ಕೆರೆಗಳಿಗೆ ನೀರು ಹರಿಸುವಲ್ಲಿ ಮುಂಜಾಗ್ರತೆವಹಿಸಲು ಡಾ.ಕೆ.ಜೆ.ಕಾಂತರಾಜ್ ಸೂಚನೆ

| Published : Aug 03 2024, 12:31 AM IST

ಕೆರೆಗಳಿಗೆ ನೀರು ಹರಿಸುವಲ್ಲಿ ಮುಂಜಾಗ್ರತೆವಹಿಸಲು ಡಾ.ಕೆ.ಜೆ.ಕಾಂತರಾಜ್ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಿಂದ ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳ ಸುಮಾರು 79 ಕೆರೆಗಳಿಗೆ ನೀರು ಹರಿಸಲಾಗುತ್ತಿರುವ ಹಿನ್ನಲೆಯಲ್ಲಿ ಯಾವುದೇ ಸಮಸ್ಯೆ ಬಾರದ ರೀತಿ ಎರಡೂ ತಾಲೂಕುಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮತ್ತಿತರ ಅಧಿಕಾರಿಗಳು ಎಲ್ಲ ಮುಂಜಾಗ್ರತಾ ಕ್ರಮ ನಿರ್ವಹಿಸಬೇಕೆಂದು ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಸೂಚಿಸಿದ್ದಾರೆ

ತರೀಕೆರೆ, ಅಜ್ಜಂಪುರದ 79 ಕೆರೆಗಳಿಗೆ ನೀರು ಹಾಯಿಸುವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಿಂದ ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳ ಸುಮಾರು 79 ಕೆರೆಗಳಿಗೆ ನೀರು ಹರಿಸಲಾಗುತ್ತಿರುವ ಹಿನ್ನಲೆಯಲ್ಲಿ ಯಾವುದೇ ಸಮಸ್ಯೆ ಬಾರದ ರೀತಿ ಎರಡೂ ತಾಲೂಕುಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮತ್ತಿತರ ಅಧಿಕಾರಿಗಳು ಎಲ್ಲ ಮುಂಜಾಗ್ರತಾ ಕ್ರಮ ನಿರ್ವಹಿಸಬೇಕೆಂದು ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಸೂಚಿಸಿದ್ದಾರೆ.

ಶುಕ್ರವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳ 79 ಕೆರೆ ಗಳಿಗೆ ನೀರು ಹಾಯಿಸುವ ಮತ್ತು ಡೆಂಘೀ ಜಾಗೃತಿ ಕಾರ್ಯಕ್ರಮ ಹಿನ್ನಲೆಯಲ್ಲಿ, ತರೀಕೆರೆ ಮತ್ತು ಅಜ್ಜಂಪುರ ತಾಲೂಕು, ಗ್ರಾಪಂ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಲ ಸಂಪನ್ಮೂಲ ಸಚಿವರ ಸೂಚನೆಯಂತೆ ಭದ್ರಾ ಮೇಲ್ದಂಡೆ ಯಿಂದ ತರೀಕೆರೆ , ಅಜ್ಜಂಪುರ ತಾಲೂಕಿನ ಕೆರೆಗಳಿಗೆ ನೀರು ಹಾಯಿಸುವಾಗ ಕೆರೆ ಸುತ್ತಮುತ್ತ ಹಾಗೂ ಯಾವುದೇ ರೀತಿ ಅಪಾಯ ಉಂಟಾಗದಂತೆ ನೋಡಿಕೊಳ್ಳಬೇಕು. ಈ ಕುರಿತು ಎಲ್ಲ ಗ್ರಾಮಗಳ ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಮಾದರಿ ತಾಲೂಕು ಆಗಬೇಕುಃ

ಡೆಂಘೀ ರೋಗದ ಸಂಪೂರ್ಣ ನಿಯಂತ್ರಣಕ್ಕೆ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ಎಲ್ಲ ಗ್ರಾಮ, ಪಟ್ಟಣಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರತಿ ಮನೆಗೆ ತೆರಳಿ ಈ ಬಗ್ಗೆ ಅರಿವು ಮೂಡಿಸಿ, ಮನವರಿಕೆ ಮಾಡಿಕೊಡಬೇಕು. ಲಾರ್ವ ಸಮೀಕ್ಷೆ ನಡೆಸಿ ಲಾರ್ವ ನಾಶ ಪಡಿಸಬೇಕು. ಆ. 6 ರಂದು ಎರಡೂ ತಾಲೂಕಿನ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಆ. 9 ರಂದು ಪಟ್ಟಣ ಪ್ರದೇಶಗಳಲ್ಲಿ ಡೆಂಘೀ ರೋಗ ನಿಯಂತ್ರಣ ಮತ್ತು ಲಾರ್ವ ಸಮೀಕ್ಷೆ ನಡೆಯಬೇಕು. ಐದು ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಭಾಗವಹಿಸಿ, ಎರಡೂ ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡಬೇಕು ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆ ಇ.ಇ.ರವಿಕುಮಾರ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಕಾಲುವೆ ಮೂಲಕ ಏತ ನೀರಾವರಿ ಪ್ಕಾಕೇಜ್ -1 ಕಾಮಗಾರಿಯಿಂದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಬೆಟ್ಟದಾವರೆಕೆರೆ ಪಂಪ್ ಹೌಸ್ ಬಳಿ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತದೆ. ನೀರು ಹರಿಯುವುದರಿಂದ ಯಾವುದೇ ಕೆರೆಗಳಿಗೆ ಹಾನಿಯಾಗಬಾರದು, ಗ್ರಾಮ ಪಂಚಾಯಿತಿಗಳ ಪಿಡಿಒಗಳು ಎಚ್ಚರ ವಹಿಸಬೇಕು. ಅಪಾಯದ ಕೆರೆಗಳ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸಿ ಕೂಡಲೇ ತಿಳಿಸಬೇಕು. ಕೆರೆಗಳ ಸ್ಥಿತಿ-ಗತಿಗಳ ಬಗ್ಗೆ ವರದಿ ಕೊಡಬೇಕು ಎಂದರು.

ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ದೇವೇಂದ್ರಪ್ಪ ಮಾತನಾಡಿ ಯಾವುದೇ ಗ್ರಾಮಗಳಲ್ಲಿ ಕುಡಿವ ನೀರು ಕಲುಷಿತವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಪಟ್ಟಣದ ಎಲ್ಲ ವಾರ್ಡುಗಳಲ್ಲಿ ಲಾರ್ವ ಸಮೀಕ್ಷೆ ನಡೆಸ ಲಾಗುವುದು ಎಂದರು.ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸಿ.ಟಿ.ಯೋಗೀಶ್‌, ತರೀಕೆರೆ, ಅಜ್ಜಂಪುರ ತಾಲೂಕುಗಳ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು,ಆರೋಗ್ಯ ಇಲಾಖೆ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಪಹಿಸಿದ್ದರು.

2ಕೆಟಿಆರ್.ಕೆ.1

ತರೀಕೆರೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳ 79 ಕೆರೆಗಳಿಗೆ ನೀರು ಹಾಯಿಸುವ ಮತ್ತು ಡೆಂಘೀ ಜಾಗೃತಿ ಸಭೆ ಅಧ್ಯಕ್ಷತೆಯನ್ನು ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ವಹಿಸಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ದೇವೇಂದ್ರಪ್ಪ, ಭದ್ರಾ ಮೇಲ್ದಂಡೆ ಯೋಜನೆ ಇಇ ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮತ್ತಿತರರು ಇದ್ದರು.