ಹಂಸಲೇಖರಿಗೆ ಪಿಎಚ್‌ಡಿಯಲ್ಲಿ ಗೈಡ್ ಆಗಿದ್ದ ಡಾ.ಹನುಮಣ್ಣ ನಾಯಕ ದೊರೆ ನಿಧನ

| Published : Nov 11 2023, 01:15 AM IST

ಸಾರಾಂಶ

ಹಂಸಲೇಖರಿಗೆ ಪಿಎಚ್‌ಡಿಯಲ್ಲಿ ಗೈಡ್ ಆಗಿದ್ದ ಡಾ.ಹನುಮಣ್ಣ ನಾಯಕ ದೊರೆ ನಿಧನ

ಕನ್ನಡಪ್ರಭ ವಾರ್ತೆ ದೇವದುರ್ಗ ಹಿಂದೂಸ್ತಾನಿ ಸಂಗೀತ ವಿದ್ವಾಂಸ ಹಾಗೂ ಸಂಗೀತ ದಿಗ್ಗಜ ಡಾ.ಹನುಮಣ್ಣ ನಾಯಕ್ ದೊರೆ (69) ತೆಗ್ಗಿಹಾಳ ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಡಾ.ಹನುಮಣ್ಣ ನಾಯಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಇಬ್ಬರು ಪತ್ನಿಯರು, ನಾಲ್ಕು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಸ್ವಗ್ರಾಮ ತೆಗ್ಗಿಹಾಳದಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ತಾಲೂಕಿನ ತೆಗ್ಗಿಹಾಳ ಗ್ರಾಮದ ಡಾ.ಹನುಮಣ್ಣ ನಾಯಕ ದೊರೆ ಹಂಪಿ ಕನ್ನಡ ವಿವಿಯ ಸಂಗೀತ ವಿಭಾಗದ ಮುಖ್ಯಸ್ಥರಾಗಿ, ಪ್ರೊಫೆಸರ್ ಆಗಿ ಅನೇಕ ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದ ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯಕ್ಕೆ ಪ್ರಥಮ ಕುಲಪತಿಗಳಾಗಿದ್ದರು. ಇವರಿಗೆ ಖ್ಯಾತ ಸಂಗೀತ ವಿದ್ವಾಂಸರಾದ ಪಂಡಿತ ಬಸವರಾಜ ರಾಜಗುರು ಅವರು ಸಂಗೀತದ ಗುರುಗಳಾಗಿದ್ದರು. ಡಾ.ಹನುಮಣ್ಣ ನಾಯಕ ಹಂಸಲೇಖ ಅವರಿಗೆ ಸಂಗೀತ ಕ್ಷೇತ್ರದ ಪಿಎಚ್‌ಡಿ ವಿಷಯದಲ್ಲಿ ಗೈಡ್ ಆಗಿದ್ದರು. ನಿವೃತ್ತಿ ನಂತರ ಕೆಲ ಕಾಲ ಕಲಬುರಗಿಯ ಡಾ.ಶರಣಬಸಪ್ಪ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿರುವ ಇವರು ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಸಹ ಇವರು ಬರೆದಿದ್ದಾರೆ. ದೇಶ ವಿದೇಶಗಳಲ್ಲಿ ತಮ್ಮ ಸಂಗೀತ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಜರ್ಮನ್ ದೇಶದಲ್ಲಿ ನಡೆದ ಸಂಗೀತಮೇಳದಲ್ಲಿ ಭಾಗವಹಿಸಿದ್ದ ಇವರಿಗೆ ಕರ್ನಾಟಕ ರಾಜ್ಯೋತ್ಸವ ಸೇರಿ ಹತ್ತು ಹಲವು ಪ್ರಶಸ್ತಿ ಜೊತೆಗೆ ಗೌರವ ಸನ್ಮಾನಗಳು ಲಭಿಸಿವೆ.