ವಧೂವರರ ಅನ್ವೇಷಣೆ ಸೇವೆಯಾಗಬೇಕೆ ಹೊರತು ವ್ಯಾಪಾರವಲ್ಲ

| Published : May 21 2024, 12:41 AM IST

ವಧೂವರರ ಅನ್ವೇಷಣೆ ಸೇವೆಯಾಗಬೇಕೆ ಹೊರತು ವ್ಯಾಪಾರವಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ದಿನಗಳಲ್ಲಿ ವಧುಗಳ ಕೊರತೆ ಎದ್ದು ಕಾಣುತ್ತಿದೆ ಮತ್ತು ಜಾಸ್ತಿಯಾಗುತ್ತಿದೆ. ಇದಕ್ಕೆ ಅನೇಕ ಕಾರಣಗಳಿವೆ. ಇದನ್ನು ಅರಿತುಕೊಂಡು ಸರಿಪಡಿಸಲು ಎಲ್ಲರೂ ಸೇರಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅನೇಕ ರೀತಿಯ ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ

ಕನ್ನಡಪ್ರಭ ವಾರ್ತೆ ಮೈಸೂರು

ವಧು- ವರರ ಅನ್ವೇಷಣೆ ಸೇವೆಯಾಗಬೇಕೆ ಹೊರತು ವ್ಯಾಪಾರವಲ್ಲ ಎಂದು ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಕೆ. ರಾಜೇಂದ್ರ ತಿಳಿಸಿದರು.ಮೈಸೂರಿನ ಜಯನಗರದಲ್ಲಿ ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್, ನೇಗಿಲಯೋಗಿ ಮಹಿಳೆಯರ ಕ್ಷೇಮಾಭಿವೃದ್ದಿ ಸಂಘವು ಆಯೋಜಿಸಿದ್ದ ಒಕ್ಕಲಿಗ ವಧು-ವರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಜನಾಂಗದ ಅಭಿವೃದ್ಧಿಗೆ ಆ ಜನಾಂಗದ ಎಲ್ಲರೂ ಜವಾಬ್ದಾರಿ ತೆಗೆದುಕೊಂಡು ಶ್ರಮಿಸಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ವಧುಗಳ ಕೊರತೆ ಎದ್ದು ಕಾಣುತ್ತಿದೆ ಮತ್ತು ಜಾಸ್ತಿಯಾಗುತ್ತಿದೆ. ಇದಕ್ಕೆ ಅನೇಕ ಕಾರಣಗಳಿವೆ. ಇದನ್ನು ಅರಿತುಕೊಂಡು ಸರಿಪಡಿಸಲು ಎಲ್ಲರೂ ಸೇರಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅನೇಕ ರೀತಿಯ ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದು ಅವರು ಹೇಳಿದರು.ಹಿಂದಿನಿಂದಲೂ ಮದುವೆ ಮಾಡಲು ಅನೇಕರು ಅನೇಕ ರೀತಿಯಲ್ಲಿ ಸಹಕರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಇದು ಒಂದು ಪುಣ್ಯದ ಕೆಲಸ. ಈ ಕೆಲಸವು ಒಂದು ಸೇವಾ ದೃಷ್ಟಿಯಿಂದ ಮುಂದುವರೆಯಬೇಕೇ ಹೊರತು ವ್ಯಾಪಾರೀಕರಣ ಆಗಬಾರದು. ಹಿಂದಿನಿಂದಲೂ ನಡೆದುಕೊಂಡು ಬಂದ ಮದುವೆಯ ಸಂಪ್ರದಾಯಗಳು ಹಾಗೆಯೇ ಮುಂದುವರೆಯಬೇಕು ಎಂದರು.ತಾಳಿ ಎಂದರೆ ತಾಳ್ಮೆ ಇರಬೇಕು ಎಂದರ್ಥ. ಮಾನಸಿಕವಾಗಿ ಶಾಂತಿ ಸಿಗುವ ಹಾಗೆ ಮದುವೆಯಾಗಬೇಕು. ಗಂಡು- ಹೆಣ್ಣು ಒಬ್ಬರು ಇನ್ನೊಬ್ಬರ ಬಗ್ಗೆ ನೋಡುವ ರೀತಿ ಬದಲಾಗಬೇಕು. ಕುವೆಂಪುರವರು ಹೇಳಿದ ಹಾಗೆ ಗಂಡು- ಹೆಣ್ಣಿನ ಮಧ್ಯ ತಾರತಮ್ಯ ಮನೋಭಾವನೆ ಇರಬಾರದು. ಹೊಂದಾಣಿಕೆ ಮನೋಭಾವನೆ ಇರಬೇಕು. ಬಡತನ, ಹಸಿವು, ಅವಮಾನ ಉತ್ತಮ ಪಾಠ ಕಲಿಸುತ್ತದೆ. ಗಂಡು- ಹೆಣ್ಣು ಪರಸ್ಪರ ಅರ್ಥ ಮಾಡಿಕೊಂಡು ಮದುವೆಯಾಗಬೇಕೇ ಹೊರತು ಆಸ್ತಿ- ಅಂತಸ್ತು ಇತ್ಯಾದಿಗಳನ್ನು ನೋಡಿಕೊಂಡು ಮದುವೆಯಾಗಬಾರದು ಎಂದು ಅವರು ಹೇಳಿದರು.ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷ ಡಾ.ಜಿ.ಆರ್. ಚಂದ್ರಶೇಖರ್ ಮಾತನಾಡಿ, ಮದುವೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮದುವೆ ಒಂದು ಪ್ರಮುಖವಾದ ಘಟ್ಟ. ಮದುವೆಯ ನಂತರ ಪ್ರತಿಯೊಬ್ಬರ ಜೀವನದಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತವೆ. ಆಸ್ತಿ ಅಂತಸ್ತು ನೋಡಿ ಮದುವೆಯಾಗುವ ಬದಲು, ಗುಣ ನೋಡಿ ಮದುವೆಯಾಗಬೇಕು ಎಂದು ತಿಳಿಸಿದರು.ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಮಾತನಾಡಿ, ಯಾವ ರೀತಿ ಹುಟ್ಟು- ಸಾವು ಒಬ್ಬರ ಜೀವನದಲ್ಲಿ ಒಂದೇ ಸಾರಿ ನಡೆಯುತ್ತದೆಯೋ ಅದೇ ರೀತಿ ಮದುವೆಯೂ ಒಬ್ಬರ ಜೀವನದಲ್ಲಿ ಒಂದೇ ಸಲ ನಡೆಯಬೇಕು. ಹೆಣ್ಣು ಗಂಡು ಇಬ್ಬರು ಸಮಾನರೆಂದು ಭಾವಿಸಿ ನಡೆದುಕೊಳ್ಳಬೇಕು ಎಂದರು. ಉಷಾ ಮಂಜುನಾಥ್, ಲತಾ ಸುನೀಲ್ ಪ್ರಾರ್ಥಿಸಿದರು. ಡಿ. ರವಿಕುಮಾರ್ ಸ್ವಾಗತಿಸಿದರು. ಜೆ. ಶೋಭಾ ರಮೇಶ್ ವಂದಿಸಿದರು. ಉಷಾ ಮಂಜುನಾಥ್ ನಿರೂಪಿಸಿದರು.