ಸಸ್ಯ ವಿಜ್ಞಾನಿ ಡಾ.ಎಂ.ಎಚ್.ಮರೀಗೌಡರಿಗೆ ನೋಬಲ್ ಪ್ರಶಸ್ತಿಯೇ ಸಿಗಬೇಕಿತ್ತು, ಆದರೆ, ಭೌತಶಾಸ್ತ್ರ, ರಸಾಯನಶಾಸ್ತ್ರ, ಶರೀರಶಾಸ್ತ್ರ ಅಥವಾ ವೈದ್ಯಕೀಯ, ಸಾಹಿತ್ಯ, ಶಾಂತಿ ಮತ್ತು ೧೯೬೮ ರಲ್ಲಿ ಸೇರಿಸಲಾದ ಅರ್ಥಶಾಸ್ತ್ರಕ್ಕೆ ಮಾತ್ರ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ, ಇನ್ನಾದರೂ ಕೇಂದ್ರ ಅರಿಗೆ ಮರಣೋತ್ತರ ಭಾರತ ರತ್ನ ನೀಡಿ ಪುರಸ್ಕರಿಸಲಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತದ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರೀಗೌಡ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ನಂಜಮ್ಮ ಮೋಟೇಗೌಡ ಚಾರಿಟಬಲ್ ಮತ್ತು ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಒತ್ತಾಯಿಸಿದರು.

ತಾಲೂಕಿನ ಮಂಗಲ ಗ್ರಾಮ ಸಮೀಪವಿರುವ ರಾಜ್ ತೋಟಗಾರಿಕೆ ವನದಲ್ಲಿ ಆಯೋಜಿಸಿದ್ದ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರೀಗೌಡ ಪ್ರಶಸ್ತಿ ಪ್ರದಾನ ಮತ್ತು ತೋಟಗಾರಿಕೆಯಲ್ಲಿ ಸಮಗ್ರ ಮಿಶ್ರಬೆಳೆ ಪದ್ಧತಿ ವೀಕ್ಷಣೆಗೆ ಚಾಲನೆ ನೀಡಿ ಮಾತನಾಡಿದರು.

ಸಸ್ಯ ವಿಜ್ಞಾನಿ ಡಾ.ಎಂ.ಎಚ್.ಮರೀಗೌಡರಿಗೆ ನೋಬಲ್ ಪ್ರಶಸ್ತಿಯೇ ಸಿಗಬೇಕಿತ್ತು, ಆದರೆ, ಭೌತಶಾಸ್ತ್ರ, ರಸಾಯನಶಾಸ್ತ್ರ, ಶರೀರಶಾಸ್ತ್ರ ಅಥವಾ ವೈದ್ಯಕೀಯ, ಸಾಹಿತ್ಯ, ಶಾಂತಿ ಮತ್ತು ೧೯೬೮ ರಲ್ಲಿ ಸೇರಿಸಲಾದ ಅರ್ಥಶಾಸ್ತ್ರಕ್ಕೆ ಮಾತ್ರ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ, ಇನ್ನಾದರೂ ಕೇಂದ್ರ ಸರ್ಕಾರ ಇವರಿಗೆ ಮರಣೋತ್ತರವಾಗಿಯಾದರೂ ಭಾರತ ರತ್ನ ನೀಡಿ ಪುರಸ್ಕರಿಸಲಿ ಎಂದರು.

ಕರ್ನಾಟಕದ ಹಲವೆಡೆ ತೋಟಗಾರಿಕೆಯ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದೂರದೃಷ್ಟಿಯುಳ್ಳ ಅಧಿಕಾರಿಯಾಗಿದ್ದರು. ೧೯೫೧ರಲ್ಲಿ ಮೈಸೂರಿನಲ್ಲಿ ‘ತೋಟಗಾರಿಕೆ ಅಧೀಕ್ಷಕ’ರಾಗಿ ಅಧಿಕಾರ ವಹಿಸಿಕೊಂಡು, ಲಾಲ್‌ಬಾಗ್ ಸೇರಿದಂತೆ ರಾಜ್ಯಾದ್ಯಂತ ತೋಟಗಾರಿಕೆ ಶಿಕ್ಷಣ, ಸಂಶೋಧನೆ ಮತ್ತು ರೈತರ ಅಭಿವೃದ್ಧಿಗೆ ಮಹತ್ವದ ಕಾರ್ಯಗಳನ್ನು ಕೈಗೊಂಡರು ಎಂದು ಸ್ಮರಿಸಿದರು.

ಇಂದಿನ ಯುವಜನತೆ ಕೃಷಿ ಮತ್ತು ತೋಟಗಾರಿಕೆಯನ್ನು ಕಡೆಗಣಿಸುತ್ತಿರುವ ದಿನಗಳಲ್ಲಿ ಗ್ರಾಮೀಣ ಭಾಗದ ಟಿ.ಎನ್.ರಕ್ಷಿತ್‌ರಾಜ್ ಸಾವಯವ ಕೃಷಿಕನಾಗಿ, ಬಹುಮಿಶ್ರಿತ ತೋಟಗಾರಿಕೆ ಬೆಳೆ ಬೆಳೆದು ಮಾದರಿಯಾಗಿ, ಕೃಷಿ ಇಲಾಖೆಯಿಂದ ಪ್ರಶಸ್ತಿ ಪಡೆದಿರುವುದು ಮೆಚ್ಚುಗೆಯ ಸಂಗತಿ ಎಂದರು.

ಶಂಕರಗೌಡ ಬಿ.ಇಡಿ ಕಾಲೇಜು ಪ್ರಾಂಶುಪಾಲೆ ಡಾ.ವಿ.ಡಿ.ಸುವರ್ಣ ಅಭಿನಂದನಾ ನುಡಿಗಳನ್ನಾಡಿದರು. ಗಣ್ಯರ ಸಮ್ಮುಖದಲ್ಲಿ ಸಾವಯವ ಕೃಷಿಕ ರಕ್ಷಿತ್‌ರಾಜ್ ಅವರಿಗೆ ಡಾ.ಎಂ.ಎಚ್.ಮರೀಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಾಯಕರಿಂದ ಗಾಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಎಚ್.ಮಾದೇಗೌಡ, ಎರಡನೇ ಉಪರಾಜ್ಯಪಾಲ ಚಂದ್ರಶೇಖರ್, ಪ್ರತಿಭಾಂಜಲಿ ಪ್ರೊ.ಡೇವಿಡ್, ಶಿಕ್ಷಕ ಕೆ.ಆರ್.ಶಶಿಧರ್ ಈಚಗೆರೆ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ರಕ್ತದಾನಿ ಎಂ.ಸಿ.ಲಂಕೇಶ್, ಪ್ರೊ.ರಮೇಶ್, ಲೋಕೇಶ್, ಕುಮಾರ್ ನೆಲದನಿ ಅಲಯನ್ಸ್ ಮತ್ತು ಕೌಶಲ್ಯ ಅಲಯನ್ಸ್ ಸಂಸ್ಥೆ ಪದಾಧಿಕಾರಿಗಳು ಹಾಜರಿದ್ದರು.