ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಶರಣರ ವಚನಗಳನ್ನು ಸಂಗ್ರಹಿಸಿ, ತಮ್ಮ ಜೀವನವನ್ನೇ ಬಸವಾದಿ ಶರಣರ ವಚನಗಳನ್ನು ಪ್ರಚಾರ ಮಾಡಲು ಮುಡಿಪಾಗಿಟ್ಟು, ವಚನಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಿದ ವಚನ ಸಂಶೋಧನಾ ಪಿತಾಮಹಾ ಡಾ.ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ನೀಡಿದ ಕೊಡುಗೆ ಅಪಾರ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಹೇಳಿದರು.ಅವರು ಮಂಗಳವಾರ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನ - ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಡಾ.ಫ.ಗು.ಹಳಕಟ್ಟಿ ಪತ್ರಿಕೋದ್ಯಮ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಯುವಜನತೆ ವಚನಗಳನ್ನು ಓದಿ, ಅವುಗಳಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಡಾ.ಫ.ಗು.ಹಳಕಟ್ಟಿಯವರ ಕುರಿತು ಉಪನ್ಯಾಸ ನೀಡಿ, ವಚನ ಸಾಹಿತ್ಯ ಸಂಗ್ರಹ ಮತ್ತು ವಚನಗಳ ಕೊಡುಗೆಯ ಮೂಲಕ ವ್ಯಕ್ತಿತ್ವ ವಿಕಸನ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದ ಡಾ.ಫ.ಗು.ಹಳಕಟ್ಟಿ ಅವರು ಹಳ್ಳಿ ಹಳ್ಳಿಗಳನ್ನು ಸುತ್ತಿ ಓಲೆಗರಿಗಳಲ್ಲಿ ಬರೆದ ವಚನ ಸಾಹಿತ್ಯವನ್ನು ಸಂಗ್ರಹಿಸಿ ತಮ್ಮ ಸ್ವಂತ ಹಣದಿಂದ ಮುದ್ರಣ ಮಾಡುವುದರೊಂದಿಗೆ ಸಾರ್ವಜನಿಕರಿಗೆ ದೊರಕುವಂತೆ ಮಾಡಿದರು.
ಜೀವನದ ಕೊನೆಯವರೆಗೂ ಬಡತನ, ಅನಾರೋಗ್ಯದಲ್ಲಿಯೇ, ಅತ್ಯಂತ ಸರಳ ಜೀವನ ಜೀವಿಸಿದ ಹಳಕಟ್ಟಿಯವರು ವಚನ ಸಾಹಿತ್ಯವನ್ನು ಸಂಗ್ರಹಿಸಿ, ವಿಶ್ಲೇಷಿಸಿ, ವರ್ಗಿಕರಿಸದೇ ಇದ್ದಲ್ಲಿ ಅಜ್ಞಾತವಾಗಿ ಉಳಿದಿದ್ದ ಕನ್ನಡದ ಅಮೂಲ್ಯ ವಚನ ಗ್ರಂಥ ಭಂಡಾರ ಇಂದು ವಿಶ್ವಕ್ಕೆ ಪರಿಚಯವಾಗುತ್ತಿರಲಿಲ್ಲ ಎಂದರು.ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ. ನಿರಂಜನ್, ಜನಪದ ವಿದ್ಯಾಂಸ ಪ್ರೊ. ಕೃಷ್ಣಯ್ಯ, ಕನ್ನಡ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಪ್ರಭಾಕರ ಪೂಜಾರಿ, ಕಾರ್ಮಿಕ ಅಧಿಕಾರಿ ಕುಮಾರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ನಿರಂಜನ, ಕ.ಸಾ.ಪ ಕಾರ್ಯದರ್ಶಿ ನರಸಿಂಹಮೂರ್ತಿ, ಜಿಲ್ಲಾಡಳಿತದ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿದರು. ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ವಂದಿಸಿದರು.