ಮೇವಿನ ಕಿಟ್‌ ಗಳನ್ನು ವಿತರಿಸಲು ಪಶುಸಂಗೋಪನಾ ಇಲಾಖೆಗೆ 25 ಕೋಟಿ ಬಿಡುಗಡೆ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನಲ್ಲಿ ಶೇ.55 ರಷ್ಟು ಮಳೆ ಕೊರತೆ ಆಗಿದ್ದು, 8 ತಾಲೂಕುಗಳು ತೀವ್ರ ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ತಿಳಿಸಿದರು.

ಜಿಲ್ಲೆಯ ವಿವಿಧ ತಾಲೂಕುಗಳಿಗೆ ಮಂಗಳವಾರ ಭೇಟಿ ನೀಡಿ ಬರ ಪರಿಶೀಲನೆ ನಡೆಸಿದ ಬಳಿಕ ಜಿಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಸ್ಪಷ್ಟ ಸೂಚನೆಗಳನ್ನು ನೀಡಿದರು.

ಮೇವಿನ ಕಿಟ್‌ ಗಳನ್ನು ವಿತರಿಸಲು ಪಶುಸಂಗೋಪನಾ ಇಲಾಖೆಗೆ 25 ಕೋಟಿ ಬಿಡುಗಡೆ ಮಾಡಲಾಗಿದೆ. ಉದ್ಯೋಗ ಸೃಷ್ಟಿಯಲ್ಲಿ ಬೇಜವಾಬ್ದಾರಿತನ ತೋರಿದರೆ ಸಹಿಸುವುದಿಲ್ಲ. ರೈತರಿಗೆ ಬೆಳೆ ವಿಮೆ ನೋಂದಣಿಗೆ ಪ್ರೋತ್ಸಾಹಿಸಬೇಕು. ಜಿಲ್ಲಾಧಿಕಾರಿಗಳು ಪಿಡಿ ಖಾತೆಯಲ್ಲಿರುವ ಹಣವನ್ನು ಕುಡಿಯುವ ನೀರು ಸೇರಿದಂತೆ ತುರ್ತು ಕಾರ್ಯಗಳಿಗೆ ಬಳಸುವಂತೆ ಅವರು ಸೂಚಿಸಿದರು.

ಸರ್ಕಾರ ಬರ ನಿರ್ವಹಣೆಯ ಕುರಿತು ಬಹಳ ಗಂಭೀರವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬರವನ್ನು ಹಗುರ ಮನಸ್ಥಿತಿಯಾಗಿ ಪರಿಗಣಿಸಬಾರದು. ಜನರ ಮೂಲಭೂತ ಅವಶ್ಯಕತೆಗಳಾದ ಕುಡಿಯುವ ನೀರು, ಆಹಾರ, ಜೀವನೋಪಾಯಕ್ಕೆ ಅಗತ್ಯವಿರುವ ಉದ್ಯೋಗ, ಆರೋಗ್ಯ ಜಾನುವಾರುಗಳಿಗೆ ಮೇವು, ನೀರು ಮುಂತಾದವುಗಳನ್ನು ನೋಡಿಕೊಳ್ಳುವುದಾಗಿದೆ. ಇದನ್ನು ಕಂದಾಯ ಇಲಾಖೆಯು ಇತರೆ ಸಂಬಂಧಿತ ಇಲಾಖೆಗಳ ಜೊತೆ ಸೇರಿ ಜನ-ಜಾನುವಾರುಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪರಿಸ್ಥಿತಿ ನಿಭಾಯಿಸಬೇಕಾಗಿದೆ ಎಂದರು.

