ಡಾ. ದ್ವಾರಕಾನಾಥ್‌ಗೆ ಎಂಎಲ್‌ಸಿ ಮಾಡಲು ದಿವಾಕರ್‌ ಆಗ್ರಹ

| Published : May 23 2024, 01:07 AM IST

ಸಾರಾಂಶ

ಚಿಕ್ಕಮಗಳೂರು, ಅಲೆಮಾರಿ ಹಾಗೂ ಆದಿವಾಸಿ ಜನರ ಪರ ಕೆಲಸ ಮಾಡಿರುವ ಡಾ. ಸಿ.ಎಸ್. ದ್ವಾರಕಾನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಅಧ್ಯಕ್ಷ ಎಚ್‌.ಎಲ್‌. ದಿವಾಕರ್‌ ಆಗ್ರಹಿಸಿದ್ದಾರೆ.

ಕಳೆದ 3-4 ದಶಕಗಳಿಂದ ಅಲೆಮಾರಿ,ಆದಿವಾಸಿಗಳ ಹಕ್ಕುಗಳಿಗೆ ಹೋರಾಟ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅಲೆಮಾರಿ ಹಾಗೂ ಆದಿವಾಸಿ ಜನರ ಪರ ಕೆಲಸ ಮಾಡಿರುವ ಡಾ. ಸಿ.ಎಸ್. ದ್ವಾರಕಾನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಅಧ್ಯಕ್ಷ ಎಚ್‌.ಎಲ್‌. ದಿವಾಕರ್‌ ಆಗ್ರಹಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಹಾಗೂ ವಿಧಾನ ಪರಿಷತ್ ಅಸ್ಥಿತ್ವಕ್ಕೆ ಬಂದಾಗಿ ನಿಂದಲೂ ಅಲೆಮಾರಿ, ಆದಿವಾಸಿ ಸಮುದಾಯದ ಪ್ರತಿನಿಧಿಗಳಿಗೆ ಎರಡೂ ಸದನಗಳಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ಕಾರಣಕ್ಕೆ ನಮ್ಮ ನೋವು, ಅಸಹಾಯಕತೆ ಮತ್ತು ಸಮಸ್ಯೆಗಳ ಕುರಿತಂತೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಈವರೆಗೂ ಯಾವುದೇ ಚರ್ಚೆಯಾಗಿಲ್ಲ. ಸಮಸ್ಯೆಗಳ ಕುರಿತು ಯಾರಿಗೂ ಅರಿವಿಲ್ಲ, ಆದ್ದರಿಂದ ನಾವು ಇಂದಿಗೂ ನಿರ್ಗತಿಕರಾಗಿಯೇ ಉಳಿದಿದ್ದೇವೆ ಎಂದು ಹೇಳಿದರು.ದ್ವಾರಕಾನಾಥ್ ಅವರು ಕಳೆದ ಮೂರುನಾಲ್ಕು ದಶಕಗಳಿಂದ ಅಲೆಮಾರಿ ಮತ್ತು ಆದಿವಾಸಿ ಸಮಸ್ಯೆಗಳ ಕುರಿತಂತೆ ನ್ಯಾಯಾಲಯ ಮತ್ತು ಸರ್ಕಾರದ ಮಟ್ಟದಲ್ಲಿ ನಮ್ಮ ಹಕ್ಕುಗಳಿಗೆ ಹೋರಾಡುತ್ತಿದ್ದಾರೆ. ನಮ್ಮ ಎಲ್ಲಾ ಸಮುದಾಯಗಳ ಬಗ್ಗೆ ಅವರಿಗೆ ಅಪಾರ ಮಾಹಿತಿ ಇದೆ. ಸುಮಾರು 48 ಸಮುದಾಯಗಳ ಸಂಶೋಧನಾ ಕೃತಿಗಳಿಗೆ ಮಾರ್ಗದರ್ಶಕರಾಗಿ ಸರ್ಕಾರದ ಡಾ. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗ ಗಳ ಆಯೋಗದ ಅಧ್ಯಕ್ಷರಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1ರಲ್ಲಿರುವ 46 ಅಲೆಮಾರಿ ಸಮುದಾಯಗಳಿಗೆ ಅಸ್ಮಿತೆ ನೀಡಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮೊಟ್ಟಮೊದಲ ಸಲ ಅಲೆಮಾರಿ ಪಟ್ಟಿ ಪ್ರಕಟಿಸಲು ಕಾರಣರಾಗಿದ್ದಾರೆ. ಅಲೆಮಾರಿ ಕೋಶ, ಅಲೆಮಾರಿ ಅಭಿವೃದ್ಧಿ ನಿಗಮ ಮತ್ತು ಈಗ ಬಜೆಟ್‌ನಲ್ಲಿ ಪ್ರಕಟವಾದ ಅಲೆಮಾರಿ ಆಯೋಗ ರಚಿಸಲು ಕೂಡ ದ್ವಾರಕಾನಾಥ್ ಅವರೇ ಮೂಲ ಕಾರಣಕರ್ತರಾಗಿದ್ದಾರೆ. ನಾಡಿನಾದ್ಯಂತ ಮೂಲೆ ಮೂಲೆಗಳಿಂದ ದಿಕ್ಕಿಲ್ಲದೆ ಬರುವ ಅಲೆಮಾರಿಗಳ ಜಾತಿ ಸರ್ಟಿಫಿ ಕೇಟ್, ನಿವೇಶನ, ಭೂಮಿ, ಅನುದಾನ, ಸವಲತ್ತು ಕೊಡಿಸಲು ತಮ್ಮ ವಕೀಲಿ ಕಚೇರಿಯನ್ನು ಮೀಸಲಾಗಿ ಇಟ್ಟಿದ್ದಾರೆ ಎಂದರು.

ದ್ವಾರಕಾನಾಥ್ ಅವರನ್ನು ನಮ್ಮೆಲ್ಲರ ಪ್ರತಿನಿಧಿಯಾಗಿ ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕೆಂದು ಅಖಿಲ ಭಾರತ ಕಾಂಗ್ರೆಸ್ ಅಧಿನಾಯಕ ಮಲ್ಲಿಕಾರ್ಜುನ್ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡುತ್ತೇವೆ ಎಂದರು.ಪೋಟೋ ಫೈಲ್‌ ನೇಮ್‌ 22 ಕೆಸಿಕೆಎಂ 6