ಡಾ.ಮೊಹಸಿನ್ ಖಾನ್ ಸಿತಾರ್‌ಗೆ ಮನಸೋತ ಕಲಾಭಿಮಾನಿಗಳು

| Published : Jan 10 2025, 12:47 AM IST

ಡಾ.ಮೊಹಸಿನ್ ಖಾನ್ ಸಿತಾರ್‌ಗೆ ಮನಸೋತ ಕಲಾಭಿಮಾನಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಧಾರವಾಡದ ಉಸ್ತಾದ್ ಡಾ.ಮೊಹಸಿನ್ ಖಾನ್ ತಂಡದ ಸಿತಾರ್ ವಾದನ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಉಸ್ತಾದ್ ಹಮೀದ್ ಖಾನ್ ಸ್ಮರಣಾರ್ಥ ಪುತ್ರ ಮೊಹಸಿನ್ ಖಾನ್ ಕಳೆದ ಮೂರು ವರ್ಷಗಳಿಂದ ರಾಜ್ಯಾದ್ಯಂತ ಸಿತಾರ್ ಮಾಧುರ್ಯ ಕಾರ್ಯಕ್ರಮ ಆಯೋಜಿಸಿ ಸಂಗೀತ ಪ್ರಿಯರಿಗೆ ಸಂಗೀತ ರಸದೌತಣ ನೀಡುತ್ತಿರುವುದು ಉತ್ತಮ ಕೆಲಸ ಎಂದು ರಂಗಕರ್ಮಿ ಚಿತ್ರಾ ವೆಂಕಟರಾಜು ಹೇಳಿದರು.

ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ನಗರ ಶಾಂತಲಾ ಕಲಾವಿದರ ಸಂಸ್ಥೆಗೆ ೫೦ ವಸಂತಗಳು ಮತ್ತು ಬೆಂಗಳೂರಿನ ರಂಗಶಂಕರಕ್ಕೆ ೨೦ ವರ್ಷ ಪೂರೈಸಿರುವ ಸಂದರ್ಭದಲ್ಲಿ ಎರಡೂ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಟಕೋತ್ಸವ, ರಂಗ ಕಲಿಕಾ ಕಾರ್ಯಾಗಾರ, ಛಾಯಾಚಿತ್ರ ಪ್ರದರ್ಶನ, ಸಾಂಸ್ಕೃತಿಕ ಹಾಗೂ ಜನಪದ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಧಾರವಾಡದ ಉಸ್ತಾದ್ ಡಾ.ಮೊಹಸಿನ್ ಖಾನ್ ತಂಡದ ಸಿತಾರ್ ವಾದನದ ಮಾಧುರ್ಯಕ್ಕೆ ಕಲಾಭಿಮಾನಿಗಳು ಮನಸೋತರು. ಸಿತಾರ್‌ನಲ್ಲಿ ಮೊಹಸಿನ್ ಖಾನ್, ನೂರ್ ಜಹಾನ್ ನದಾಫ್, ಶೃತಿ ಅಚ್ಯುತ್, ಗಾಮಣ್ಣ ಹುಲಿಕಟ್ಟೆ, ಅನಂತ್ ಹೆಗಡೆ, ಯಶಸ್ವಿನಿ ಪತ್ತಾರ್, ವಯಲಿನ್‌ನಲ್ಲಿ ಪಂಡಿತ್ ಚಿನ್ನಯ್ ನಾಗಣ್ಣನವರ್, ಬಸನಗೌಡ ತಬಲಾದಲ್ಲಿ ಪಾಟೀಲ್ ಮೋಡಿ ಮಾಡಿದರು.

ಶೃತಿ, ಲಯ, ತಾಳ ತಪ್ಪದ ಸಿತಾರ್, ವಯಲಿನ್, ತಬಲ ಜುಗಲ್ ಬಂಧಿಯಲ್ಲಿ ಭಾಗ್ಯದ ಲಕ್ಷ್ಮಿ ಬಾರಮ್ಮ, ಪುಟ್ಟರಾಜ ಗವಾಯಿಗಳ ವಚನ ಇತರ ಹಾಡುಗಳು ಸಿತಾರ್‌ನಲ್ಲಿ ಮೂಡಿಸಿ ಸಂಗೀತ ಲೋಕದಲ್ಲಿ ತೇಲುವಂತೆ ಮಾಡಿತು.

ಜನಮನ ಗೆದ್ದ ೬ ದಿನದ ಕಾರ್ಯಕ್ರಮ:

ನಾಟಕೋತ್ಸವದ ಕೊನೆಯ ದಿನ ಬೆಂಗಳೂರಿನ ಜಂಗಮ ಕಲೆಕ್ಟಿವ್ ತಂಡದ ಕೆ.ಪಿ.ಲಕ್ಷ್ಮಣ್ ರಚನೆ ಹಾಗೂ ನಿರ್ದೇಶನದ ಬಾಬ್ ಮಾರ್ಲಿ ಪ್ರಂ ಕೋಡಿಹಳ್ಳಿ ನಾಟಕಕ್ಕೆ ರಂಗಾಸಕ್ತರಿಂದ ಉತ್ತಮ ಸ್ಪಂದನ ವ್ಯಕ್ತವಾಯಿತು. ಮೊದಲ ದಿನ ನಾದಸ್ವರದಿಂದ ಆರಂಭಗೊಂಡು ಮೂಡಪಾಯ ಹಾಡುಗಳು, ಕ್ರಮವಾಗಿ ಯಕ್ಷಗಾನದ ಮಾದೇಶ್ವರ, ಮಂಟೇಸ್ವಾಮಿ, ಬಿಳಿಗಿರಿರಂಗನ ಜನಪದ ಕಾವ್ಯ ಗಾಯನ, ಡೊಳ್ಳುಕುಣಿತ, ಬೀಸು ಕಂಸಾಳೆ ಕಣ್ಮನ ಸೆಳೆಯಿತು. ಅಶ್ವಘೋಷ, ಸುಡುಗಾಡು ಸಂಘ, ಬೆತ್ತಲಾಟ, ಡೋರ್ ನಂ-೮, ಬಹುಮುಖಿ ನಾಟಕಗಳಿಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಜ.೪ ರಿಂದ ೮ರವರೆಗೆ ನಗರದ ಜೆಎಸ್‌ಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ರಂಗ ಕಲಿಕಾ ಶಿಬಿರ ನಡೆಯಿತು.