ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್‌ಡಿ ಪಾಟೀಲ್, ಅವರ ಸಹೋದರ ಮಹಾಂತೇಶ ಪಾಟೀಲ್ ಮನೆಗೆ ಉಮೇಶ್ ಜಾಧವ ಭೇಟಿ ನೀಡಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಜಾಧವ್, ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಸಾವಿರಾರು ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಪಿಎಸ್ಐ ಪರೀಕ್ಷೆ ಅಕ್ರಮ ಹಗರಣದ ಆರೋಪಿ ಮನೆಗೆ ಹೋಗಿ ಬೆಂಬಲ ಕೋರಿರೋದು ಅದೆಷ್ಟು ಸರಿ? ಇದೇ ಹಗರಣದಲ್ಲಿದ್ದ ಮತ್ತೋರ್ವ ಆರೋಪಿಯನ್ನ ರಾಮನವಮಿ ಉತ್ಸವದಲ್ಲಿ ಭೇಟಿ ಮಾಡಿ ವೇದಿಕೆ ಹಂಚಿಕೊಂಡಿದ್ದಾರೆ, ಈ ಬಗ್ಗೆ ಜಾಧವ ಸ್ಪಷ್ಟನೆ ನೀಡಲಿ. ಅಥವಾ ವಿರೋಧ ಪಕ್ಷದ ನಾಯಕ ಆರ್ ಅಶೋಕ ಈ ಬಗ್ಗೆ ರಾಜ್ಯದ ಜನರಿಗೆ ವಿವರಣೆ ನೀಡಲಿ ಎಂದು ಖರ್ಗೆ ಒತ್ತಾಯಿಸಿದರು.ಕಲಬುರಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 58,000 ಅಭ್ಯರ್ಥಿಗಳು ಪಿಎಸ್ ಐ ಪರೀಕ್ಷೆ ಬರೆದಿದ್ದರು. ಅಕ್ರಮ ಹಗರಣದ ಬಯಲಿಗೆ ಬಂದ ನಂತರ ಒಟ್ಟು 114 ಜನರನ್ನು ಬಂಧಿಸಲಾಗಿದೆ. 54 ಅಭ್ಯರ್ಥಿಗಳು ಅದಾಗಲೇ ಆಯ್ಕೆಯಾಗಿದ್ದರು ಅವರನ್ನು ಖಾಯಂ ಸಸ್ಪೆಂಡ್ ಮಾಡಲಾಗಿದೆ. ಅವರಲ್ಲಿ 24 ಅಭ್ಯರ್ಥಿಗಳು ಕಲಬುರಗಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದರು. ಹಗಲು ರಾತ್ರಿ ಕಷ್ಟಪಟ್ಟು ಭವಿಷ್ಯದ ಕನಸು ಕಟ್ಟಿಕೊಂಡು ಪರೀಕ್ಷೆ ಬರೆದ ನೈಜ ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಿದವರನ್ನು ಮನೆಗೆ ಹೋಗಿ ಭೇಟಿ ಮಾಡುತ್ತ ಚೆಲ್ಲುಚೆಲ್ಲಾಗಿ ವರ್ತಿಸೋದು ಸರಿಯೆ ಎಂದರು.
ಮತ ಕೇಳಲು ಹೋದರೋ? ಮೊದಲೇ ಸಂಪರ್ಕವಿತ್ತೋ:‘ಚಿಂಚೋಳಿ ಸಂಸದರು ಹೇಗಾದರೂ ಮಾಡಿ ಮತ ಪಡೆಯಲೇಬೇಕು ಎಂದುಕೊಂಡು ಬೆಂಬಲ ಕೇಳಲು ಹೋಗಿದ್ದರೋ ಅಥವಾ ಮೊದಲಿನಿಂದಲೂ ಅವರೊಂದಿಗೆ ಜುಗಲ್ ಬಂಧಿ ಇತ್ತೋ ಗೊತ್ತಿಲ್ಲ. ಅಕ್ರಮದ ಆರೋಪಿ ಆರ್‌ಡಿ ಪಾಟೀಲ್ ಈಗ ಜೈಲಿನಲ್ಲಿದ್ದಾನೆ. ಇವರು ಅಲ್ಲಿಗೆ ಹೋಗಿರುವುದು ನೋಡಿದರೆ ಬಿಜೆಪಿ ಭ್ರಷ್ಟರೊಂದಿಗೆ ಕೈ ಜೋಡಿಸಿದೆ ಎನ್ನುವ ಅನುಮಾನ ಮೂಡುತ್ತದೆ’ ಎಂದು ಖರ್ಗೆ ಆರೋಪಿಸಿದರು.
ಬಿಜೆಪಿ ಸರ್ಕಾರ ಅವಧಿಯಲ್ಲಿ ಪರೀಕ್ಷೆಗಳಲ್ಲಿ ಅಕ್ರಮ ಸರ್ವೇ ಸಾಮಾನ್ಯವಾಗಿದ್ದವು. ಎಇ, ಜೆಇ, ಕೆಪಿಟಿಸಿಎಲ್ ಸೇರಿದಂತೆ ಪಿಎಸ್‌ಐ ಪರೀಕ್ಷೆಗಳಲ್ಲಿ ಅಕ್ರಮ ನಡೆದಿವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಕ್ರಮ ತಡೆಗೆ ಬಿಲ್ ತಂದಿದ್ದೇವೆ. ಅಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಅತ್ಯಂತ ಅಸಮರ್ಥ ಸಚಿವರಾಗಿದ್ದರು. ಆಗ ಅವರೇ ಆರೋಪಿಯೊಬ್ಬರ ಮನೆಗೆ ಹೋಗಿ ಗೋಡಂಬಿ ದ್ರಾಕ್ಷಿ ತಿಂದು ಬಂದಿದ್ದರು. ಈಗ ಜಾಧವ ಊಟ ಮಾಡಿ ಬಂದಿದ್ದಾರೆ ಅಷ್ಟೇ, ಎಂದು ಟೀಕಿಸಿದರು.ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕಾಯಿದೆ ತರುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ಮತ್ತೊಂದು ಕಡೆ ಮೋದಿ ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮದ ಮಾತುಗಳನ್ನಾಡುತ್ತಿದ್ದಾರೆ. ಇಲ್ಲಿ ನೋಡಿದರೆ ಅಭ್ಯರ್ಥಿ ಭ್ರಷ್ಟಚಾರಿಗಳ ಮನೆಗೆ ಹೋಗಿ ಬರುತ್ತಾರೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಈ ವಿಷಯದ ಕುರಿತಂತೆ ಜನರಿಗೆ ಉತ್ತರ ನೀಡಲಿ ಎಂದು ಖರ್ಗೆ ಆಗ್ರಹಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ, ಪ್ರವೀಣ ಹರವಾಳ, ಡಾ ಕಿರಣ ದೇಶಮುಖ, ಫಾರೂಖ್ ಸೇಟ್ , ಪರಶುರಾಮ ನಾಟೀಕಾರ್ ಇದ್ದರು.