ಕೆ ಶ್ರೇಷ್ಠವಾದದ್ದನ್ನು ಕೊಡುಗೆಯಾಗಿ ನೀಡಬೇಕೆನ್ನುವ ಅವರೊಳಗಿನ ತುಡಿತ ಮತ್ತು ಪ್ರಾಮಾಣಿಕ ಕಾಳಜಿ ಇಂದು ಜಿಲ್ಲೆಯಲ್ಲಿ ಬಿ.ವಿ.ವಿ ಸಂಘದ ಅಗಾಧ ಬೆಳವಣಿಗೆಯ ರೂಪದಲ್ಲಿ ಅನಾವರಣಗೊಂಡಿವೆ ಎಂದು ತಿಳಿಸಿದರು.ಡಾ.ವೀರಣ್ಣ ಚರಂತಿಮಠ ಅವರ ಅವಿರತ ಪರಿಶ್ರಮದ ಪರಿಣಾಮ ಬಿ.ವಿ.ವಿ ಸಂಘದ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ರಾಜ್ಯದಲ್ಲಿ ಪ್ರತಿಷ್ಠಿತ ಸಂಸ್ಥೆಗಳೆಂದು ಮನ್ನಣೆ ಪಡೆದಿವೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ಬಿ.ವಿ.ವಿ ಸಂಘದ ಇಂದಿನ ಏಳ್ಗೆಗೆ ಶ್ರೀಯುತರ ನಿಸ್ವಾರ್ಥ ಸೇವೆ ಮತ್ತು ಜನಪರವಾದ ನಿಲುವು ಕಾರಣವಾಗಿವೆ. ಸಾರ್ವಜನಿಕರಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಒದಗಿಸಬೇಕೆನ್ನುವ ಅವರ ಕನಸು ಮುಂದಿನ ದಿನಗಳಲ್ಲಿ ಪ್ರತ್ಯೇಕ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅನಾವರಣದೊಂದಿಗೆ ಸಾಕಾರಗೊಳ್ಳಲಿದೆ. ಜನ್ಮದಿನದ ಈ ಶುಭ ಸಂದರ್ಭ ಸಮಾಜಕ್ಕೆ ಅವರಿಂದ ಇನ್ನಷ್ಟು ಕೊಡುಗೆಗಳು ದೊರೆಯಲಿ ಎಂದು ಹಾರೈಸುತ್ತ ದೇವರು ಅವರಿಗೆ ಆಯುರಾರೋಗ್ಯ ನೀಡಲೆಂದು ಪ್ರಾರ್ಥಿಸುತ್ತೇವೆ0 ಎಂದರು.
ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ವೈದ್ಯರಾದ ಡಾ.ಚಕಲಬುರ್ಗಿ, ಡಾ.ಕೋರಾ, ಡಾ.ಬಡಕಲಿ, ಡಾ.ನಾರಾಯಣ ಮುತಾಲಿಕ, ಡಾ.ಪಲ್ಲವಿ ಚರಂತಿಮಠ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.