ಸಾರಾಂಶ
ಅಖಿಲ ಹವ್ಯಕ ಮಹಾಸಭೆ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ ಆಯ್ಕೆ ಅವರು ಸರ್ವಾನುಮತದಿಂದ 11ನೇ ಬಾರಿಗೆ ಪುನರಾಯ್ಕೆ ಆಗಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಖಿಲ ಹವ್ಯಕ ಮಹಾಸಭೆ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ ಆಯ್ಕೆ ಅವರು ಸರ್ವಾನುಮತದಿಂದ 11ನೇ ಬಾರಿಗೆ ಪುನರಾಯ್ಕೆ ಆಗಿದ್ದಾರೆ. ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆದ ಅಖಿಲ ಹವ್ಯಕ ಮಹಾಸಭೆಯ 82ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಯಿತು.ವಿವಿಧ ಪ್ರಾಂತ್ಯಗಳ 16 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲ 16 ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ನಡೆಯಿತು. ಬಳಿಕ ನಿರ್ದೇಶಕರು ಅಧ್ಯಕ್ಷರನ್ನು ಆಯ್ಕೆ ಮಾಡಿದರು.
ಉಪಾಧ್ಯಕ್ಷರಾಗಿ ಆರ್.ಎಂ.ಹೆಗಡೆ ಬಾಳೆಸರ ಹಾಗೂ ಶ್ರೀಧರ ಜೆ. ಭಟ್ಟ ಕೆಕ್ಕಾರು, ಪ್ರಧಾನ ಕಾರ್ಯದರ್ಶಿಯಾಗಿ ಸಿಎ. ವೇಣುವಿಘ್ನೇಶ ಸಂಪ, ಕಾರ್ಯದರ್ಶಿಯಾಗಿ ಪ್ರಶಾಂತ ಕುಮಾರ ಜಿ.ಭಟ್ಟ ಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಎಸ್.ಭಟ್ ಯಲಹಂಕ ಅವರು ಆಯ್ಕೆಯಾದರು. ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿರುವ 16 ನಾಮಾಂಕಿತ ನಿರ್ದೇಶಕರನ್ನು ಅಧ್ಯಕ್ಷರು ನೇಮಿಸಿ ಆದೇಶಿಸಿದರು.ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಗಿರಿಧರ ಕಜೆ ಮಾತನಾಡಿ, ಹವ್ಯಕ ಸಮಾಜದ ಸಂಸ್ಕೃತಿ-ಸಂಸ್ಕಾರಗಳನ್ನು ಮುಂದಿನ ತಲೆಮಾರಿಗೆ ದಾಟಿಸಲು ಮಹಾಸಭೆಯಿಂದ ನಾಡಿನ ವಿವಿಧ ಪ್ರಾಂತ್ಯಗಳಲ್ಲಿ ‘ಸಂಸ್ಕಾರೋತ್ಸವ’ ಆಯೋಜಿಸಲಾಗುವುದು ಎಂದು ಹೇಳಿದರು.ಜತೆಗೆ ಹವ್ಯಕರು ಪ್ರಮುಖವಾಗಿ ನೆಲೆಸಿರುವ ಶಿವಮೊಗ್ಗ, ಉತ್ತರಕನ್ನಡ, ದಕ್ಷಿಣಕನ್ನಡ, ಕೊಡಗು ಹಾಗೂ ಕಾಸರಗೋಡು ಭಾಗಗಳಲ್ಲಿ ಸ್ಥಳೀಯವಾಗಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂಘಟಿತರಾಗಲು ಪ್ರಯತ್ನ ಪಡಬೇಕಿದ್ದು, ಈ ದಿಶೆಯಲ್ಲಿ ಸಿದ್ದಾಪುರ, ಶಿರಸಿ ಮುಂತಾದ ಪ್ರದೇಶದಲ್ಲಿ ಮಹಾಸಭೆಯ ಪ್ರಾದೇಶಿಕ ಕೇಂದ್ರ ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ ಎಂದರು.