ಸಾರಾಂಶ
ಗದಗ: ಗದುಗಿನ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಎತ್ತರಿಸಿದ ಕನ್ನಡದ ಕುಲಗುರು, ಭಾವೈಕ್ಯತೆಯ ಹರಿಕಾರರಾಗಿದ್ದ ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳ ಕಂಚಿನ ಪುತ್ಥಳಿಯನ್ನು ಗದುಗಿನ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಬೇಕು.ಅದಕ್ಕಾಗಿ ನಮ್ಮ ಜ.ತೋಂಟದಾರ್ಯ ನೌಕರರ ಪತ್ತಿನ ಸಹಕಾರಿ ಸಂಘದಿಂದ ಮೊದಲನೇ ಕಂತಾಗಿ ₹20 ಲಕ್ಷ ದೇಣಿಗೆ ನೀಡುವುದಾಗಿ ಸಂಘದ ಅಧ್ಯಕ್ಷ ಪ್ರೊ. ಎಸ್.ಎಸ್.ಪಟ್ಟಣಶೆಟ್ಟಿ ಹೇಳಿದರು.
ಅವರು ಇತ್ತೀಚೆಗೆ ನಗರದ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಜರುಗಿದ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.ಈಗಾಗಲೇ ಸಹಕಾರಿ ಸಂಘವು ಶ್ರೀಮಠದ ದಾಸೋಹಕ್ಕಾಗಿ ₹1 ಕೋಟಿ ಸ್ಥಿರ ನಿಧಿ ಇಡಲಾಗಿದೆ.ಅದರಂತೆ ಪೂಜ್ಯರು ಲಿಂಗೈಕ್ಯರಾದ ನಂತರ ಅವರ ಸ್ಮರಣಾರ್ಥ ಪ್ರಾರಂಭಗೊಂಡ ಡಾ.ತೋಂಟದ ಸಿದ್ಧಲಿಂಗ ಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸಮಿತಿ ಸ್ಥಾಪಿಸಲಾಗಿದ್ದು ಈಗ ಅದಕ್ಕೆ ಶ್ರೀಗಳ ಕೆಲವು ಅಭಿಮಾನಿ ಶಿಷ್ಯರಿಂದ ಮತ್ತು ಸಂಘದ ಸದಸ್ಯರ ಡೆವಿಡೆಂಡ್ ಆದಾಯದಲ್ಲಿ ₹1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹವಾಗಿದೆ.ಆ ದೇಣಿಗೆ ಠೇವಣಿಯನ್ನಾಗಿರಿಸಿದ್ದು ಅದರ ಆದಾಯದಲ್ಲಿ ಪ್ರತಿ ವರ್ಷ ₹5 ಲಕ್ಷ ಮೊತ್ತದ ಡಾ.ತೋಂಟದ ಸಿದ್ಧಲಿಂಗ ಸ್ವಾಮಿಗಳ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿಯನ್ನು ಪೂಜ್ಯರ ಹೆಸರಿನಲ್ಲಿ ಕೊಡಲಾಗುತ್ತಿದೆ ಎಂದು ವಿವರಿಸಿದರು.
ರಮೇಶ ಕೊರ್ಲಹಳ್ಳಿ, ಎಸ್.ಎಚ್. ಪಾಟೀಲ ಮುಂತಾದವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ವೇಳೆ ಸಂಘದ ಪದಾಧಿಕಾರಿಗಳಾದ ಜಿ.ಎಂ. ಕೋಟ್ಯಾಳ, ಪಿ.ಎ. ಹೇಮಗಿರಿಮಠ, ವಿಜಯಕುಮಾರ ಮಾಲಗಿತ್ತಿ, ಕೊಟ್ರೇಶ ಮೆಣಸಿನಕಾಯಿ, ಜೇವರ್ಗಿಯ ವಿಶ್ವಾಸ ಶಿಂಧೆ, ಉಪ್ಪಿನ, ಲೆಕ್ಕ ಪರಿಶೋಧಕ ಮುಂದಿನಮನಿ, ಐ.ಬಿ. ಬೆನಕೊಪ್ಪ, ದೊಡ್ಡಬಸಪ್ಪ ಚಿತ್ರಗಾರ ಮುಂತಾದವರು ಇದ್ದರು. ಕೆ.ಎಂ. ಗೌಡರ ನಿರೂಪಿಸಿದರು.