ಸಾರಾಂಶ
- ಗ್ರಾಮಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಪಕ್ಷ ಸಂಘಟನೆ ಚುರುಕು: ರಾಜ್ಯಾಧ್ಯಕ್ಷ
- - -ಕನ್ನಡಪ್ರಭ ವಾರ್ತೆ ಹರಿಹರ
ಆಗ್ನೇಯ ಪದವೀಧರ ಕ್ಷೇತ್ರಕ್ಕೆ 2026ರಲ್ಲಿ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಜೆಡಿಯು ಅಭ್ಯರ್ಥಿಯಾಗಿ ಡಾ. ಕೆ.ನಾಗರಾಜ್ ಅವರನ್ನು ಘೋಷಣೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರವು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡಿದೆ. ಈಗಾಗಲೇ ಈ ಎಲ್ಲಾ ಜಿಲ್ಲೆಗಳಲ್ಲಿ ಜೆಡಿಯು ಸಿದ್ಧಾಂತಗಳ ಪ್ರಚಾರ ಆರಂಭವಾಗಿದೆ. ಗ್ರಾಮ, ಹೋಬಳಿ ಮತ್ತು ತಾಲೂಕುಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಸಂಘಟನೆ ಚಟುವಟಿಕೆ ಜೋರಾಗಿದೆ ಎಂದರು.
ಇಂದಿನ ರಾಜಕಾರಣಿಗಳ ಮನಸ್ಥಿತಿ ಅಶಾಂತವಾಗಿದೆ. ಸಮಾಜಕ್ಕೆ ಸಮತೋಲನ, ಶುದ್ಧ ಮನಸ್ಸಿನ ಯೋಗ್ಯ ವ್ಯಕ್ತಿಗಳ ಅಗತ್ಯವಿದೆ. ನಮ್ಮ ಪಕ್ಷ ಇಂಥವರನ್ನು ಮುಂದಿರಿಸುತ್ತಿದೆ. ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ಆಡಳಿತದಲ್ಲಿ ಸಾಮರಸ್ಯದ ಸ್ಥಾಪನೆಗಾಗಿ ಜೆಡಿಯು ಕಾರ್ಯ ಚಟುವಟಿಕೆಗಳನ್ನು ರೂಪಿಸಿದೆ. ಚುನಾವಣೆಗೂ ಇದೇ ಹಾದಿ ಅನುಸರಿಸುತ್ತಿದೆ. ಚುನಾವಣೆಯಲ್ಲಿ ಹಣ ಅಥವಾ ಬೇರೆ ಯಾವುದೇ ಆಮಿಷಗಳನ್ನು ಬಳಸದೇ ತಾವು ಈ ಹಿಂದೆ ಒಂದು ಬಾರಿ ಜಯ ಸಾಧಿಸಿದ್ದೆ. ಈ ಬಾರಿಯೂ ಆತ್ಮವಿಶ್ವಾಸದಿಂದ ಸ್ಪರ್ಧೆಗೆ ಸಜ್ಜಾಗುತ್ತೇವೆ ಎಂದು ಹೇಳಿದರು.ಈ ಕಾಲದಲ್ಲಿ ರಾಜಕಾರಣದಲ್ಲಿ ಪೊಜಿಷನ್ ಇದೆ, ಆದರೆ ಪವರ್ ಇಲ್ಲ. ಜೆಡಿಯು ಅಂಥ ರಾಜಕಾರಣಿಗಳನ್ನು ಬೆಳೆಸದೇ ಪವರ್ ಇರುವ ವ್ಯಕ್ತಿಗಳನ್ನು ಪೊಜಿಷನ್‌ಗೆ ತರುತ್ತದೆ ಎಂಬುದರ ಬಗ್ಗೆ ಸ್ಪಷ್ಟ ದೃಷ್ಟಿಯಿದೆ. ಈಗಾಗಲೇ ಕೆಆರ್‌ಎಸ್, ಆಮ್ ಆದ್ಮಿ ಪಾರ್ಟಿ, ವಿವಿಧ ಕನ್ನಡಪರ ಮತ್ತು ದಲಿತ ಸಂಘಟನೆಗಳು ಜೆಡಿಯು ಜೊತೆ ಕೈಜೋಡಿಸುತ್ತಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಹೋರಾಟಗಳಂತೆ ಇಂದಿನ ಪರಿಸ್ಥಿತಿಗೂ ಆಂದೋಲನಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಜೆಡಿಯು ಯುವ ಘಟಕ ರಾಜ್ಯಾಧ್ಯಕ್ಷ ಹಾಗೂ ಪರಿಷತ್ ಅಭ್ಯರ್ಥಿ ಡಾ. ಕೆ.ನಾಗರಾಜ್ ಮಾತನಾಡಿ, 3 ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಕಳೆದ ಚುನಾವಣೆಯಲ್ಲಿ ಕೇವಲ ಅಲ್ಪಮತಗಳ ಅಂತರದಿಂದ ಸೋತಿದ್ದೆ. ಈ ಬಾರಿ ಜೆಡಿಯು ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ ಸ್ಪರ್ಧಿಸುತ್ತಿದ್ದು, ಗೆಲುವಿನ ವಿಶ್ವಾಸವಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಗಂಗೂರ್, ಮುಖಂಡ ಕೆ. ರಂಗನಾಥ್, ದಾವಣಗೆರೆ ಜಿಲ್ಲಾ ಅಧ್ಯಕ್ಷ ಜಯಣ್ಣ, ನೀಲಗಿರಿಯಪ್ಪ, ಶಿವಯೋಗಿ, ಶ್ರೀಶೈಲ ಗೌಡ ಇತರರು ಉಪಸ್ಥಿತರಿದ್ದರು.
- - --03ಎಚ್‌ಆರ್‌ಆರ್03:
ಸುದ್ದಿಗೋಷ್ಠಿಯಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಮಾತನಾಡಿದರು.