ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ಡಾ. ಜೆ.ಆರ್.ಷಣ್ಮುಖಪ್ಪ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

- ಬರ ಹಿನ್ನೆಲೆ ರೈತರಿಗೆ ಸಾಲ, ಸೌಲಭ್ಯ ನೀಡಲು ಹೆಚ್ಚು ಆದ್ಯತೆ: ಭರವಸೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ಡಾ. ಜೆ.ಆರ್.ಷಣ್ಮುಖಪ್ಪ ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲ‌ 16 ನಿರ್ದೇಶಕರು ಡಾ. ಜೆ.ಆರ್.ಷಣ್ಮುಖಪ್ಪ ಅವರ ಆಯ್ಮೆಗೆ ಸಮ್ಮತಿ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ ನಾಮ‌ಪತ್ರ ಊರ್ಜಿತಗೊಂಡು ಅವಿರೋಧವಾಗಿ ಆಯ್ಕೆಯಾದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬ್ಯಾಂಕ್‌ನಿಂದ ರೈತರಿಗೆ ಅಗತ್ಯ ಸಾಲ, ಸೌಲಭ್ಯ ನೀಡಿಕೆ ಬಗ್ಗೆ ಹೆಚ್ಚು ಗಮನ ಹರಿಸಲಾಗುವುದು. ರೈತರು, ಸಣ್ಣ ಉದ್ಯಮಿಗಳು ಹಾಗೂ ಸಹಕಾರ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

ಬ್ಯಾಂಕಿಗೆ ಸ್ವಂತ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಈ ಹಿಂದೆ ಹೆದ್ದಾರಿ ಬದಿ ಅರ್ಧ ಎಕರೆ ಜಾಗ ಮಂಜೂರಾಗಿದ್ದರೂ, ಕೆಲವು ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಸದ್ಯ ಎಪಿಎಂಸಿ ಆವರಣದಲ್ಲಿ ಅರ್ಧ ಎಕರೆ ನಿವೇಶನ ಲಭ್ಯವಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಿ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

ಈ‌ ಹಿಂದೆ 2018ರಲ್ಲಿ ಅಧ್ಯಕ್ಷರಿದ್ದ ಸಂದರ್ಭದಲ್ಲಿ ಆರಂಭಿಸಲಾದ ''''ಕಟ್ಟಡ ನಿಧಿ''''ಯಲ್ಲಿ ಪ್ರಸ್ತುತ ಸುಮಾರು ₹9 ಕೋಟಿಗೂ ಅಧಿಕ ಮೊತ್ತ ಸಂಗ್ರಹಗೊಂಡಿದೆ. ಹೀಗಾಗಿ, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಯಾವುದೇ ರೀತಿಯ ಹಣಕಾಸಿನ ಮುಗ್ಗಟ್ಟು ಇಲ್ಲ ಎಂದು ಸ್ಪಷ್ಟಪಡಿಸಿದರು.

ಮುಂದಿನ ದಿನಗಳಲ್ಲಿ ಬ್ಯಾಂಕಿನ ವಿವಿಧ ಶಾಖೆಗಳಿಗೂ ಸ್ವಂತ ಕಟ್ಟಡಗಳನ್ನು ನಿರ್ಮಿಸುವುದು, ಹೊಸ ಶಾಖೆಗಳನ್ನು ತೆರೆಯುವುದು ಮತ್ತು ಗ್ರಾಹಕರಿಗೆ ಅತ್ಯುತ್ತಮ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ವಿಶೇಷವಾಗಿ ರೈತರಿಗೆ ಮತ್ತು ಗ್ರಾಮೀಣ ಭಾಗದ ಜನರಿಗೆ ಅನುಕೂಲ ಆಗುವ ರೀತಿಯಲ್ಲಿ ಪಾರದರ್ಶಕ ಆಡಳಿತ ನಡೆಸಿ, ಬ್ಯಾಂಕಿನ ಬೆಳವಣಿಗೆಗೆ ಶ್ರಮಿಸುವುದಾಗಿ ಡಾ. ಜೆ.ಆರ್. ಷಣ್ಮುಖಪ್ಪ ತಿಳಿಸಿದರು.

ಈ ವೇಳೆ ಉಪಾಧ್ಯಕ್ಷ ಕುಮಾರ್, ನಿರ್ದೇಶಕರಾದ ಕೋಗುಂಡಿ ಮಲ್ಲೇಶಪ್ಪ, ಬಿ.ಎಸ್. ವೇಣುಗೋಪಾಲ ರೆಡ್ಡಿ, ಬಿ.ಶೇಖರಪ್ಪ, ಜಿ.ಎನ್. ಸ್ವಾಮಿ, ಡಿ.ಎಸ್.ಸುರೇಂದ್ರ, ವಿಶ್ವನಾಥ್ ಡಿ.ಜಿ., ಸಂತೋಷ್ ಜಿ.ಎಸ್., ಎಚ್.ಕೆ. ಬಸಪ್ಪ, ಸುರೇಶ್. ಕೆ.ಜಿ., ವೈ.ರಂಗಪ್ಪ, ಎಚ್.ಬಿ. ಭೂಮೇಶ್ವರಪ್ಪ, ಪ್ರಭಾಕರ್, ಸಿಇಒ ಕಿಶೋರ್ ಕುಮಾರ್ ಜೋಷಿ ಇತರರು ಇದ್ದರು.

- - -

-4ಕೆಡಿವಿಜಿ31: ದಾವಣಗೆರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಡಾ. ಜೆ.ಆರ್.ಷಣ್ಮುಖಪ್ಪ ಆಯ್ಕೆಯಾಗಿದ್ದು, ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧಿಕಾರಿಗಳು ಅಭಿನಂದಿಸಿದರು.