ಜೂನ್‌ ನಿಂದ ಆಗಸ್ಟ್ ಅಂತ್ಯದವರೆಗೆ ಮೈಸೂರಿನಲ್ಲಿ ವಾಡಿಕೆ ಮಳೆ 310 ಮಿ.ಮೀ ಆಗಬೇಕಿತ್ತು, ಆದರೆ ಕೇವಲ 140 ಮಿ.ಮೀ ಮಳೆಯಾಗಿದೆ. ಅಂದರೆ, ಶೇ. 55 ರಷ್ಟು ತೀವ್ರ ಮಳೆ ಕೊರತೆ ಉಂಟಾಗಿದ್ದು, ಜಿಲ್ಲೆಯು ಕೊರತೆ ಪಟ್ಟಿಯಲ್ಲಿದೆ. ಮೈಸೂರು ಜಿಲ್ಲೆಯ 8 ತಾಲೂಕುಗಳನ್ನು (ಎಚ್.ಡಿ. ಕೋಟೆ, ಹುಣಸೂರು, ಕೆ.ಆರ್. ನಗರ, ಮೈಸೂರು, ನಂಜನಗೂಡು, ಸಾಲಿಗ್ರಾಮ, ಸರಗೂರು, ಟಿ. ನರಸೀಪುರ) ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.

ಮೈಸೂರಿನಲ್ಲಿ ಜುಲೈ-2026 ರಿಂದ ಈಚೆಗೆ ಕೇವಲ 1.91 ಲಕ್ಷ ಮಾನವ ದಿನಗಳಷ್ಟು ಮಾತ್ರ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಆದರೆ, ಕಳೆದ ವರ್ಷ ಇದೇ 2 ತಿಂಗಳುಗಳಲ್ಲಿ 4.33 ಲಕ್ಷ ಉದ್ಯೋಗಗಳನ್ನು ಸೃಜಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.55 ರಷ್ಟು ಕಡಿಮೆಯಾಗಿದೆ. ಉತ್ತಮ ಮಳೆ ಬಂದ ವರ್ಷ 4.33 ಲಕ್ಷ ಉದ್ಯೋಗ ಸೃಷ್ಟಿಯಾದರೆ ಈ ವರ್ಷ ಯಾಕೆ ಇಷ್ಟು ಕಡಿಮೆಯಾಗಿದೆ. ಜನರು ಉದ್ಯೋಗ ಕೇಳುತ್ತಿಲ್ಲವೇ? ಜಿಪಂ ಸಿಇಒ ಮತ್ತು ಅವರ ಅಧೀನ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಕೃಷಿ ಬೆಳೆ ವಿಮೆಯೂ ಕಡಿಮೆಯಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಯಾಕಿಷ್ಟು ನಿರ್ಲಕ್ಷ್ಯ ಮಾಡುತ್ತಿದ್ದಾರೆ? ರೈತರಿಗೆ ಉತ್ತೇಜನ ನೀಡುವ ಕೆಲಸಗಳನ್ನು ಯಾಕೆ ಮಾಡಲಿಲ್ಲ? ಬೇಜವಾಬ್ದಾರಿತನ ತೋರಿದರೆ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.

ಜಿಲ್ಲೆಯಲ್ಲಿ ಒಟ್ಟಾರೆ 33 ವಾರಗಳಿಗೆ ಆಗುವಷ್ಟು 7,04,890 ಟನ್ ಮೇವು ಲಭ್ಯವಿದೆ. ಮೈಸೂರು (25 ವಾರ), ಹುಣಸೂರು (25 ವಾರ) ಹಾಗೂ ಪಿರಿಯಾಪಟ್ಟಣ (26 ವಾರ) ತಾಲೂಕುಗಳಲ್ಲಿ ಲಭ್ಯತೆ ಕಡಿಮೆಯಿದೆ. ಮೇವಿನ ಕಿಟ್‌ ಗಳನ್ನು ವಿತರಿಸಲು ಪಶುಸಂಗೋಪನಾ ಇಲಾಖೆಗೆ ಸರ್ಕಾರ ಈಗಾಗಲೇ 25 ಕೋಟಿಗಳನ್ನು ಬಿಡುಗಡೆ ಮಾಡಿದೆ ಎಂದರು.

ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಸಾಕಷ್ಟು ಹಣವಿದೆ. ಈ ಅನುದಾನವನ್ನು ಸರ್ಕಾರದ ಮಾರ್ಗಸೂಚಿಯಂತೆ ಕುಡಿಯುವ ನೀರು ಮತ್ತು ಇತರೆ ತುರ್ತು ಪರಿಹಾರ ಕಾರ್ಯಗಳಿಗೆ ತಕ್ಷಣವೇ ಬಳಸಿ. ಅನುದಾನಕ್ಕಾಗಿ ಕಾಯುವ ನೆಪವೊಡ್ಡಿ ಪರಿಹಾರ ಕಾರ್ಯ ವಿಳಂಬ ಮಾಡಬೇಡಿ ಎಂದು ಅವರು ಸೂಚಿಸಿದರು.

ಕುಡಿಯುವ ನೀರಿಗೆ ಆದ್ಯತೆ

ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಜಾನುವಾರುಗಳಿಗೆ ಅಗತ್ಯವಿರುವ ಲಸಿಕೆಗಳನ್ನು ಕಾಲಕಾಲಕ್ಕೆ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಜಲಾಶಯಗಳಲ್ಲಿನ ನೀರನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು. ಯಾವುದೇ ಗ್ರಾಮ- ನಗರ ಪ್ರದೇಶಗಳಲ್ಲಿ ಯಾರೊಬ್ಬರಿಗೂ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ನೀರಿನ ಕೊರತೆ ಹೆಚ್ಚಾಗುವ ಸಂದರ್ಭಗಳಲ್ಲಿ ಜನರು ನೀರನ್ನು ಶೇಖರಿಸಿಟ್ಟುಕೊಳ್ಳುತ್ತಾರೆ. ಇದರಿಂದ ಡೆಂಘೀ, ಚಿಕೂನ್‌ ಗುನ್ಯಾ ರೀತಿಯ ಸಾಂಕ್ರಾಮಿಕಗಳು ಹರಡಬಹುದು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಜನರಿಗೆ ಸೂಕ್ತ ತಿಳುವಳಿಕೆ ನೀಡಬೇಕು. ನಿಯಮಿತವಾಗಿ ಟಾಸ್ಕ್‌ ಫೋರ್ಸ್‌, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಬೇಕು ಎಂದರು.

ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಕೆ. ವೆಂಕಟೇಶ್, ದರ್ಶನ್ ಧ್ರುವನಾರಾಯಣ್, ಜಿ.ಡಿ. ಹರೀಶ್‌ ಗೌಡ, ಡಾ.ಡಿ. ತಿಮ್ಮಯ್ಯ, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮೊದಲಾದವರು ಇದ್ದರು.

----

ಕೋಟ್...

ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು, ಮೇವು, ಅಗತ್ಯ ಲಸಿಕೆ ಇತ್ಯಾದಿಗಳ ಕುರಿತು ಗಮನ ಹರಿಸಿ. ರೈತರಿಗೆ ಬೇಕಿರುವ ಬಿತ್ತನೆ ಬೀಜ, ಗೊಬ್ಬರಗಳ ದಾಸ್ತಾನನ್ನು ಸಮರ್ಪಕವಾಗಿಟ್ಟುಕೊಳ್ಳಿ. ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ.

- ಡಾ.ಜಿ. ಪರಮೇಶ್ವರ, ಉಪ ಮುಖ್ಯಮಂತ್ರಿ

----

ಬರ‌ ಪರಿಸ್ಥಿತಿ ತುರ್ತು ಕಾಮಗಾರಿ ಕೈಗೊಳ್ಳಲು ನೀಡಲಾಗಿರುವ ಅನುದಾನದಲ್ಲಿ ಬೋರ್ ವೆಲ್ ಕೊರೆಸಿ, ನೀರು ಸಿಗದಿದ್ದಲ್ಲಿ ಅಂತಹ ಸ್ಥಳಗಳಲ್ಲಿ ನೀರನ್ನು ಖಾಸಗಿ ಬೋರ್ ವೆಲ್ ಅಥವಾ ಟ್ಯಾಂಕರ್ ಮೂಲಕ ಜನರಿಗೆ ಒದಗಿಸಿ ನೀರಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ.

- ಡಾ. ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರು