ಡಾ. ಅಂಜಲಿ ಗೆದ್ದು ಜಿಲ್ಲೆಗೆ ಚಿಕಿತ್ಸೆ ನೀಡಲಿ: ರಾಘವೇಶ್ವರ ಶ್ರೀ

| Published : Apr 05 2024, 01:12 AM IST / Updated: Apr 05 2024, 08:51 AM IST

ಡಾ. ಅಂಜಲಿ ಗೆದ್ದು ಜಿಲ್ಲೆಗೆ ಚಿಕಿತ್ಸೆ ನೀಡಲಿ: ರಾಘವೇಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

 ಗೋಕರ್ಣ ಮಠದ ಅಶೋಕೆಯಲ್ಲಿ ಡಾ. ಅಂಜಲಿ ಅವರು ರಾಘವೇಶ್ವರ ಶ್ರೀಗಳನ್ನು ಗುರುವಾರ ಭೇಟಿಯಾದರು.

ಗೋಕರ್ಣ: ಚುಣಾವಣೆಯಲ್ಲಿ ಆರಿಸಿ ಬಂದು ಜಿಲ್ಲೆಗೆ ಚಿಕಿತ್ಸೆ ನೀಡಬೇಕು ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್‌ ಅವರಿಗೆ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಾದ ನೀಡಿದರು.

ಇಲ್ಲಿನ ಮೂಲ ಮಠದ ಅಶೋಕೆಯಲ್ಲಿ ಡಾ. ಅಂಜಲಿ ಅವರು ರಾಘವೇಶ್ವರ ಶ್ರೀಗಳನ್ನು ಗುರುವಾರ ಭೇಟಿಯಾದರು. ಈ ವೇಳೆ ಫಲಪುಷ್ಪ ನೀಡಿ ಗುರುಗೌರವ ಸಲ್ಲಿಸಿದರು. ಶ್ರೀಗಳು ಕೆಲಹೊತ್ತು ಚುನಾವಣೆ ಹಾಗೂ ಜಿಲ್ಲೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. ಕೊನೆಯಲ್ಲಿ ಡಾ. ಅಂಜಲಿ ಅವರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ ಅವರು, ಮನಃಪೂರ್ವಕವಾಗಿ ಆಶೀರ್ವದಿಸುವೆ. ಗೆದ್ದುಬಂದರೆ ತಮ್ಮಿಂದ ಕ್ಷೇತ್ರಕ್ಕೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಮತ್ತವರ ಕುಟುಂಬ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್, ಜಿಪಂ ಮಾಜಿ ಸದಸ್ಯ ಪ್ರದೀಪ್ ನಾಯಕ ದೇವರಭಾವಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಮತ್ತಿತರು ಉಪಸ್ಥಿತರಿದ್ದರು.

ಕಾರ್ಯಕರ್ತರ ಜತೆ ಡಾ. ಅಂಜಲಿ ಮಾತುಕತೆ

ಗೋಕರ್ಣ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರದೀಪ್ ನಾಯಕ ದೇವರಬಾವಿ ಅವರ ನಿವಾಸಕ್ಕೆ ಗುರುವಾರ ಭೇಟಿ ನೀಡಿ ನೂರಾರು ಕಾರ್ಯಕರ್ತರ ಜತೆ ಮಾತುಕತೆ ನಡೆಸಿದರು.

ಸ್ಥಳೀಯ ಹಲವು ನಾಯಕರು, ಕಾರ್ಯಕರ್ತರು ಡಾ. ಅಂಜಲಿ ನಿಂಬಾಳ್ಕರ್ ಅವರ ಭೇಟಿಗೆ ಮುಗಿಬಿದ್ದರು. ಡಾ. ಅಂಜಲಿ ಅವರು ಎಲ್ಲ ನಾಯಕರು, ಕಾರ್ಯಕರ್ತರನ್ನೂ ಒಬ್ಬೊಬ್ಬರಂತೆ ಭೇಟಿಯಾಗಿ, ಅವರ ಸಲಹೆ- ಸೂಚನೆಗಳನ್ನು ಕೇಳಿದರು. ಜೆಡಿಎಸ್‌ನಿಂದಲೂ ಅನೇಕ ಮುಖಂಡರು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಬಾರಿ ಅಂಜಲಿಯವರನ್ನು ಗೆಲ್ಲಿಸಿಕೊಡುವುದಾಗಿ ಭರವಸೆ ನೀಡಿದರು.

ಪ್ರದೀಪ್ ನಾಯಕ ಅವರು ಪ್ರತಿ ನಾಯಕರು, ಕಾರ್ಯಕರ್ತರನ್ನು ಡಾ. ಅಂಜಲಿ ಅವರಿಗೆ ಪರಿಚಯ ಮಾಡಿಕೊಟ್ಟರು. ಸ್ಥಳೀಯ ನಾಯಕರೊಂದಿಗೆ ಪ್ರದೀಪ ಅವರ ಮನೆಯಲ್ಲೇ ಉಪಾಹಾರ ಸೇವಿಸಿ ಡಾ. ಅಂಜಲಿ ನಿರ್ಗಮಿಸಿದರು.ಈ ವೇಳೆ ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರತ್ನಾಕರ್ ನಾಯ್ಕ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೃಷ್ಣಾನಂದ ವೆರ್ಣೇಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್, ಕೆಪಿಸಿಸಿ ಸದಸ್ಯ ನಿವೇದಿತ್ ಆಳ್ವಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.