ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ತಾಲೂಕಿನ ಕನಸಗೇರಿ ಗ್ರಾಮದ ತೆರೆದ ಬಾವಿ ವಿಚಾರಕ್ಕೆ ಸಂಬಂಧಿಸಿದಂತೆ ಗೋಕಾಕ ಮತಕ್ಷೇತ್ರದ ಪರಾಜಿತ ಅಭ್ಯರ್ಥಿ ಡಾ.ಮಹಾಂತೇಶ ಕಡಾಡಿ ಸುಳ್ಳು ಆರೋಪ ಮಾಡುತ್ತಿರುವುದಾಗಿ ಕನಸಗೇರಿ ಗ್ರಾಮಸ್ಥರು ಶುಕ್ರವಾರ ಆಕ್ರೋಶ ಹೊರಹಾಕಿದರು.ಶಾಸಕ ರಮೇಶ ಜಾರಕಿಹೊಳಿ ಅವರು ಕನಸಗೇರಿ ಗ್ರಾಮದ ತೆರೆದ ಬಾವಿಯನ್ನು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿದ ಹಿನ್ನೆಲೆ ಅರಣ್ಯ ಇಲಾಖೆಯ ಸಹಾಯದಿಂದ ಮುಚ್ಚಿಸುತ್ತಿದ್ದಾರೆ ಎಂದು ಡಾ.ಕಡಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಕಳೆದ 30ಕ್ಕೂ ಅಧಿಕ ವರ್ಷಗಳಿಂದ ಗ್ರಾಮಸ್ಥರು ಈ ತೆರೆದ ಬಾವಿಯನ್ನು ಕುಡಿಯುವ ನೀರು ಮತ್ತು ದಿನ ಬಳಕೆಗೆ ಬಳಸುತ್ತ ಬಂದಿದ್ದಾರೆ. ಶಾಸಕರ ನೇತೃತ್ವದಲ್ಲಿ ಬಾವಿಯನ್ನು ಇನ್ನಷ್ಟು ಆಳವಾಗಿ ಮತ್ತು ಅಗಲವಾಗಿ ಕೊರೆಸುವ ಕಾಮಗಾರಿಯನ್ನು ಗ್ರಾಪಂ ಅಡಿಯಲ್ಲಿ ಮಾಡಲಾಗುತ್ತಿದೆ. ಗ್ರಾಮಸ್ಥರಿಗೆ ಗ್ರಾಮ ಪಂಚಾಯತಿಯಿಂದ ಮನೆ ಮನೆಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ. ಆದರೆ, ಡಾ.ಕಡಾಡಿ ಕ್ಷೇತ್ರದ ಜನರಲ್ಲಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ದ್ವೇಶ ವೈಷಮ್ಯ ಬೆಳೆಸುವಂತೆ ಅಪಪ್ರಚಾರ ಮಾಡುತ್ತಿದ್ದಾರೆ. ಡಾ.ಕಡಾಡಿಯವರು ತಮ್ಮ ಉದ್ಯೋಗವನ್ನು ನೋಡಿಕೊಳ್ಳುವುದು ಒಳ್ಳೆಯದು. ಅದನ್ನು ಬಿಟ್ಟು ಶಾಸಕರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದಲ್ಲಿ ಕನಸಗೇರಿ ಗ್ರಾಮಸ್ಥರೆಲ್ಲರೂ ಸೇರಿ ಡಾ.ಕಡಾಡಿಯವರ ಆಸ್ಪತ್ರೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು. ಶಾಸಕ ರಮೇಶ ಜಾರಕಿಹೊಳಿ ಅವರು ₹1 ಕೋಟಿಗಿಂತಲೂ ಹೆಚ್ಚು ಸರ್ಕಾರದಿಂದ ಅನುದಾನ ತಂದು ಈಗಾಗಲೇ ಕಾಮಗಾರಿಯು ಪ್ರಗತಿಯಲ್ಲಿದೆ. ಅದನ್ನು ಗಮನಿಸದೇ ಡಾ.ಕಡಾಡಿ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸುತ್ತಿರುವುದು ಸರಿಯಲ್ಲ. ಕನಸಗೇರಿ ಗ್ರಾಮಕ್ಕೆ ಡಾ.ಕಡಾಡಿ ಬಂದರೆ ತಕ್ಕ ಉತ್ತರ ನೀಡುತ್ತೇವೆ ಎಂದು ಗ್ರಾಮಸ್ಥರು ಗುಡುಗಿದರು.ಗ್ರಾಮಸ್ಥರಾದ ಮಂಜುನಾಥ ಶಿಂಧಿಗಾರ, ವಿಜಯ ಮಲಕನ್ನವರ, ಲಕ್ಷ್ಮಣ ನಂದಿ, ಲಕ್ಷ್ಮಣ ಕಳ್ಳಿಬುದಿ, ಸಿದ್ದಪ್ಪ ಚೂನಪ್ಪಗೋಳ, ಸತ್ತೆಪ್ಪ ಮಡ್ಡಿಮನಿ, ನಿಂಗಯ್ಯ ತುಕ್ಕಾರ, ಲಕ್ಷ್ಮಣ ಕುರಿಹುಲಿ, ಕೆಂಪಣ್ಣ ಕೊಳವಿ, ಅಶೋಕ ಚೂನಪ್ಪಗೋಳ, ವಿಠ್ಠಲ ಕುರಿಹುಲಿ, ರಂಗಪ್ಪ ಟಗರಿ ಸೇರಿದಂತೆ ಅನೇಕರು ಇದ್ದರು.