ಸಾರಾಂಶ
ಕುಟುಂಬ ನಮ್ಮ ಬದುಕಿನ ಭದ್ರ ಬುನಾದಿ, ಅದು ಗಟ್ಟಿಯಾಗಿದ್ದರೆ ಎಂಥ ಸಮಸ್ಯೆ, ಸವಾಲುಗಳನ್ನು ಎದುರಿಸುವ ಆತ್ಮಶಕ್ತಿ ಬರುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ಜೀವನದಲ್ಲಿ ವ್ಯಕ್ತಿ ಎಂದೂ ಸ್ವಾರ್ಥಿಯಾಗಬಾರದು, ಕುಟುಂಬವನ್ನು ಎಂದೂ ಮರೆಯಬಾರದು ಎಂದು ಕೆ.ಆರ್. ಆಸ್ಪತ್ರೆಯ ನಿವೃತ್ತ ವೈದ್ಯ ಡಾ. ಲಕ್ಷ್ಮೇಗೌಡ ಹೇಳಿದರು.ಗೆಳೆಯರ ಬಳಗ ಅಭಿವೃದ್ಧಿ ಸಹಕಾರ ಸಂಘದ 3ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕುಟುಂಬ ನಮ್ಮ ಬದುಕಿನ ಭದ್ರ ಬುನಾದಿ, ಅದು ಗಟ್ಟಿಯಾಗಿದ್ದರೆ ಎಂಥ ಸಮಸ್ಯೆ, ಸವಾಲುಗಳನ್ನು ಎದುರಿಸುವ ಆತ್ಮಶಕ್ತಿ ಬರುತ್ತದೆ. ಹಾಗಾಗಿ ತಂದೆ, ತಾಯಿ ಒಡಹುಟ್ಟಿದವರು, ನೆರೆಹೊರೆ ಸಮಾಜವನ್ನು ಎಂದು ಮರೆಯದೆ ಕೃತಜ್ಞರಾಗಿರಬೇಕು ಎಂದು ತಿಳಿಸಿದರು.
ನನ್ನ ವೃತ್ತಿ ಜೀವನದಲ್ಲಿ ವೃತ್ತಿಯನ್ನು ಬಿಟ್ಟು ಬೇರೆ ಯಾವ ಕಡೆ ಗಮನವನ್ನು ಹರಿಸಲಿಲ್ಲ. ಗ್ರಾಮೀಣ ಹಿನ್ನೆಲೆ, ಬಡಕುಟುಂಬದಿಂದ ಬಂದ ನಾನು ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ, ಎಂಬಿಬಿಎಸ್ ಪದವಿಯಲ್ಲಿ ಇಂಗ್ಲಿಷ್ ಓದುವುದು ತೊಡಕಾಗಿದ್ದು ನಿಜ. ಆದರೆ ನನ್ನಲ್ಲಿದ್ದ ಆಸಕ್ತಿ, ಆತ್ಮಸ್ಥೈರ್ಯ, ಸಾಮಾಜಿಕ ಬದ್ಧತೆ ಮತ್ತು ವೈದ್ಯವೃತ್ತಿಯ ಬಗೆಗಿನ ಗೌರವ ಅದಕ್ಕೆ ಎದೆಗುಂದದಿರಲು ಕಾರಣವಾಯಿತು ಎಂದರು.ಹಿಂದುಳಿದ ವರ್ಗದ ವಿದ್ಯಾರ್ಥಿಯಾದ ನಾನು ವ್ಯಾಸಂಗದ ವೇಳೆಯಲ್ಲಿ ಅಧ್ಯಯನ, ಶಿಸ್ತು, ಪರಿಶ್ರಮ, ನಿಷ್ಠೆಯಿಂದ ಅಧ್ಯಯನ ಮಾಡಿದ್ದರಿಂದಲೇ ನನಗೆ ಸರ್ಕಾರಿ ವೈದ್ಯನಾಗಿ ಸೇವೆಸಲ್ಲಿಸುವ ಅವಕಾಶ ದೊರಕಿದ್ದು. ಮಂಡ್ಯ ಜಿಲ್ಲೆಯ ಚಿನಕುರುಳಿಗೆ ನಾನೇ ಮೊಟ್ಟಮೊದಲ ಸರ್ಕಾರಿ ವೈದ್ಯ. ಇಂದು ಅಸಂಖ್ಯಾತ ವೈದ್ಯರನ್ನು ನನ್ನ ತಾಲೂಕು ಹೊಂದಿದೆ ಎಂಬುದು ಹೆಮ್ಮೆಯ ಸಂಗತಿ.
ಸಂಘದ ಅಧ್ಯಕ್ಷ ಡಾ. ವಸಂತ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಡಾ. ಚಂದ್ರಕುಮಾರ್ ಇದ್ದರು.ಸಂಘದ ನಿರ್ದೇಶಕರು ಹಾಗೂ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.
ಡಾ. ಎಚ್.ಆರ್. ತಿಮ್ಮೇಗೌಡ ಅಭಿನಂದನಾ ನುಡಿಗಳನ್ನಾಡಿದರು. ಕಾರ್ಯನಿರ್ವಹಣಾಧಿಕಾರಿ ಕೃಷ್ಣೇಗೌಡ ಸ್ವಾಗತಿಸಿದರು. ಹನುಮಂತೇಗೌಡ ವಂದಿಸಿದರು. ಡಾ.ಟಿ.ಕೆ. ಕೆಂಪೇಗೌಡ ನಿರೂಪಿಸಿದರು. ಸಂಘದ ವರದಿಯನ್ನು ಕಮಲಮೂರ್ತಿ ಮಂಡಿಸಿದರು.